ಮೂಡುಬಿದಿರೆ: ಸ್ವಚ್ಛ ಭಾರತ ಅಭಿಯಾನ ಅಭಿಯನಕ್ಕೆ ಪೂರಕವಾಗಿ ಕಚೇರಿಗಳನ್ನು ಸ್ವಚ್ಛ, ಸುಂದರವಾಗಿಸುವ ಕಲ್ಪನೆಯಿಂದ ಮೂಡಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ವರ್ಲಿ ಚಿತ್ರದ ಚಿತ್ತಾರವನ್ನು ವಿದ್ಯಾರ್ಥಿಗಳೇ ಬಿಡಿಸಿದ್ದಾರೆ.
ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್, ವರ್ಲಿ ಚಿತ್ರ ಅಲಂಕಾರಕ್ಕೆ ಗುರುವಾರ ಚಾಲನೆ ನೀಡಿದರು. ದೇಶ-ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಮೂಡುಬಿದಿರೆಯನ್ನು ಸ್ವಚ್ಛ ಸುಂದರವಾಗಿರಿಸುವುದು ಪ್ರತಿಯೊಬ್ಬರ ಕರ್ತವ್ಯ. ಹೊಸ ಚಿಂತನೆಗಳೊಂದಿಗೆ ವರ್ಲಿ ಚಿತ್ರದ ಮಾದರಿಯಲ್ಲಿ ಸ್ವಚ್ಛ ಮೂಡುಬಿದಿರೆ ಪರಿಕಲ್ಪನೆ ಮೂಡಿಬರಲಿ. ಪ್ರತಿ ಶಾಲೆಗಳಿಗೂ ಇದೊಂದು ಸ್ಪೂರ್ತಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರಾಜಶ್ರೀ, ಶಿಕ್ಷಣ ಸಂಯೋಜಕ ದೇವದಾಸ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದ ತಾರನಾಥ ಕೈರಂಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಮಂಚಿ ಕೊಳ್ನಾಡು ಪ್ರೌಢಶಾಲೆಯ ಸುಮಾರು ಇಪ್ಪತ್ತೊಂದು ವಿದ್ಯಾರ್ಥಿಗಳು ಕುಂಚ ಹಿಡಿದು ಭಿತ್ತಿಯ ತುಂಬೆಲ್ಲಾ ಚಿತ್ರಗಳನ್ನು ರಚಿಸಿದರು. ಶೈಕ್ಷಣಿಕ ಯೋಜನೆಗಳು ಜಿಲ್ಲೆಯ ಸಾಂಸ್ಕೃತಿಕ ವೈಭವಗಳನ್ನು ಬಿಂಬಿಸುವ ಚಿತ್ರಗಳನ್ನು ಸುಮಾರು 100 ಅಡಿ ವ್ಯಾಪ್ತಿಯಲ್ಲಿ ರಚಿಸಿ ಶೃಂಗಾರಗೊಳಿಸಿದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಾನಂದ ಕಾಯ್ಕಿಣಿ ಕಾರ್ಯಕ್ರಮ ನಿರ್ವಹಿಸಿದರು. ಪತ್ರಾಂಕಿತ ವ್ಯವಸ್ಥಾಪಕ ಮನೋಹರ ಕಾಮತ್, ಶಿಕ್ಷಣ ಸಂಯೋಜಕರು ಹಾಗೂ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.