ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಜ.13ರಿಂದ 15ರವರೆಗೆ ನಡೆಯಲಿರುವ ‘ಆಳ್ವಾಸ್ ವಿರಾಸತ್ 2017’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ‘ಆಳ್ವಾಸ್ ವಿರಾಸತ್ ಪ್ರಶಸ್ತಿ’ಗೆ ಶಾಸ್ತ್ರೀಯ ಖ್ಯಾತ ನೃತ್ಯಪಟು ‘ವನ್ನಾಡಿಲ್ ಪುದಿಯವೀಟಿಲ್ ಧನಂಜಯನ್ (ವಿ.ಪಿ. ಧನಂಜಯ)’ ಆಯ್ಕೆಯಾಗಿದ್ದಾರೆ.
ಜನವರಿ 13ರಂದು ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗವೇದಿಕೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ ಆಳ್ವಾಸ್ ವಿರಾಸತ್ ಗೆ ಚಾಲನೆ ನೀಡಲಿದ್ದಾರೆ. ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎನ್. ವಿನಯ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ವಿ.ಪಿ. ಧನಂಜಯನ್ ರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಒಂದು ಲಕ್ಷ ನಗದಿನೊಂದಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುತ್ತದೆ.
ವಿ.ಪಿ. ಧನಂಜಯನ್ ಕುರಿತು: ವಿ.ಪಿ. ಧನಂಜಯನ್ ಅವರು ಏಪ್ರಿಲ್ 30, 1939ರಲ್ಲಿ ಕೇರಳ ರಾಜ್ಯದ ಆಯುರ್ವೇದ, ಕಳರಿಫಯೆಟ್ ಮತ್ತು ಕಥಕ್ಕಳಿ ಕಲೆಗಳಿಗೆ ಹೆಸರುವಾಸಿಯಾದ ಪಯ್ಯನ್ನೂರಿನಲ್ಲಿ ಜನಿಸಿದರು. ತಂದೆ ಶಾಲಾ ಶಿಕ್ಷಕರಾಗಿದ್ದು, ಅವರ 8 ಮಕ್ಕಳಲ್ಲಿ ಓರ್ವರಾಗಿ ಕಡುಬಡತನದಲ್ಲೇ ಬೆಳೆದ ಇವರ ಮೇಲೆ ತಂದೆಯವರ ನಾಟಕ ತಂಡ ಅಪಾರ ಪ್ರಭಾವಬೀರಿದೆ. ರಜಾದಿನಗಳಲ್ಲಿ ಈ ನಾಟಕ ತಂಡ ಪ್ರದರ್ಶನ ನೀಡುತ್ತಿದ್ದು ಬಾಲಕ ಧನಂಜಯನ್ ತಂಡದೊಂದಿಗೆ ಊರೂರು ಅಲೆದು ನಾಟಕದಲ್ಲಿ ಬಣ್ಣಹಚ್ಚುತ್ತಿದ್ದರು.
ಮದ್ರಾಸಿನ ಕಲಾಕ್ಷೇತ್ರದ ನಿರ್ಮಾಪಕಿ ರುಕ್ಮಿಣೀದೇವಿಯವರು ಒಬ್ಬ ಅರ್ಹ ಕಥಕ್ಕಳಿ ಮತ್ತು ಭರತನಾಟ್ಯ ಪಟುವಿಗಾಗಿ ಚಂದುಪಣಿಕ್ಕರರ ಮೂಲಕ ಅನ್ವೇಷಿಸುತ್ತಿರುವಾಗ ಅಚಾನಕ್ಕಾಗಿ ಕಣ್ಣಿಗೆ ಬಿದ್ದವರು ವಿ.ಪಿ. ಧನಂಜಯನ್ರ ತಂದೆಯವರು. ಹೊಟ್ಟೆ ಹೊರೆಯುವ ಕೆಲಸ ಸ್ವಲ್ಪವಾದರೂ ಕಡಿಮೆಯಾದೀತೆಂದು ತನ್ನ ಮಗ ವಿ.ಪಿ. ಧನಂಜಯನ್ ನನ್ನು ನಾಟ್ಯಪಟುವಾಗಿಸಲು ಅವರು ತೀರ್ಮಾನಿಸಿದರು.
ವಿದ್ಯಾರ್ಥಿ ದೆಸೆಯಲ್ಲಿಯೇ ಬಹಳ ಚುರುಕಿನ, ಸಂಸ್ಕೃತ ಭಾಷೆಯಲ್ಲಿ ಹಿಡಿತವಿರುವ ಹಾಗೂ ಆಗಲೇ ಕವಿಪ್ರತಿಭೆಯನ್ನು ಒಳಗೊಂಡಿದ್ದ ವಿ.ಪಿ. ಧನಂಜಯನ್ ಆಯ್ಕೆಯಾದುದು ಮಾತ್ರವಲ್ಲ ವಿದ್ಯಾರ್ಥಿ ವೇತನದ ಮೂಲಕ ವಿದ್ಯಾರ್ಜನೆಗೆ ಅರ್ಹರಾದರು. ಹೀಗೆ ಮದ್ರಾಸಿನ ಕಲಾಕ್ಷೇತ್ರವನ್ನು ತನ್ನ ಪ್ರತಿಭೆಯ ಮೂಲಕ ಪ್ರವೇಶಿಸಿದ ಶ್ರೀಯುತರು ಶ್ರೀಮತಿ ರುಕ್ಮಿಣೀದೇವಿಯವರ ಮಾರ್ಗದರ್ಶನದಲ್ಲಿ ಕಥಕ್ಕಳಿ ಮತ್ತು ಭರತನಾಟ್ಯದಲ್ಲಿ ಪಳಗಿ ಖ್ಯಾತ ಪುರುಷ ನೃತ್ಯ ಪಟುವಾಗಿ ಪ್ರಸಿದ್ಧರಾದರು.
ಖ್ಯಾತ ನೃತ್ಯಗಾರ್ತಿ ಶಾಂತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ವಿ.ಪಿ. ಧನಂಜಯನ್ ದಂಪತಿಗಳು ನೃತ್ಯಕ್ಷೇತ್ರದಲ್ಲಿ ಧನಂಜಯನ್ಸ್ ಎಂದೇ ಖ್ಯಾತರಾಗಿದ್ದಾರೆ. ಭಾರತದ ಶ್ರೇಷ್ಠ ನಾಗರಿಕ ಪ್ರಶಸ್ತಿ ಪದ್ಮಭೂಷಣವೂ ಸೇರಿದಂತೆ ಕೇರಳ, ತಮಿಳ್ ನಾಡು ಸರಕಾರಗಳ ಹಾಗೂ ಅನೇಕಾನೇಕ ಸಂಘ ಸಂಸ್ಥೆಗಳ ಪ್ರಶಸ್ತಿಗಳಿಗೆ, ಗೌರವಗಳಿಗೆ ಪಾತ್ರರಾಗಿದ್ದಾರೆ.