ಕಾರ್ಕಳ: ಮುಡಾರು ರಾಮೆಟ್ಟುಪಲ್ಕೆಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿ ಪರಿಸರದ ಕೊರಗ ಸಮುದಾಯದ ಯುವತಿಯೊಬ್ಬಳನ್ನು ತನ್ನ ಪ್ರೇಮಪಾಶಕ್ಕೆ ಸಿಲುಕಿಸಿ ಅತ್ಯಾಚಾರಗೈದು ಪರಾರಿಯಾಗಿದ್ದ ಕೇರಳ ಮೂಲದ ಶಾಜಿ ಅಲಿಯಾಸ್ ಅಶೋಕ್ ಎಂಬಾತನನ್ನು ಗ್ರಾಮಾಂತರ ಠಾಣಾಧಿಕಾರಿ ರಫೀಕ್ ನೇತೃತ್ವದ ಪೊಲೀಸರ ತಂಡ ಬುಧವಾರ ಸಂಜೆ ಬಂಧಿಸಿದ್ದಾರೆ.
ಕಳೆದ ಒಂಭತ್ತು ತಿಂಗಳ ಹಿಂದೆ ರಾಮೆಟ್ಟುಪಲ್ಕೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆರೋಪಿ ಕಳೆದ ಐದು ತಿಂಗಳ ಹಿಂದೆ ಏಕಾಏಕಿ ರೂಂಗೆ ಬೀಗ ಜಡಿದು ಪರಾರಿಯಾಗಿ ಯುವತಿಗೆ ಮೊಬೈಲ್ ಕರೆ ಮೂಲಕ ಜೀವ ಬೆದರಿಕೆ ಯೊಡ್ಡಿರುವುದು ಘಟನೆ ಬೆಳಕಿಗೆ ಬರಲು ಕಾರಣವಾಗಿದೆ.
ಏಳು ತಿಂಗಳ ಗರ್ಭಿಣಿಯಾಗಿರುವ ಯುವತಿ ನ್ಯಾಯಕೋರಿ ಪೊಲೀಸ್ ಠಾಣೆ ಮೆಟ್ಟಲೇರಿದ್ದಳು. ಆರೋಪಿಯ ಮೊಬೈಲ್ ನಂಬರ್ ನ ಸುಳಿವಿನ ಮೇರೆಗೆ ಆತನನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿದೆ.
ದೂರು ನೀಡಿದ ಒಂದು ದಿನದ ಅವಧಿಯಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಗ್ರಾಮಾಂತರ ಎಸೈ ರಫೀಕ್ ನೇತೃತ್ವದ ಸಿಬ್ಬಂದಿಗಳ ಕಾರ್ಯಚರಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತಗೊಂಡಿದೆ.