ಉಳ್ಳಾಲ: ಸಂಸದರು ಜಿಲ್ಲೆಯನ್ನು ಬೆಂಕಿ ಹಾಕಿ ಉರಿಸಿದಲ್ಲಿ ಜಿಲ್ಲಾ ಕಾಂಗ್ರೆಸ್ಸಿನಿಂದ ಅದನ್ನು ಆರಿಸುವ ಕೆಲಸಕ್ಕೆ ಸಿದ್ಧರಿದ್ದೇವೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದ್ದಾರೆ.
ಅವರು ಕಾರ್ತಿಕ್ ರಾಜ್ ಕೊಲೆ ಆರೋಪಿಗಳ ಪತ್ತೆಗೆ ಆಗ್ರಹಿಸಿ ಭಾನುವಾರ ಹಿಂದು ಹಿತರಕ್ಷಣಾ ವೇದಿಕೆ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಉದ್ರೇಕಕಾರಿ ಹೇಳಿಕೆಯನ್ನು ನೀಡಿರುವ ಸಂಸದರ ವಿರುದ್ಧ ಕೊಣಾಜೆ ಠಾಣೆಯಲ್ಲಿ ದೂರು ಸಲ್ಲಿಸಿ ಮಾತನಾಡಿದರು.
ವಿಧಾನಸಭಾ ಚುನಾವಣೆ ಸಮೀಪಿಸುವ ಸಂದರ್ಭ ಕೋಮು ಪ್ರಚೋದಿಸುವ ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್ತಿಕ್ ರಾಜ್ ಪ್ರಕರಣವನ್ನು ಸಿಓಡಿಗೆ ವಹಿಸುವಂತೆ ಒತ್ತಾಯಿಸಿದೆ. ಜನಪ್ರತಿನಿಧಿಯೋರ್ವ ಜಿಲ್ಲೆಯಲ್ಲಿ ಶಾಂತಿಯುತ ವಾತಾವರಣವನ್ನು ಆಶಿಸುತ್ತಾರೆ. ಆದರೆ ಬಿಜೆಪಿ ಸಂಸದರು ಜಿಲ್ಲೆಯಲ್ಲಿ ಅಶಾಂತಿ, ಕೋಮು ಗಲಭೆ ಸೃಷ್ಟಿ ಮಾಡುವ ಮೂಲಕ ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ.
ಬಿಜೆಪಿ ಪಕ್ಷದವರು ರಾಜಕೀಯಕ್ಕಾಗಿ ಏನನ್ನೂ ಮಾಡಲು ಸಿದ್ಧರಿದ್ದಾರೆ. ವಿಧಾನಸಭಾ ಚುನಾವಣೆ ಮುಂದಿಟ್ಟು ಜಿಲ್ಲೆಯಲ್ಲಿ ಅಶಾಂತಿ ಮೂಡಿಸಿ ಕೋಮುಗಲಭೆ ನಡೆಸುವ ಹುನ್ನಾರ ಮಾಡಿದ್ದಾರೆ. ಎಂದಿಗೂ ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಬಿಡುವುದಿಲ್ಲ. ಆದರೂ ಬೆಂಕಿ ಹಚ್ಚಿದೇ ಆದಲ್ಲಿ ಅದನ್ನು ನಂದಿಸಲು ಜಿಲ್ಲಾ ಕಾಂಗ್ರೆಸ್ ಸಿದ್ಧವಿದೆ ಎಂದ ಅವರು ಜಿಲ್ಲೆಯ ಪ್ರಜ್ಞಾವಂತ ನಾಗರೀಕರ ಸಮ್ಮುಖದಲ್ಲಿ ಸಂಸದರ ವಿರುದ್ಧ ಧಿಕ್ಕಾರ ಹಾಕುವ ಕಾರ್ಯಕ್ರಮ ಇದಾಗಿದೆ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ ಅಮಾಯಕನಾಗಿರುವ ಕಾರ್ತಿಕ್ ರಾಜ್ ಹತ್ಯೆ ಪ್ರಕರಣದಲ್ಲಿ ರಾಜಕೀಯ ಮಾಡುವುದು ಸಮಂಜಸವಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ ಮತ್ತು ನಾಗರೀಕರ ಪೂರೈಕೆ ಸಚಿವರ ಮೂಲಕ ರಾಜ್ಯ ಗೃಹಸಚಿವಾಲಯಕ್ಕೆ ಪ್ರಕರಣದ ಆರೋಪಿಗಳ ಪತ್ತೆಗೆ ಆಗ್ರಹಿಸಿ ಮತ್ತು ಪ್ರಕರಣವನ್ನು ಸಿಒಡಿಗೆ ವಹಿಸಲು ಈಗಾಗಲೇ ಮನವಿ ಸಲ್ಲಿಸಲಾಗಿದೆ. ಈ ನಡುವೆ ಸಂಸದರು ಗಲಭೆಗೆ ಪ್ರಚೋದಿಸುವ ಮಾತುಗಳನ್ನಾಡಿರುವುದನ್ನು ಎಲ್ಲರೂ ಖಂಡಿಸಬೇಕಿದೆ ಎಂದರು.
ಈ ಸಂದರ್ಭ ಉಳ್ಳಾಲ ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಕೊಣಾಜೆ ಪಂ. ಅಧ್ಯಕ್ಷ ಶೌಕತ್ ಆಲಿ, ಮಾಜಿ ಜಿ.ಪಂ ಸದಸ್ಯ ಎನ್.ಎಸ್.ಕರೀಂ, ಅಂಬ್ಲಮೊಗರು ಪಂ.ಅಧ್ಯಕ್ಷ ರಫೀಕ್ ಅಂಬ್ಲಮೊಗರು, ಕೆಎಸ್ ಆರ್ ಟಿಸಿ ನಿರ್ದೇಶಕ ರಮೇಶ್ ಶೆಟ್ಟಿ, ಸಿರಾಜುದ್ದೀನ್ ಕಿನ್ಯಾ, ಹಮೀದ್ ಕಿನ್ಯಾ, ಗಣೇಶ್ ಶೆಟ್ಟಿ ತಲಪಾಡಿ, ಅಚ್ಚುತ ಗಟ್ಟಿ, ಸೀತಾರಾಮ ಶೆಟ್ಟಿ, ರವಿರಾಜ್ ಶೆಟ್ಟಿ, ಸುಹಾಸಿನಿ ಬಬ್ಬುಕಟ್ಟೆ, ಕೋಟೆಕಾರು ಪಟ್ಟಣ ಪಂಚಾಯಿತಿನ ಸದಸ್ಯರಾದ ಹಮೀದ್ ಹಸನ್ ಮಾಡೂರು, ಮಹ್ಮದ್ ಪುಸ್ಠಿ, ತಾ.ಪಂ ಸದಸ್ಯರಾದ ಸುರೇಖಾ ಚಂದ್ರಹಾಸ್, ಪದ್ಮಾವತಿ, ಹೈದರ್ ಕೈರಂಗಳ, ಪಜೀರು ಗ್ರಾ.ಪಂ ಮಾಜಿ ಅಧ್ಯಕ್ಷ ನಝೀರ್ ಮೊಯ್ದೀನ್ ಮೊದಲಾದವರು ಉಪಸ್ಥಿತರಿದ್ದರು.