ಪುತ್ತೂರು: ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ವೃದ್ಧೆಯೋರ್ವರನ್ನು ಮನೆಯೊಳಗಡೆ ಕೊಲೆ ಮಾಡಲಾಗಿದ್ದು ಕೈಕಾಲು ಕಟ್ಟಿ ಹಾಕಲಾಗಿದ್ದ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ಹಾರಾಡಿ ಕಾರಡ್ಕದಲ್ಲಿರುವ ಬಾಡಿಗೆ ಮನೆಯಲ್ಲಿ ಗುರುವಾರ ಶವ ಪತ್ತೆಯಾಗಿದೆ.
ಹಾರಾಡಿಯ ಕಾರಡ್ಕದ ಬಾಡಿಗೆ ಮನೆಯಲ್ಲಿರುವ ದಿ.ಕೃಷ್ಣ ಮೂರ್ತಿಯವರ ಪತ್ನಿ ವಿನೋದಿನಿ(77.ವ)ಕೊಲೆಯಾದವರು. ಹಾರಾಡಿಯ ಕಾರಡ್ಕದಲ್ಲಿರುವ ಗೋಪಿನಾಥ್ ರವರ ಮಾಲಕತ್ವದ ಬಾಡಿಗೆ ಮನೆಯಲ್ಲಿ ಮಗಳ ಮದುವೆ ಬಳಿಕ ಒಬ್ಬಂಟಿಯಾಗಿಯೇ ಇದ್ದ ಇವರು ತನ್ನ ಪಾಡಿಗೆ ತಾನಿದ್ದರು. ಅದರ ಇನ್ನೊಂದು ಪಾರ್ಶ್ವದಲ್ಲಿ ರಾಮಯ್ಯ ಬಲ್ಲಾಲ್ ರವರು ಮನೆಯವರೊಂದಿಗೆ ಹೊರ ಹೋದವರು ಡಿ.22ರಿಂದು ಮರಳಿದ್ದರು. ಈ ವೇಳೆ ವಿನೋದಿನಿಯವರ ಕೊಠಡಿ ಬೀಗ ಹಾಕಿದ ಸ್ಥಿತಿಯಲ್ಲೇ ಇದ್ದು, ಅವರು ಸಂಬಂಧಿಕರ ಮನೆಗೆ ತೆರಳಿರಬೇಕೆಂದು ಅವರು ಗ್ರಹಿಸಿದ್ದರು. ಆದರೆ ಅವರ ಕೊಠಡಿಯಿಂದ ಏನೋ ದುರ್ವಾಸನೆ ಬರುತ್ತಿರುವುದಾಗಿ ಪುತ್ತೂರು ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲಿನಿ ಬೀಗ ಮುರಿದು ಒಳ ಪ್ರವೇಶಿಸಿ ನೋಡಿದಾಗ ವಿನೋದಿನಿಯವರ ಮೃತದೇಹ ಕೈಕಾಲು ಕಟ್ಟಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿ ಮನೆ ಮಾಲಿಕ ಗೋಪಿನಾಥ್ ರವರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎ.ಎಸ್ಪಿ ರಿಷ್ಯಂತ್ ಸಿ.ಬಿ, ಪುತ್ತೂರು ನಗರ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಅಪರಾಧ ಪತ್ತೆ ವಿಭಾಗದ ಎಸ್.ಐ ವೆಂಕಟೇಶ್ ಭಟ್, ಎ.ಎಸ್.ಐ ದುಗ್ಗಪ್ಪ, ಪ್ರೊಬೆಷನರ್ ಎಸ್.ಐ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಮೃತ ದೇಹವನ್ನು ಉನ್ನತ ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.