ಕಾಸರಗೋಡು: ಸೋಮವಾರ ಬಿಜೆಪಿ ನಡೆಸಿದ ಪಾದಯಾತ್ರೆ ಮೇಲೆ ಕಿಡಿಗೇಡಿಗಳು ಕಲ್ಲೆಸೆದ ಘಟನೆ ಬಳಿಕ ಜಿಲ್ಲೆಯ ಹಲವೆಡೆ ಅಹಿತಕರ ಘಟನೆ ಮರುಕಳಿಸುತ್ತಿರುವ ಹಿನ್ನಲೆಯಲ್ಲಿ ಮೂರು ದಿನಗಳ ಕಾಲ ಕೇರಳ ಪೊಲೀಸ್ ಆಕ್ಟ್ 78, 79 ರ ಕಾಯ್ದೆಯಂತೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಥೋಮ್ಸನ್ ಜೋಸ್ ಆದೇಶ ಹೊರಡಿಸಿದ್ದಾರೆ.ಮೂರು ದಿನಗಳ ಕಾಲ ಮೆರವಣಿಗೆ, ಬಹಿರಂಗ ಸಭೆ, ಪ್ರತಿಭಟನೆ ಮೊದಲಾದವುಗಳಿಗೆ ನಿಷೇಧ ಹೇರಲಾಗಿದೆ. ಮೂರು ದಿನಗಳ ಬಳಿಕ ಪರಿಸ್ಥಿತಿ ಅವಲೋಕಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಿದೆ. ಜಿಲ್ಲೆಯಲ್ಲಿ ಸಿಪಿಎಂ – ಬಿಜೆಪಿ ನಡುವೆ ಘರ್ಷಣೆ, ಹಿಂಸಾಚಾರ ಮರುಕಳಿಸುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಸೋಮವಾರ ಚೆರ್ವತ್ತೂರಿನಲ್ಲಿ ನಡೆದ ಘಟನೆಗೆ ಸಂಬಂಧಪಟ್ಟಂತೆ ಮಂಗಳವಾರ ಬಿಜೆಪಿ ಕರೆ ನೀಡಿದ್ದ ಜಿಲ್ಲಾ ಬಂದ್ ಕಾಸರಗೋಡಿನಲ್ಲಿ ಹಿಂಸಾಚಾರಕ್ಕೆ ತಿರುಗಿತ್ತು. ಕಾಸರಗೋಡು ನಗರ ಅಲ್ಲದೆ ಹೊರ ಪ್ರದೇಶದಲ್ಲೂ ಅಹಿತಕರ ಘಟನೆ ಮರುಕಳಿಸಿದ ಹಿನ್ನಲೆಯಲ್ಲಿ ಬುಧವಾರ ಮಧ್ಯಾಹ್ನದಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮಂಗಳವಾರ ಬಿಜೆಪಿ ನಡೆಸಿದ ಹರತಾಳದ ಸಂದರ್ಭದಲ್ಲಿ ನಡೆಸಿದ ಹಿಂಸಾಚಾರವನ್ನು ಪ್ರತಿಭಟಿಸಿ ಸಿಪಿಎಂ ಬುಧವಾರ ಸಂಜೆ ಪ್ರತಿಭಟನೆ ಮತ್ತು ಸಮಾವೇಶ ನಡೆಸಲು ಮುಂದಾಗಿತ್ತು. ಇದರಿಂದ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮದಂಗವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬಂದ್ ದಿನ ಹಿಂಸಾಚಾರ : ನಾಲ್ಕು ಪ್ರಕರಣ ದಾಖಲು
ಹರತಾಳ ದಿನದಂದು ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಪಟ್ಟಂತೆ ಕಾಸರಗೋಡು ನಗರ ಠಾಣಾ ಪೊಲೀಸರು ನಾಲ್ಕು ಪ್ರಕರಣಗಳನ್ನು ದಾಖಲಿಸಿದ್ದು, 19 ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಸಿವಿಲ್ ಸ್ಟೇಷನ್ ನೌಕರ ಸಜೀವ್ ರ ಮೇಲೆ ಹಲ್ಲೆ ನಡೆಸಿದ ಕರಂದಕ್ಕಾಡ್ ನಲ್ಲಿ ವಾಹನಕ್ಕೆ ಅಡ್ಡಿ , ಸಹಕಾರಿ ಬ್ಯಾ೦ಕ್ ಗೆ ಕಲ್ಲೆಸೆತ, ಎನ್ ಜಿ ಒ ಸಂಘಟನೆ ಧ್ವಜ ಹಾನಿ, ಪೊಲೀಸರ ಮೇಲೆ ಹಲ್ಲೆ ಯತ್ನ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 200 ರಷ್ಟು ಮಂದಿ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಸಬ್ ಇನ್ಸ್ ಪೆಕ್ಟರ್ ಅಜಿತ್ ಕುಮಾರ್ ರವರ ದೂರಿನಂತೆ ಕೇಸು ದಾಖಲಿಸಲಾಗಿದೆ.
ಪಿಲಿಕುಂಜೆಯ ಮುಹಮ್ಮದ್ ಫೈಝಲ್ ರವರ ಮೇಲೆ ಹಲ್ಲೆ ನಡೆಸಿ ಬೈಕ್ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸು ದಾಖಲಿಸಲಾಗಿದೆ. ಹಿಂಸಾಚಾರದ ಬಳಿಕ ಜಿಲ್ಲೆಯ ಸಹಜ ಸ್ಥಿತಿಗೆ ಮರಳುತ್ತಿದೆ. ಮಂಗಳವಾರ ರಾತ್ರಿಯಿಂದ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.