ಸುಳ್ಯ: ಆಕಸ್ಮಿಕವಾಗಿ ಕಾಡಿನಲ್ಲಿ ಸಿಲುಕಿ ಹೋದರೆ ಹೇಗೆ ಜೀವಂತವಾಗಿ ಹೊರ ಬರಬಹುದು, ಪಾಕೃತಿಕ ವಿಪತ್ತು ಸಂಭವಿಸಿದರೆ ತಾನು ಬದುಕುವುದರ ಜೊತೆಗೆ ಇತರರನ್ನೂ ಹೇಗೆ ಬದುಕಿಸಬಹುದು ಎಂಬ ಜೀವನ ಪಾಠವನ್ನು ವಿದ್ಯಾರ್ಥಿಗಳಿಗೆ ಬೋದಿಸಿದ ತರಬೇತಿ ಶಿಬಿರ ಸಮಾಪನಗೊಂಡಿತು.
ಸುಳ್ಯ ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ದ.ಕ.ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ನಡೆದ ಶಿಬಿರ`ಕಾಡಿನಲ್ಲಿ ಬದುಕಿ ಉಳಿಯುವ ಮತ್ತು ವಿಪತ್ತು ನಿರ್ವಹಣೆಯ ಪಾಠವನ್ನು ಕಲಿಸುವ ನೂತನ ಪ್ರಯೋಗವನ್ನು ನಡೆಸಲಾಯಿತು. ಕಾಡಿನಲ್ಲಿ ಸಿಲುಕಿ ಹೋದರೆ ಆಹಾರ, ನೀರು ಮತ್ತಿತರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದರ ಬಗ್ಗೆ ತಿಳಿಸಿಕೊಡಲಾಯಿತು.
ಕಡು ಬೇಸಿಗೆಯಲ್ಲಿ ಒಂದು ಹನಿ ನೀರೂ ಸಿಗದ ಪರಿಸ್ಥಿತಿಯಲ್ಲಿ ಕಾಡಿನಲ್ಲಿ ಸಿಲುಕಿದರೆ ನೀರು ಕಂಡು ಹುಡುಕಲು ಸುಲಭ ಉಪಾಯ ಪ್ರಾಣಿಗಳ ಹೆಜ್ಜೆ ಗುರುತನ್ನು ಹಿಂಬಾಲಿಸುವುದು. ಪ್ರಾಣಿಗಳು ನೀರನ್ನು ಹುಡುಕಿ ಸಾಗುವುದು ನಿಶ್ಚಿತ, ಈ ನಿಟ್ಟಿನಲ್ಲಿ ಇವುಗಳ ಹೆಜ್ಜೆ ಗುರುತು ಹಿಡಿದು ಸಾಗಿದರೆ ನೀರು ಸಿಗಬಹುದು, ಗೆಡ್ಡೆ, ಗೆಣಸು ಮತ್ತಿತರ ಪ್ರಾಕೃತಿಕ ಆಹಾರ ವಸ್ತುಗಳನ್ನು ತಿನ್ನುವುದರ ಜೊತೆಗೆ ಸುರಕ್ಷಿತವಾಗಿ ಉಳಿದುಕೊಳ್ಳಲು ಪ್ರಾಕೃತಿಕ ವಸ್ತುಗಳನ್ನು ಬಳಸಿ ವಸತಿ ನಿರ್ಮಾಣದ ಬಗ್ಗೆ, ಮರ, ಕಲ್ಲು, ಗುಡ್ಡಗಳನ್ನು ಹತ್ತುವ ಬಗ್ಗೆ ತರಬೇತಿ ನೀಡಲಾಯಿತು. ಸೂರ್ಯನ ಕಿರಣಗಳನ್ನು ಮತ್ತು ಸ್ವಂತ ನೆರಳಿನ ಸಹಾಯದಿಂದ ದಿಕ್ಕನ್ನು ಗುರುತಿಸಿ ಕಾಡಿನಿಂದ ಹೊರ ಬರುವುದರ ಬಗ್ಗೆ ತಿಳಿಸಿಕೊಡಲಾಯಿತು. ಅಲ್ಲದೆ ಕಾಡಿನಲ್ಲಿ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳೂವ ತಂತ್ರವನ್ನೂ ತಿಳಿಸಿಕೊಡಲಾಯಿತು. ಕೋಳಿಕ್ಕಮಲೆ ಬೆಟ್ಟಕ್ಕೆ ಟ್ರಕ್ಕಿಂಗ್ ಮೂಲಕ ತೆರಳಿ ಅಲ್ಲಿ ಕಾಡಿನಲ್ಲಿ ಬದುಕಿ ಉಳಿಯುವ ಬಗ್ಗೆ ತರಬೇತಿಯನ್ನು ನೀಡಲಾಯಿತು. ಅಲ್ಲದೆ ದೈಹಿಕ ಕ್ಷಮತೆಯ ಬಗ್ಗೆ ವಿಶೇಷ ಗಮನ ನೀಡಲಾಯಿತು. ಮುಂಜಾನೆ 4.30 ರಿಂದ 7.30ರ ತನಕ ದೈಹಿಕ ಕ್ಷಮತಾ ತರಬೇತಿಯನ್ನು ನೀಡಲಾಯಿತು.
ವಿಪತ್ತು ಸಂಭಸಿದಾಗ ಅದನ್ನು ನಿಭಾಯಿಸುವ ಬಗ್ಗೆ, ತಾನು ಸುರಕ್ಷಿತವಾಗಿ ಹೊರ ಬರುವ ಬಗ್ಗೆ ಮತ್ತು ಇತರರನ್ನು ರಕ್ಷಿಸಲು ನಡೆಸಬೇಕಾದ ಪ್ರಯತ್ನದ ಬಗ್ಗೆ ತರಬೇತಿ ನೀಡಲಾಯಿತು. ವಿಪತ್ತು ಸಂಭವಿಸಿದಾಗ ನೀಡಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆ, ವಿಪತ್ತಿನಲ್ಲಿ ಸಿಲುಕಿದವರನ್ನು ಸಾಗಿಸುವ ಬಗ್ಗೆ ತರಬೇತಿ ನೀಡಲಾಯಿತು. ಅಗ್ನಿ ಆಕಸ್ಮಿಕ ಉಂಟಾದಾಗ ನೀರು, ಒದ್ದೆಯಾದ ಗೋಣಿಚೀಲ, ಮರಳು, ಹಸಿರು ಸೊಪ್ಪು ಮತ್ತಿತರ ವಸ್ತುಗಳನ್ನು ಬಳಸಿ ಯಾವ ರೀತಿ ಬೆಂಕಿ ನಂದಿಸಬಹುದು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು. ಅಲ್ಲದೆ ದೊಡ್ಡ ಕಟ್ಟಡಗಳಲ್ಲಿ, ಮನೆಗಳಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದಾಗ ಹೊರ ಬರುವ ಬಗ್ಗೆ ಮತ್ತು ಇತರರನ್ನು ಹೊರ ತರುವ ವಿಧಾನದ ಬಗ್ಗೆ, ಹಗ್ಗ ಅಥವಾ ಸಾಂದರ್ಭಿಕವಾಗಿ ದೊರೆಯುವ ಪ್ರಾಕೃತಿಕ ವಸ್ತುಗಳನ್ನು ಬಳಸಿ ಕಟ್ಟಡಗಳು, ಗುಡ್ಡ, ಮರ, ಕಲ್ಲುಗಳ ಮೇಲೆ ಏರಿ ವಿಪತ್ತನ್ನು ನಿಭಾಯಿಸುವ ತಂತ್ರವನ್ನು ಕಲಿಸಲಾಯಿತು. ಅಲ್ಲದೆ ರಸ್ತೆ ಅಪಘಾತ ಉಂಟಾದಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ, ವಾಹನ ಚಲಾವಣೆ ಮಾಡುವಾಗ ಮೊಬೈಲ್ ಬಳಸುವುದರಿಂದ ಉಂಟಾಗುವ ಅಪಘಾತದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಪ್ರಾಕೃತಿಕ ವಿಪತ್ತಿನಲ್ಲಿ ಮರಣ ಸಂಭವಿಸಿದರೆ ನಿರ್ವಹಿಸಬೇಕಾದ ರೀತಿಯನ್ನೂ ವಿವರಿಸಲಾಯಿತು.
ಸುಳ್ಯದ ಅಗ್ನಿ ಶಾಮಕ ದಳದ ಸಹಕಾರದಲ್ಲಿ ಬೆಂಕಿ ಆಕಸ್ಮಿಕವನ್ನು ನಿಭಾಯಿಸುವ ಬಗ್ಗೆ ತರಬೇತಿ ನೀಡಲಾಯಿತು. ಕಾಲೇಜು ಗ್ರೌಂಡ್ ನಲ್ಲಿ ನಿರ್ಮಿಸಿದ ಮನೆಗೆ ಬೆಂಕಿ ಬೀಳುವ ಪ್ರಸಂಗವನ್ನು ಸೃಷ್ಠಿಸಿ ಅದನ್ನು ನಂದಿಸುವ ವಿಧಾನವನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಯಿತು.
ಪ್ರಧಾನ ತರಬೇತುದಾರರಾಗಿ ಸಂತೋಷ್ ಪೀಟರ್ ಡಿಸೋಜ, ವೇಣು ಶರ್ಮ, ನಿತಿನ್, ವಿನಯ ಭಾರದ್ವಾಜ್ ತರಬೇತುದಾರರಾಗಿ ತರಬೇತಿ ನೀಡಿದರು. ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಅನುರಾಧಾ ಕುರುಂಜಿ ತರಬೇತಿ ಶಿಬಿರದ ನೇತೃತ್ವ ವಹಿಸಿದ್ದರು. ಯುವ ರೆಡ್ ಕ್ರಾಸ್ ಘಟಕದ ವಿವಿಧ ಕಾಲೇಜುಗಳ 42 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಜೀವನದಲ್ಲಿ ವಿಪತ್ತುಗಳು ಎದುರಾದರೆ ಅದನ್ನು ಎದುರಿಸಿ ಬದುಕುವುದರ ಜೊತೆಗೆ ಇತರರನ್ನೂ ಬದುಕಿಸಲು ವಿದ್ಯಾರ್ಥಿಗಳಲ್ಲಿ ಧೈರ್ಯ ಮತ್ತು ಆತ್ಮ ವಿಶ್ವಾಸವನ್ನು ತುಂಬುವ ನಿಟ್ಟಿನಲ್ಲಿ ನಿರಂತರ ಎರಡನೇ ಬಾರಿ ನೆಹರೂ ಸ್ಮಾರಕ ಮಹಾ ವಿದ್ಯಾಲಯದಲ್ಲಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು.
“ಮೂರು ದಿನಗಳ ಶಿಬಿರದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದ್ದಾರೆ. ತರಬೇತಿ ಪಡೆದ ವಿದ್ಯಾರ್ಥಿಗಳನ್ನು ಸೇರಿಸಿ ರೆಡ್ ಕ್ರಾಸ್ ವಿಪತ್ತು ನಿರ್ವಹಣಾ ತಂಡವನ್ನು ರಚಿಸಲಾಗುವುದು. ವಿಪತ್ತು ಉಂಟಾದರೆ ಈ ತಂಡ ಪೊಲೀಸ್, ಅಗ್ನಿಶಾಮಕ ದಳದ ಜೊತೆ ಸೇರಿ ಕಾರ್ಯನಿರ್ವಹಿಸಲಿದೆ.”-ಸಂತೋಷ್ ಪೀಟರ್ ಡಿಸೋಜ ತರಬೇತುದಾರ
‘ವಿಪತ್ತುಗಳು ಸಂಭಿಸಿದಾಗ ಅದನ್ನು ನಿಭಾಯಿಸಿ ಸ್ವಯಂ ಬದುಕಲು ಮತ್ತು ಇತರರನ್ನು ಬದುಕಿಸಲು ವಿದ್ಯಾರ್ಥಿಗಳಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ದೃಷ್ಠಿಯಿಂದ ವಿಪತ್ತು ನಿರ್ವಹಣಾ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಶಿಬಿರದಲ್ಲಿ ಕಲಿಸಲಾದ ಹಲವು ವಿಷಯಗಳು ವಿದ್ಯಾರ್ಥಿಗಳಿಗೆ ಮುಂದಿನ ಜೀವನದಲ್ಲಿ ಸಹಾಯಕವಾಗಲಿದೆ’ –ಡಾ.ಅನುರಾಧಾ ಕುರುಂಜಿ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ.