ಬೆಳ್ತಂಗಡಿ: ಡಿಜಿಟಲ್ ಇಂಡಿಯಾ ಸಾಕಾರಗೊಳಿಸಿಕೊಳ್ಳಲು ಭಾರತ ಸಂಚಾರ ನಿಗಮಕ್ಕೆ ಊರವರೇ ಸಹಕರಿಸಿ ಅಂತರ್ಜಾಲ ಸಂಪರ್ಕ ಪಡೆದುಕೊಂಡಿರುವ ವಿದ್ಯಮಾನ ಪಿಲ್ಯ ಹಾಗೂ ನಾಲ್ಕೂರು ಗ್ರಾಮದಲ್ಲಿ ನಡೆದಿದೆ.
ಅಳದಂಗಡಿ ಗ್ರಾ.ಪಂ ವ್ಯಾಪ್ತಿಯ ಪಿಲ್ಯ ಗ್ರಾಮದಲ್ಲಿ ಅಳದಂಗಡಿಯಿಂದ ಸೂಳಬೆಟ್ಟು ಎಂಬಲ್ಲಿಗೆ 3 ಕಿ.ಮೀ ದೂರವಿದೆ. ಅಳದಂಗಡಿ ಬಿಎಸ್ಎನ್ಎಲ್ ನವರು ಸೂಳಬೆಟ್ಟು ಗ್ರಾಮದ ಅನೇಕ ಮನೆಗಳಿಗೆ ದೂರವಾಣಿ ಸಂಪರ್ಕವನ್ನು ಹಲವಾರು ವರ್ಷಗಳ ಹಿಂದೆಯೇ ನೀಡಿದ್ದರು. ಆದರೆ ಸುಮಾರು 5 ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿ ಆದಾಗ ರಸ್ತೆಯ ಬದಿಯಲ್ಲಿ ಹಾಕಿದ್ದ ಪೋನ್ ಕೇಬಲ್ ಗಳೆಲ್ಲ ತುಂಡಾಗಿ ಅಸ್ತವ್ಯಸ್ತವಾಗಿತ್ತು. ಆದರೂ ನಿಗಮದ ಸಿಬ್ಬಂದಿಗಳು ಅದನ್ನು ಒಟ್ಟು ಗೂಡಿಸಿ ಸಂಪರ್ಕ ಕೊಟ್ಟಿದ್ದರಾದರು ದೂರವಾಣಿ ಸಂಪರ್ಕ ಆಗ್ಗಾಗ್ಗೆ ಕೆಡುತ್ತಿತ್ತು. ಇಂಟರ್ನೆಟ್ ಸಂಪರ್ಕವಂತೂ ಸಿಗುತ್ತಲೇ ಇರಲಿಲ್ಲ. ಅಳದಂಗಡಿಯಲ್ಲಿ ನಿಗಮದ ಚರದೂರವಾಣಿಯ ಗೋಪುರ (ಟವರ್) ಇದ್ದರೂ ಸಂಕೇತಗಳು ಸ್ಪಷ್ಟವಾಗಿ ದೊರೆಯುತ್ತಿರಲಿಲ್ಲ. ಸ್ಮಾರ್ಟ್ ಫೋನ್ ಹೊಂದಿರುವ ಗ್ರಾಮಸ್ಥರು ಇದರಿಂದ ರೋಸಿ ಹೋಗಿದ್ದರು.
ಗ್ರಾಮದ ನಿವಾಸಿಯಾದ ಪ್ರವೀಣ್ ಚಂದ್ರ ಮೆಹೆಂದಳೆ ಅವರು ಇದಕ್ಕೆ ನೇತೃತ್ವ ವಹಿಸಿ ಫಲಾನುಭವಿಗಳನ್ನು ಸಂಘಟಿಸಿ ಮೂರು ಕಿ.ಮೀ ತನಕ ಜೆಸಿಬಿ ಮೂಲಕ ಚರಂಡಿಯನ್ನು ಮಾಡಿಸಿ ನಿಗಮದವರಿಗೆ ಹೊಸ ಕೇಬಲ್ ಹಾಕಲು ಅನುವುಮಾಡಿಕೊಟ್ಟಿದ್ದಾರೆ. ಸೂಳಬೆಟ್ಟು ಊರಿನ 15 ಮಂದಿ ಆಸಕ್ತರು ನಾಲ್ಕು ದಿನಗಳ ಕಾಲ ರೂ. 48,000 ಖರ್ಚು ಮಾಡಿ ಜೆಸಿಬಿ ಮೂಲಕ ಕಣಿ ತೋಡಿಸಿದ್ದಾರೆ. ಇದೀಗ ಅಳದಂಗಡಿಯಿಂದ ಸೂಳಬೆಟು ತನಕ ಬಿಎಸ್ಎನ್ಎಲ್ ನವರು ಹೊಸ ಕೇಬಲ್ ಹಾಕಿರುವುದರಿಂದ ಫೋನ್ ಸಂಪರ್ಕ ಶುದ್ಧವಾಗಿದ್ದು ಅಂತರ್ಜಾಲ ಸಂಪರ್ಕ ಸಕತ್ ಸ್ಪೀಡ್ ನಲ್ಲಿದೆ. ಕಾಮಗಾರಿಗೆ ದೇಣಿಗೆ ನೀಡಿದ ಗ್ರಾಹಕರು ಹೊಸ ಫೋನ್, ಮೋಡೆಮ್ ಖರೀದಿಸಿ ಹಣಕಾಸು ವ್ಯವಹಾರಗಳನ್ನು ಮನೆಯಲ್ಲೇ ಕುಳಿತು ನಿರ್ವಹಿಸುವ ಸಿದ್ಧತೆಯಲ್ಲಿದ್ದಾರೆ.