ಕಾರ್ಕಳ: ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿದರೆ ಸರಕಾರವು ಮದ್ಯದಂಗಡಿಗಳನ್ನು ತೆರೆಯುವುದರ ಮೂಲಕ ನಾಗರಿಕ ಬದುಕಿನೊಂದಿಗೆ ಚೆಲ್ಲಾಟಕ್ಕೆ ಮುಂದಾಗುತ್ತಿದೆ. ನಾಗರಿಕರು ಪಾವತಿಸಿದ ತೆರಿಗೆಯು ರಾಜ್ಯದ ಬೊಕ್ಕಸಕ್ಕೆ ಸೇರುತ್ತಿದ್ದು ಅದನ್ನು ಸರಕಾರಿ ಸಿಬ್ಬಂದಿಗಳ ತಿಂಗಳ ವೇತನಕ್ಕೂ ವಿನಿಯೋಗಿಸಲಾಗುತ್ತಿದೆ. ರಾಜ್ಯದಲ್ಲಿ ತೆರೆಯಲಿರುವ 900 ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಸರಕಾರಿ ಸಿಬ್ಬಂದಿಗಳನ್ನು ನಿಯೋಜಿಸಿರುವುದು ರಾಜ್ಯದ ಜನತೆಯ ದುರದೃಷ್ಟಕರವೆಂದು ಶಾಸಕ ಹಾಗೂ ವಿರೋಧ ಪಕ್ಷಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಆರೋಪಗೈದಿದ್ದಾರೆ.
ಮಿಯ್ಯಾರು ಶಕ್ತಿಕೇಂದ್ರ ಬಿಜೆಪಿ ಮಹಿಳಾ ಮೋರ್ಚಾ ಇದರ ವತಿಯಿಂದ ಸಾಣೂರು ಸರಕಾರಿ ಶಾಲೆಯ ಪರಿಸರದಲ್ಲಿ ಆಯೋಜಿಸಿದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನವಂಬರ್ 7ರಂದು ಬೆಳಗಾವಿ ಅಧೀವೇಶನದಲ್ಲಿ ರಾಜ್ಯ ಸರಕಾರವು ಹೊಸ ಸುತ್ತೋಲೆಯನ್ನು ಹೊರಡಿಸಿ ರಾಜ್ಯದ ಗ್ರಾಮೀಣ ಪ್ರದೇಶದ ಜನತೆಯನ್ನು ಪರೀಕ್ಷಿಸಲು ಮುಂದಾಗಿದೆ. 900 ಹೊಸ ಮದ್ಯದಂಗಡಿಗಳನ್ನು ತೆರೆಯುವುದಕ್ಕೆ ಅನುಮತಿ ನೀಡುವ ಶತಪ್ರಯತ್ನ ನಡೆಯುತ್ತಿದೆ. ಸರಕಾರಿ ಸೌಮ್ಯದ ಎಂಎಸ್ಐಎಲ್ ಹೀಗಾಗಲೇ ಸರ್ವೇ ಕಾರ್ಯಗಳು ಮುಗಿಸಿದೆ. ತನ್ಮೂಲಕ ಉಡುಪಿ ಜಿಲ್ಲೆಯಲ್ಲಿ 30 ಅದರಲ್ಲಿ ಕಾರ್ಕಳ ತಾಲೂಕಿನ ಸಾಣೂರು, ಮಾಳ, ಬೋಳ, ದುರ್ಗ, ಕಲ್ಯಾ, ಮುದ್ರಾಡಿಗಳಲ್ಲಿ ಸರಕಾರಿ ಸೌಮ್ಯದ ವೈನ್ ಶಾಪ್ ಗಳು ತೆರೆಯಲಿದೆ ಎಂಬ ಮಾಹಿತಿಯನ್ನು ನೀಡಿದರು.
ರಾಜ್ಯದಲ್ಲಿ 134 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ. ಅದರ ಪರಿಹಾರ ಕಾರ್ಯಗಳು ಇನ್ನೂ ನೆನೆಗುದ್ದಿಗೆ ಬಿದ್ದಿದೆ. ಕುಡಿಯುವ ನೀರು, ವಿದ್ಯುತ್ ಸರಬರಾಜುಗೆ ಹೆಚ್ಚಿನ ಒತ್ತು ನೀಡಬೇಕಿತ್ತು. ಹೊಸ ವೈದ್ಯರ, ನರ್ಸ್ ಗಳ, ಶಿಕ್ಷಕರ ಹೊಸ ನೇಮಕಾತಿ ಮಾಡದೇ ಇದ್ದ ರಾಜ್ಯ ಸರಕಾರವು ಮದ್ಯದಂಗಡಿಗಳನ್ನು ಬೇಕಾಬಿಟ್ಟಿ ತೆರೆಯುವುದರ ಮೂಲಕ ರಾಜ್ಯದ ಬೊಕ್ಕಸಕ್ಕೆ ಮಾತ್ರ ಲಾಭವಾಗುತ್ತದೆ ಹೊರತು ಜನಸಾಮಾನ್ಯನಿಗಲ್ಲ ಎಂಬ ಲೋಕಸತ್ಯವನ್ನು ಇನ್ನಾದರೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅರ್ಥೈಸಿಕೊಳ್ಳಬೇಕು ಎಂದರು.
ಯಾವ ಗಾಂಧೀಜಿ ಹೇಳಿದ್ದು?
ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧೀಜಿಯವರ ಹೆಸರಿನಲ್ಲಿಯೇ ಅಧಿಕಾರ ಹಿಡಿಯುತ್ತಾ ಬಂದಿದೆ. ಮದ್ಯಮುಕ್ತ ಭಾರತ ನಿರ್ಮಾಣ ಮಾಡುವ ಗಾಂಧೀಜಿಯವರು ಕಂಡ ಕನಸ್ಸಿಗೆ ವಿರುದ್ಧವಾಗಿ ನಡೆಯುತ್ತಾ ಬಂದಿದೆ. ಆದರ ಪೂರಕವಾಗಿ ಕರ್ನಾಟಕದಲ್ಲಿ ಹೆಚ್ಚುವರಿ ಮದ್ಯದಂಗಡಿ ತೆರೆಯಲು ಸರಕಾರ ಮುಂದಾಗಿದೆ. ಇವರ ಕ್ರಮವು ಯಾವ ಗಾಂಧೀಜಿ ಪ್ರೇರಣೆ ಎಂಬುವುದನ್ನು ಸಾಬೀತುಪಡಿಸಿಲಿ ಎಂದು ಸವಾಲು ಹಾಕಿದರು.
ಬಿಜೆಪಿ ಮಹಿಳಾ ಮೋರ್ಚಾ ಕಾರ್ಕಳ ತಾಲೂಕು ಅಧ್ಯಕ್ಷೆ ಪ್ರಮೀಳಾ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯೆ ದಿವ್ಯಶ್ರೀ, ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಕ್ಷತಾ, ಸಾಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿದರು.
ಆನಂದ ಬಂಢಿಂಠ, ಕರುಣಾಕರ ಕೋಟ್ಯಾನ್, ಯುವರಾಜ ಜೈನ್, ಶೋಭಾ, ಶಾರಾದ ಶೆಟ್ಟಿ,ಇರ್ವತ್ತೂರು ಉದಯ ಎಸ್.ಕೋಟ್ಯಾನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.