ಉಳ್ಳಾಲ: ‘ಬೇಲಿಯೇ ಎದ್ದು ಹೊಲ ಮೇಯುವಂತಾಯಿತು’ ಉಳ್ಳಾಲದ ಇಬ್ಬರು ಪೊಲೀಸರಿಗೆ ಈ ಮಾತು ಅನ್ವಯಿಸುವಂತಾಗಿದೆ. ಪರ್ಮಿಟ್ ತೋರಿಸಿದರೂ ರೋಲ್ ಕಾಲ್ ಗೆ ಇಳಿದ ಪೊಲೀಸರು ಮರಳು ಲಾರಿ ಚಾಲಕನಿಂದ ಲಂಚ ಸ್ವೀಕರಿಸಿದ ಘಟನೆ ತೊಕ್ಕೊಟ್ಟು ಚೆಂಬುಗುಡ್ಡೆ ಸಮೀಪ ನಡೆದಿರುವುದು ಸ್ಥಳೀಯರೋರ್ವರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಅದು ಕಲ್ಲಾಪುವಿನಿಂದ ಕೊಣಾಜೆ ಕಡೆಗೆ ಮರಳು ಸಾಗಾಟ ನಡೆಸುತ್ತಿದ್ದ ಲಾರಿ. ಪಿಸಿಆರ್ ವಾಹನ ಸರಿಯಿಲ್ಲದೇ ಇದ್ದುದರಿಂದ, ಠಾಣೆಯ ಆಂಬ್ಯುಲೆನ್ಸ್ ವಾಹನದಲ್ಲಿ ಪಿಸಿಆರ್ ಕರ್ತವ್ಯದಲ್ಲಿ ಉಳ್ಳಾಲ ಠಾಣೆಯ ಪೊಲೀಸ್ ಸಿಬ್ಬಂದಿ ಶಶಿ ಹಾಗೂ ನಟೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ಚೆಂಬುಗುಡ್ಡೆ ಸಮೀಪದ ಕ್ಯಾಂಟೀನ್ ಎದುರುಗಡೆ ಲಾರಿಯನ್ನು ಕಂಡು ತಡೆದ ಪೊಲೀಸರು ಲಾರಿ ಚಾಲಕನಲ್ಲಿ ದಾಖಲೆ ತೋರಿಸುವಂತೆ ಕೇಳಿದ್ದರು.
ಚಾಲಕ ತಾತ್ಕಾಲಿಕವಾಗಿ ಪಡೆದ ಮರಳು ಪರ್ಮಿಟನ್ನು ತೋರಿಸಿದ್ದನು. ಆದರೂ ಬೆಂಬಿಡದ ಪೊಲೀಸರು ಅದು ಸಾಕಾಗೋಲ್ಲ ಎಂದು ರೋಲ್ ಕಾಲ್ ಗೆ ಇಳಿದಿದ್ದರು. ಆದರೆ ಉಪಾಯವಿಲ್ಲದೆ ಚಾಲಕ ರೂ.100 ಕೊಟ್ಟರೂ ಪೊಲೀಸರಿಬ್ಬರು ಬಾಯ್ಬಿಟ್ಟು ಮತ್ತೆ ಹೆಚ್ಚುವರಿ ರೂ.100 ಕೇಳಿದ್ದಾರೆ. ಪೊಲೀಸರ ಉಸಾಬಾರಿ ಬೇಡ ಅಂದುಕೊಂಡ ಚಾಲಕ ರೂ.200 ನೀಡಿ ಸ್ಥಳದಿಂದ ಲಾರಿ ಸಮೇತ ತೆರಳಿದ್ದಾರೆ. ಇದನ್ನು ಸ್ಥಳೀಯರೊಬ್ಬರು ಮೊಬೈಲ್ ಮೂಲಕ ಚಿತ್ರೀಕರಣ ನಡೆಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿ ತಿರುಗಾಡುತ್ತಿದೆ.