ಉಳ್ಳಾಲ: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಲಾರಿ ಢಿಕ್ಕಿ ಹೊಡೆದು ಮರದ ದಿಮ್ಮಿಯಿಂದ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ಶನಿವಾರ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಪುರದಲ್ಲಿ ಸಂಭವಿಸಿದೆ.
ಬಂಡಿಕೊಟ್ಯ ನಿವಾಸಿ ನಿಫಾನ್(21) ಮತ್ತು ಮುಕ್ಕಚ್ಚೇರಿ ನಿವಾಸಿ ಹನೀಫ್ (21) ಕೊಲೆಯತ್ನಕ್ಕೊಳಗಾದವರಾಗಿದ್ದಾರೆ. ಇವರನ್ನು ಶರೀಫ್, ಇಮ್ತಿಯಾಝ್, ಆತುಫ್, ಇರ್ಷಾದ್, ಹಕೀಂ ಮತ್ತು ಇಬ್ಬರು ಸಹೋದರರ ಸಹಿತ 25 ಮಂದಿಯ ತಂಡ ತಲವಾರು, ದೊಣ್ಣೆಗಳಿಂದ ಹೊಡೆದು ಹತ್ಯೆಗೆ ಯತ್ನಿಸಿದ್ದಾರೆಂದು ಆರೋಪಿಸಿದ್ದಾರೆ.
ಇಲೆಕ್ಷ್ಟೀಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಿಫಾನ್ ಮತ್ತು ಹನೀಫ್ ಕೆಲಸದ ನಿಮಿತ್ತ ಉಳ್ಳಾಲ ಕಡೆಗೆ ಆಕ್ಟೀವಾ ಸ್ಕೂಟರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಹಿಂಭಾಗದಿಂದ ಮರಳು ಹೇರಿಕೊಂಡು ಬಂದ ಲಾರಿ ಸ್ಕೂಟರಿಗೆ ಢಿಕ್ಕಿ ಹೊಡೆಸಿ ಇಬ್ಬರನ್ನು ಕೆಳಗೆ ಉರುಳಿಸಿದ್ದಾರೆ. ಬಳಿಕ ಸ್ಥಳದಲ್ಲೇ ಜಮಾಯಿಸಿದ್ದ 20 ಮಂದಿಯ ತಂಡ ಮರದ ದಿಮ್ಮಿಯಿಂದ ಬಡಿದು ಕೊಲೆಗೆ ಯತ್ನಿಸಿದ್ದಾರೆ.
ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ದುಷ್ಕರ್ಮಿಗಳೆಲ್ಲರೂ ಪರಾರಿಯಾಗಿದ್ದಾರೆ. ಆರೋಪಿಗಳು ನಿಫಾನ್ ಬಳಿಯಿದ್ದ ರೂ.25,000 ನಗದು ದರೋಡೆಗೈದಿದ್ದಾರೆಂದು ಆರೋಪಿಸಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮರಳು ಮಾಫಿಯಾದ ಕೃತ್ಯ!
ಶರೀಫ್ ಯಾನೆ ಚಾರಕುಟ್ಟಿ ಹಿಂದಿನಿಂದಲೂ ಉಳ್ಳಾಲ ಭಾಗದಲ್ಲಿ ಗಲಭೆಗಳನ್ನು ನಡೆಸುತ್ತಲೇ ಬಂದಿದ್ದಾನೆ. ಮರಳು ಮಾಫಿಯಾದಲ್ಲಿ ಸಕ್ರಿಯರಾಗಿರುವ ಈತ ತಂಡವೊಂದನ್ನು ಸೇರಿಸಿಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾನೆ. ಇಬ್ಬರು ಯುವಕರನ್ನು ಅಪಘಾತ ನಡೆಸಿ ಕೊಲೆಗೆ ಯತ್ನಿಸಿರುವುದಲ್ಲದೆ ಅವರ ಮೇಲೆ ಹಲ್ಲೆಯೂ ನಡೆಸಿದ್ದಾನೆ. ಅಲ್ಲದೆ ನಿಫಾನ್ ಮನೆಯೊಳಗಡೆ ನುಗ್ಗಿ ಆತನ ತಾಯಿಗೆ ಬೆದರಿಕೆಯೊಡ್ಡಿ ಮನೆಯೊಳಗಿದ್ದ ಟಿ.ವಿಯನ್ನು ಪುಡಿಗೈದು ಹಾನಿಗೊಳಿಸಿದ್ದಾರೆ. ಅಲ್ಲದೆ ಮನೆಮಂದಿ ಎಲ್ಲರನ್ನೂ ರಾತ್ರಿಯೊಳಗೆ ಕೊಲೆ ನಡೆಸುವುದಾಗಿ ಜೀವಬೆದರಿಕೆಯೊಡ್ಡಿ ತೆರಳಿದ್ದಾನೆ ಎಂದು ನಿಫಾನ್ ತಂದೆ ಸಿದ್ದೀಕ್ ಉಳ್ಳಾಲ ಆರೋಪಿಸಿದ್ದಾರೆ.