ಕಾರ್ಕಳ: ನಗರದ ಅನಂತಶಯನ ಸಮೀಪದ ಹೋಟೆಲ್ವೊಂದರಲ್ಲಿ ಊಟ ಮುಗಿಸಿ ಗೆಳೆಯನ್ನು ಮನೆಗೆ ಬಿಟ್ಟು ಬರಲು ಮುಂದಾದಾಗ ಚಲಾಯಿಸುತ್ತಿದ್ದ ಬೈಕ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ತೀವ್ರತೆಗೆ ಸವಾರರಿಬ್ಬರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಜೋಡು ರಸ್ತೆ ಎಂಬಲ್ಲಿ ಸಂಭವಿಸಿದೆ.
ನಿಟ್ಟೆ ಪದವು ನಿವಾಸಿ ಅರುಣ್ ನಾಯ್ಕ, ಜೋಡುರಸ್ತೆಯ ರಕ್ಷಿತ್ ಘಟನೆಯಲ್ಲಿ ಜೀವತೆತ್ತವರು. ಕೆಎ-20-ಇಡಿ-6202 ನಂಬ್ರದ ಬೈಕ್ ಘಟನೆಯಲ್ಲಿ ಸಂಪೂರ್ಣ ಹಾನಿಗೊಳಗಾಗಿದ್ದು, ಮೃತ ದುರ್ದೈವಿ ಅರುಣ್ ನಾಯ್ಕ ಎಂಬವರಿಗೆ ಸೇರಿದಾಗಿದೆ. ರಕ್ಷಿತ್ ಚಲಾಯಿಸುತ್ತಿದ್ದ ಬೈಕ್ ಬಂಗ್ಲೆಗುಡ್ಡೆಯಿಂದ ಜೋಡುರಸ್ತೆ ಕಡೆಗೆ ಹೋಗುವ ರಸ್ತೆ ಬದಿಯಲ್ಲಿ ಇರುವ ಮರಕ್ಕೆ ಡಿಕ್ಕಿ ಹೊಡೆದಿತ್ತು. ರಾತ್ರಿ ಸುಮಾರು 12.30ರ ವೇಳೆಗೆ ಘಟನೆ ನಡೆದಿದೆ. ತಾಲೂಕು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಮೃತದೇಹದ ಮಹಜರು ನಡೆಸಲಾಗಿದೆ.
ಈ ಬಗ್ಗೆ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.