ಬೆಳ್ತಂಗಡಿ: ಯಕ್ಷಗಾನ ಕಲೆ ನಿಂತ ನೀರಾಗಬಾರದು. ಕಾಲಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯವಾಗುತ್ತದೆ. ಹಾಗಾಗಿ ಆಧುನಿಕ ಜೀವನಶೈಲಿ, ವೃತ್ತಿ, ವ್ಯವಹಾರ ಇತ್ಯಾದಿ ಕಾರಣಗಳಿಂದ ಕಾಲಮಿತಿಯ ಯಕ್ಷಗಾನ ಪ್ರದರ್ಶನ ಮೊದಲಾದ ಪರಿವರ್ತನೆ ಮಾಡಲಾಗಿದೆ. ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ಭೀಮೇಶ್ವರ ಜೋಶಿ ಹೇಳಿದರು.
ಅವರು ಭಾನುವಾರ ಉಜಿರೆಯ ಜನಾರ್ದನಸ್ವಾಮಿ ದೇವಸ್ಥಾನದ ರಾಮಕೃಷ್ಣ ಸಭಾಭವನದಲ್ಲಿ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಗುಂಡ್ಮ ಕಾಳಿಂಗ ನಾವಡ ಸಂಸ್ಮರಾಣಾರ್ಥ ಹಮ್ಮಿಕೊಳ್ಳಲಾದ ಯಕ್ಷನವಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತನ್ನನ್ನು ತಾನು ಯಕ್ಷಗಾನ ಕಲೆಗೆ ತೊಡಗಿಸಿಕೊಂಡವರಿಂದ ಮಾತ್ರ ಕಲೆಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ. ಸಮಾಜವನ್ನು ಸುಸ್ಥಿತಿಗೆ ತರುವ ಹೊಣೆಗಾರಿಕೆ ಕಲಾವಿದರಿಗೆ ಇರಬೇಕು. ಗ್ರಾಮೀಣದ ಪ್ರದೇಶದ ಅನಕ್ಷಸ್ಥರು ಕೂಡ ಯಕ್ಷಗಾನದ ಮೂಲಕ ಧರ್ಮಸೂಕ್ಷ್ಮವನ್ನು ಅರಿತು ನಿಜ ಜೀವನದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ. ಗಂಡುಕಲೆಯಾದ ಯಕ್ಷಗಾನದಲ್ಲಿ ಮಹಿಳೆಯರು ಕೂಡಾ ಪ್ರತಿಭಾವಂತ ಕಲಾವಿದರಾಗಿ ಮಿಂಚುತ್ತಿರುವುದು ಸಂತಸದಾಯಕವಾಗಿದೆ. ರಂಗಸಜ್ಜಿಕೆ, ವೇಷಭೂಷಣ, ವಾಕ್ಪಟುತ್ವ, ಪಾತ್ರಾಭಿನಯ ಹಾಗೂ ಭಾಗವತರ ಹಾಡುಗಾರಿಕೆಗೆ ಹೊಂದಿಕೊಂಡು ಹಾವಭಾವದೊಂದಿಗೆ ಅಭಿನಯ ಹಾಗೂ ಅರ್ಥಗಾರಿಕೆಯೊಂದಿಗೆ ಪ್ರಸ್ತುತ ಪಡಿಸಬಹುದಾದ ವಿಶೇಷ ಕಲೆ ಯಕ್ಷಗಾನ ಕಲೆಯಾಗಿದೆ ಎಂದು ವಿಶ್ಲೇಷಿಸಿದರು.
ಸಾಮಾನ್ಯವಾಗಿ ಯಕ್ಷಗಾನ ಕಲಾವಿದರು ಆರ್ಥಿಕವಾಗಿ ಶ್ರೀಮಂತರಾಗಿರುವುದಿಲ್ಲ. ಆದರೆ ಸಂಸ್ಕಾರ, ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಅವರು ಶ್ರೀಮಂತರಾಗಿದ್ದಾರೆ. ಆದರೆ ಯಕ್ಷಗಾನ ಕಲೆಯ ಅವಗಣನೆ ಸಲ್ಲದು ಎಂದು ಅವರು ಹೇಳಿದರು. ಎಂದೂ ಕಲೆಯ ಪಾವಿತ್ರ್ಯತೆಗೆ ಅಪಚಾರ ಆಗದಂತೆ ಎಚ್ಚರಿಕೆ ವಹಿಸುವುದು ಮೇಳದ ಯಜಮಾನರ, ಕಲಾವಿದರ, ಪ್ರೇಕ್ಷಕರ ಹಾಗೂ ಸಾರ್ವಜನಿಕರ ಜವಾಬ್ದಾರಿಯಾಗಿದೆ. ಅಲ್ಲದೆ ಯಕ್ಷಗಾನ ಅಕಾಡೆಮಿ ಕೂಡಾ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಯಕ್ಷಗಾನದ ನೃತ್ಯ, ಅಭಿನಯವನ್ನು ನಾಟಕ, ಸಿನಿಮಾಗಳ ಹಿನ್ನೆಲೆಯಲ್ಲಿ ಬಳಸುವುದು ಸೂಕ್ತವಲ್ಲ. ಇದು ಕೂಡಾ ಯಕ್ಷಗಾನ ಕಲೆಗೆ ಅಪಚಾರವಾಗುತ್ತದೆ. ಯಕ್ಷಗಾನಕ್ಕೆ ಯಾವುದೇ ರೀತಿಯಲ್ಲಿ ಅಪಚಾರವಾದರೆ ಕಲಾಭಿಮಾನಿಗಳು ಮೂಕ ಪ್ರೇಕ್ಷಕರಾಗದೇ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಸುಧಾರಣೆ ಮಾಡುವ ಪ್ರಯತ್ನ ಮಾಡಬೇಕು. ಇದು ಪ್ರೇಕ್ಷಕರ ಬದ್ಧತೆಯೂ, ಹೊಣೆಗಾರಿಕೆಯೂ ಆಗಿದೆ ಎಂದು ಸ್ಪಷ್ಟಪಡಿಸಿದರು.
ಕಟೀಲಿನ ವೇ.ಮೂ. ಕಮಲಾದೇವಿ ಪ್ರಸಾದ ಅಸ್ರಣ್ಣ ಅವರು, ಯಕ್ಷಗಾನ ಕಲಾವಿದರು ಮಾತ್ರ ಅರ್ಥಪೂರ್ಣ, ಶುದ್ಧವಾದ ಉತ್ತಮ ಕನ್ನಡವನ್ನು ಮಾತನಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಗದ್ಯ ಸಾಹಿತ್ಯಕ್ಕೆ ಹಾಗೂ ಭಾವನಾತ್ಮಕ ಮಾತುಕತೆಗೆ ಯಕ್ಷಗಾನ ಉತ್ತಮ ಚೌಕಟ್ಟನ್ನು ಒದಗಿಸುತ್ತದೆ. ಯಕ್ಷಗಾನ ಕಲೆಯನ್ನು ಪ್ರೀತಿಸಿ, ಗೌರವಿಸಬೇಕು ಎಂದು ಆಶಿಸಿದರಲ್ಲದೆ ಯಕ್ಷಗಾನ ರಂಗದಲ್ಲಿ ಶ್ರೇಷ್ಠ ಕಲಾವಿದರಿದ್ದಾರೆ. ಆದರೆ ಅನಿವಾರ್ಯವಾಗಿ ಕೆಲ ಕಲಾವಿದರು ದುಶ್ಚಟಕ್ಕೆ ಬಲಿಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಅಧ್ಯಕ್ಷತೆ ವಹಿಸಿದ್ದರು. ವಕೀಲ ಹರೀಶ ಪೂಂಜ, ಧರ್ಮಸ್ಥಳ ಜಮಾಉಗ್ರಾಣದ ಮುತ್ಸದ್ದಿ ಭುಜಬಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಖ್ಯಾತ ಸಾಹಿತಿ ಕೆ.ಟಿ, ಗಟ್ಟಿ ಹಾಗೂ ಯಕ್ಷಗಾನ ಭಾಗವತರಾದ ಕುಬಣೂರು ಶ್ರೀಧರ ರಾವ್ ಅವರನ್ನು ಸನ್ಮಾನಿಸಲಾಯಿತು.
ಎಸ್ಡಿಎಂ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ವೈ.ಉಮಾನಾಥ ಶೆಣೈ ಬರೆದ ಉಜಿರೆ ಪರಿಸರದ ಧಾರ್ಮಿಕ ಶ್ರದ್ದಾ ಕೇಂದ್ರಗಳು ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದ ಸಂಯೋಜಕ ಚಂದ್ರಮೋಹನ ಮರಾಠೆ ಸ್ವಾಗತಿಸಿದರು. ಉಪನ್ಯಾಸಕ ಡಾ. ಶ್ರೀಧರ್ ಭಟ್ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ವಂದಿಸಿದರು.