ಬಂಟ್ವಾಳ: ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಸಿಬ್ಬಂದಿಯೊಬ್ಬರು ಮೃತಪಟ್ಟ ದಾರುಣ ಘಟನೆ ರಾ.ಹೆ. ಮೆಲ್ಕಾರ್ ನಲ್ಲಿ ಬುಧವಾರ ನಡೆದಿದೆ.
ತಾಲೂಕಿನ ಕಲ್ಲಡ್ಕ ಸಮೀಪದ ಪೂರ್ಲಪಾಡಿ ನಿವಾಸಿ ಪುತ್ತೂರು ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರುಕ್ಮಯ ಅಪಘಾತದಲ್ಲಿ ಮೃತಪಟ್ಟವರು.
ಇವರು ಬುಧವಾರ ಕೆಲಸ ನಿಮಿತ್ತ ಮಧ್ಯಾಹ್ನದ ವೇಳೆಗೆ ಮೆಲ್ಕಾರ್ಗೆ ಬಂದಿದ್ದವರು ವಾಪಸ್ಸು ಮನೆಗೆ ಹೋಗಲು ಬಸ್ಸಿಗಾಗಿ ರಸ್ತೆ ಬದಿ ಕಾಯುತ್ತಿದ್ದ ವೇಳೆ ಪೆಟ್ರೋಲ್ ಸಾಗಾಟದ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡಿದ್ದ ಅವರನ್ನು, ತುಂಬೆ ಆಸ್ಪತ್ರೆಗೆ ಸಾಗಿಸಿ ಬಳಿಕ, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಅವರ ದೇಹ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೆಲ್ಕಾರ್ ರಸ್ತೆ ಅಗಲಗೊಂಡಿದ್ದರೂ ಬಸ್ ನಿಲ್ಲುವ ಸ್ಥಳ, ರಸ್ತೆ ದಾಟುವ ಕುರಿತಾದ ಮಾರ್ಕಿಗ್ ಇಲ್ಲವಾಗಿದೆ. ಒಂದುಕಡೆ ಬಸ್ ನಿಲ್ಲುವ ವ್ಯವಸ್ಥೆ ಇದ್ದರೂ, ಸೂಕ್ತ ನಿಲ್ದಾಣದ ಕೊರತೆ ಇದೆ, ಹೀಗಾಗಿ ಬಸ್ಸುಗಳು ಇಲ್ಲದೇ ಇದ್ದರೆ ಜನರು ನಿಲ್ಲುವ ಜಾಗದಲ್ಲೇ ವಾಹನಗಳು ವೇಗದಿಂದ ಸಾಗುತ್ತವೆ. ಅಸಮರ್ಪಕ ರಸ್ತೆ ವ್ಯವಸ್ಥೆಯನ್ನು ತಕ್ಷಣ ಸರಿಪಡಿಸಬೇಕೆನ್ನುವುದು ಸಾರ್ವಜನಿಕರ ಒತ್ತಾಯ.
ಮೃದುಭಾಷಿಯಾಗಿದ್ದ ರುಕ್ಮಯರವರು ಬಂಟ್ವಾಳ ನಗರ, ವಿಟ್ಲ ಸಹಿತ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೆಲಸ ನಿರ್ವಹಿಸಿದ್ದರು. ತಮ್ಮ ಕರ್ತವ್ಯ ಅವಧಿಯಲ್ಲಿ ಜನರ ವಿಶ್ವಾಸ ಗಳಿಸಿಕೊಂಡಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.