ಮೂಡುಬಿದಿರೆ: ಅಂತರ್ಜಲ ವೃದ್ಧಿ, ಕೆರೆಗಳ ಅಭಿವೃದ್ಧಿಗೆ ಜಲ ಸಂರಕ್ಷಣೆಗೆ ಮೂಡುಬಿದಿರೆ ಸಂಘ ಸಂಸ್ಥೆಗಳು ಒಗ್ಗಟ್ಟಾಗಿವೆ. ಮೂಡುಬಿದಿರೆ ಜಲಸಂರಕ್ಷಣಾ ಸಮಿತಿ ಹೆಸರಿನಲ್ಲಿ ಮೂಡುಬಿದಿರೆ ಹೋಬಳಿಯಲ್ಲಿ ಜಲಸಂರಕ್ಷಣೆಯ ಜಾಗೃತಿ, ಅದಕ್ಕಿಂತ ಮುಖ್ಯವಾಗಿ ಜಲಸಂರಕ್ಷಣೆಯ ವಿಧಾನಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರಗತಿಪರ ಕೃಷಿಕ, ಜಲತಜ್ಞ ಡಾ.ಎಲ್.ಸಿ ಸೋನ್ಸ್ ಹಾಗೂ ಮಳೆ ನೀರಿನ ಕೊಯ್ಲುಗಳ ಕುರಿತು ವಿಶೇಷ ಆಸಕ್ತಿವಹಿಸುತ್ತಿರುವ ಪುರಸಭಾ ಸದಸ್ಯ ಪಿ.ಕೆ ಥೋಮಸ್ ನೇತೃತ್ವದ ಸಮಿತಿಯು ಊರ ನೀರ ಸಮಸ್ಯೆಯನ್ನು ದೂರವಾಗಿಸಲು ಪಣತೊಟ್ಟಿದೆ.
ಮೂಡುಬಿದಿರೆ ರೋಟರಿ ಕ್ಲಬ್ ಮುಂದಾಳುತ್ವದಲ್ಲಿ ಜಲ ಸಂರಕ್ಷಣೆ, ಅಂತರ್ಜಲ ವೃದ್ಧಿಗಾಗಿ ಅಗತ್ಯ ಕ್ರಮಗಳನ್ನು ರೂಪಿಸುವ ನಿಟ್ಟಿನಲ್ಲಿ ಸಮಾನ ಮನಸ್ಕ ಸಂಘಟನೆಗಳು, ಸ್ಥಳೀಯಾಡಳಿತ, ನಾಗರಿಕರ ಸಹಯೋಗದೊಂದಿಗೆ ಮೂಡುಬಿದಿರೆ ಜಲಸಂರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಕೃಷಿ ವಿಚಾರ ವಿನಿಮಯ ಕೇಂದ್ರ, ಮೂಡುಬಿದಿರೆ ಪುರಸಭೆ, ಮೂಡುಬಿದಿರೆ ಪ್ರೆಸ್ ಕ್ಲಬ್ ರೋಟರಿ ಕ್ಲಬ್ ಗೆ ಸಾಥ್ ನೀಡಿದೆ.
ಜಾಗೃತಿ-ಕಾರ್ಯಪ್ರವೃತ್ತಿ:
ಜಲಸಂರಕ್ಷಣೆ ಕುರಿತು ಜನರಲ್ಲಿ ಮುಖ್ಯವಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಂದು ಉದ್ದೇಶವಾದರೆ. ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಜಲಸಂರಕ್ಷಣೆಯ ವಿಧಾನಗಳನ್ನು ಅನುಷ್ಠಾನಗೊಳಿಸುವುದು ಮುಖ್ಯ ಉದ್ದೇಶವಾಗಿದೆ. ಮೂಡುಬಿದಿರೆ ರೋಟರಿ ಕ್ಲಬ್ ನವರು ಈಗಾಗಲೇ ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ 16 ಕೆರೆಗಳನ್ನು ಗುರುತಿಸಿದ್ದು, ಅವುಗಳಿಗೆ ಪುನರುಜ್ಜೀವನಗೊಳಿಸುವ ಕೆಲಸ, ಒಡ್ಡುಗಳನ್ನು ನಿರ್ಮಿಸುವುದು, 31 ಅನುಪಯುಕ್ತ ಕೊಳವೆ ಬಾವಿಗಳಿಗೆ ಮರುಪೂರಣಗೊಳಿಸುವುದು ಹಾಗೂ ಸರ್ಕಾರಿ ಬಾವಿಗಳನ್ನು ಪುನರುಜ್ಜೀವನಗೊಳಿಸುವುದು ಸಮಿತಿಯ ಪ್ರಮುಖ ವಿಷಯವಾಗಿದೆ. ಸಮಿತಿಯಲ್ಲಿ ವಿವಿಧ ತಂಡಗಳನ್ನು ರಚಿಸಿ ಹೋಬಳಿಯ ಶಾಲೆಗಳಲ್ಲಿ ನೀರಿನ ಮಿತ ಬಳಕೆಯ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಪ್ರಥಮ ಹಂತದಲ್ಲಿ ಮಾಡುವುದಾಗಿ ಸಮಿತಿಯ ಸಮಾಲೋಚನಾ ಸಭೆಯಲ್ಲಿ ನಿರ್ಣಯಿಸಲಾಗಿದೆ. ಪುರಸಭೆ ಹಾಗೂ ಸ್ಥಳೀಯಾಡಳಿತಗಳಲ್ಲಿ ನೀರು, ಅದರ ಸಂರಕ್ಷಣೆಗೆ ಸಕರ್ಾರದ ಅನುದಾನದ ಸಮರ್ಪಕ ಬಳಕೆಗೂ ಸ್ಥಳೀಯಾಡಳಿತಕ್ಕೆ ಮನವರಿಕೆ ಮಾಡುವಲ್ಲಿ ಸಮಿತಿ ಚಿಂತನೆ ನಡೆಸುತ್ತಿದೆ.
ಸಮಿತಿಗೆ ಡಾ.ಎಲ್.ಸಿ ಸೋನ್ಸ್ ಅಧ್ಯಕ್ಷ:
ರೋಟರಿ ಸಮ್ಮೀಲನ್ ಸಭಾಭವನದಲ್ಲಿ ಗುರುವಾರ ನಡೆದ ಸಮಾಲೋಚನ ಸಭೆಯಲ್ಲಿ ಸಮಿತಿಯನ್ನು ರಚಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೃಷಿ,ಜಲಸಂರಕ್ಷಣೆಯಲ್ಲಿ ತಜ್ಞರಾಗಿರುವ ಡಾ.ಎಲ್.ಸಿ ಸೋನ್ಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಿ.ಕೆ ಥೋಮಸ್ ಕಾರ್ಯಾಧ್ಯಕ್ಷರಾಗಿದ್ದು, ಜೈಸನ್ ತಾಕೋಡೆ( ಕಾರ್ಯದರ್ಶಿ),ರಾಜವರ್ಮ ಬೈಲಂಗಡಿ(ಉಪಾಧ್ಯಕ್ಷ) ಅನಂತಕೃಷ್ಣ ರಾವ್ (ಕೋಶಾಧಿಕಾರಿ), ವಿನೋದ್ ಸೆರಾವೋ(ಜೊತೆ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.
ಮಹಮ್ಮದ್ ಶರೀಫ್, ಡಾ.ಮುರಳೀಕೃಷ್ಣ, ಸುಭಾಶ್ಚಂದ್ರ ಚೌಟ, ರತ್ನಾಕರ ದೇವಾಡಿಗ, ಡಾ.ಸುದೀಪ್ ಕುಮಾರ್, ಶ್ರೀಕಾಂತ್ ರಾವ್, ಸೀತಾರಾಮ ಆಚಾರ್ಯ, ಅಲ್ವಿನ್ ಮೆನೇಜಸ್, ಜಿನೇಂದ್ರ ಹೆಗ್ಡೆ, ಧನಂಜಯ ಮೂಡುಬಿದಿರೆ, ಸುರೇಶ್ ಕೋಟ್ಯಾನ್, ಮಕ್ಬೂಲ್ ಹುಸೇನ್, ಲವೀನಾ ತಾಕೋಡೆ, ದಿನೇಶ್, ಯಶೋಧರ ಬಂಗೇರ, ಕೊರಗಪ್ಪ ಕಾರ್ಯಕರಣಿ ಸಮಿತಿಯ ಸದಸ್ಯರಾಗಿದ್ದಾರೆ.