ಬೆಳ್ತಂಗಡಿ: ಬೈಕ್ ಹಾಗೂ ಪಿಕಪ್ ವಾಹನ ಪರಸ್ಪರ ಡಿಕ್ಕಿಯಾದ ಪರಿಣಾಮ ವಿಟ್ಲದ ಯುವ ಛಾಯಾಗ್ರಾಹಕನೊಬ್ಬ ಮೃತಪಟ್ಟ ಘಟನೆ ಕೊಕ್ಕಡದಲ್ಲಿ ಶುಕ್ರವಾರ ಸಂಭವಿಸಿದೆ.
ವಿಟ್ಲ ಕಟ್ಟೆ ಮನೆ ವೀರಪ್ಪ ಮೂಲ್ಯ ಅವರ ಕಿರಿಯ ಮಗ ಧನಂಜಯ ಮೂಲ್ಯ (34)ಎಂಬುವರೇ ಮೃತಪಟ್ಟವರು. ಇವರು ಗೋಳಿತೊಟ್ಟಿವಿನಿಂದ ಪತ್ನಿಯ ತಂದೆ ಮನೆ ಅರಸಿನಮಕ್ಕಿ ಯ ಪಡ್ಡಾಯಿಬೆಟ್ಟು ಎಂಬಲ್ಲಿಗೆ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದರು. ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಪಿಕಪ್ ವಾಹನ ಇವರ ಬೈಕ್ಗೆ ಡಿಕ್ಕಿ ಹೊಡೆಯಿತು. ಅಪಘಾತದ ರಭಸಕ್ಕೆ ಧನಂಜಯ ಅವರ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟರು.
ವರ್ಷದ ಹಿಂದೆಯಷ್ಟೆ ಇವರು ವಿವಾಹವಾಗಿದ್ದರು. ಅಯ್ಯಪ್ಪ ವ್ರತಧಾರಿಯಾಗಿದ್ದ ಇವರು ಮುಂದಿನ ಸೋಮವಾರದಂದು ಶಬರಿಮಲೆಗೆ ಯಾತ್ರೆ ಕೈಗೊಳ್ಳಲಿದ್ದರು. ಈ ಯಾತ್ರೆಯ ಪೂರ್ವಭಾವಿಯಾಗಿ ತಮ್ಮ ಮೂಲ ಕುಟುಂಬದ ಮನೆಯೂ ಅರಸಿನಮಕ್ಕಿ ಯಲ್ಲಿ ಇರುವುದರಿಂದ ಅಲ್ಲಿ ದೈವ ದೇವರುಗಳಿಗೆ ಕೈಮುಗಿದು ಮತ್ತು ಹೆಂಡತಿಯ ಮನೆಯವರಿಗೂ, ಸಂಬಂಧಿಕರಿಗೂ ಸೋಮವಾರದಂದು ಇರುಮುಡಿ ಕಟ್ಟುವ ಪೂಜೆಗೆ ಆಮಂತ್ರಿಸಲೆಂದು ಶುಕ್ರವಾರ ಬೆಳಗ್ಗೆ 6 ಗಂಟೆಗೆ ವಿಟ್ಲದಿಂದ ಹೊರಟು ಅರಸಿನಮಕ್ಕಿ ಗೆ ಹೋಗುತ್ತಿದ್ದರು.
ಮೃತ ವ್ಯಕ್ತಿ ವೃತ್ತಿಯಲ್ಲಿ ಛಾಯಾಗ್ರಾಹಕರಾಗಿ ವಿಟ್ಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ತನ್ನ ಅಣ್ಣನ ಮೊಬೈಲ್ ಅಂಗಡಿಯನ್ನೂ ನೋಡಿಕೊಳ್ಳುತ್ತಿದ್ದರು. ಇವರಿಗೆ ಪತ್ನಿ ಮತ್ತು 10 ತಿಂಗಳ ಗಂಡು ಮಗು ಇದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೋಲೀಸ್ ಠಾಣಾ ಉಪ ನಿರೀಕ್ಷಕ ಮಾಧವ ಕೂಡ್ಲು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಡಿಕ್ಕಿಹೊಡೆದ ವಾಹನದ ಮೇಲೆ ಕೇಸು ದಾಖಲಿಸಿದ್ದಾರೆ.