ಕಾರ್ಕಳ: 94ಸಿ ಅನ್ವಯ ತಾಲೂಕಿನ ಬಡ ಜನರಿಗೆ ಹಕ್ಕು ಪತ್ರ ನೀಡಲು ಬಿಡುವುದಿಲ್ಲ ಎಂಬ ಮಾಜಿ ಶಾಸಕ ಗೋಪಾಲ ಭಂಡಾರಿಯವರ ಹೇಳಿಕೆ ಅಧಿಕಾರಿಗಳ ಮೇಲೆ ಒತ್ತಡ ಹೇರುವ ತಂತ್ರವಾಗಿದ್ದು ಅವರ ಈ ಪ್ರಯತ್ನ ಅತ್ಯಂತ ಖಂಡನೀಯವಾಗಿದೆ. ವಿಕಾಸ ಕಛೇರಿ ಅದೊಂದು ಜನಸೇವಾ ಕಛೇರಿ ಹೊರತು ಪಕ್ಷದ ಅಧೀಕೃತ ಕಛೇರಿ ಅಲ್ಲ. ಎಂದು ಶಾಸಕ ವಿ.ಸುನೀಲ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ಅಪಾದಿಸಿದ್ದಾರೆ.
ಗೋಪಾಲ ಭಂಡಾರಿ ಶಾಸಕರಾಗಿದ್ದ ಸಂದರ್ಭ ಆಗಿನ ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ವಾಸವಿರುವ ಬಡ ಜನರಿಗೆ ಹಕ್ಕು ಪತ್ರ ನೀಡಲು ಮುಂದಾದಾಗ ಅಂದಿನ ರಾಜ್ಯ ಪಾಲರ ಮೂಲಕ ಅಡ್ಡಿ ಪಡಿಸಿರುವುದು ಜನ ಮರೆತಿಲ್ಲ. ಫಲಾನುಭವಿಗಳ ಜಾಗ ಸರ್ವೇ ನಡೆಸದಂತೆ ಕಂದಾಯ ಅಧಿಕಾರಿಗಳಿಗೆ ಪರೋಕ್ಷವಾಗಿ ತಡೆ ಒಡ್ಡುತ್ತಿರುವ ಅವರ ಪ್ರಯತ್ನ ವಿಫಲವಾಗುತ್ತಿದೆ. ಇದೀಗ ಅದನ್ನೆಲ್ಲ ಮೀರಿಸಿ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಬಡವರಿಗೆ ಹಕ್ಕು ಪತ್ರ ನೀಡುತ್ತಿರುವ ಸಂದರ್ಭದಲ್ಲಿ ಪತ್ರಿಕಾ ಹೇಳಿಕೆಗಳನ್ನು ನೀಡಿ ಬೆದರಿಸುವ ತಂತ್ರದ ಮೂಲಕ ಹಕ್ಕು ಪತ್ರ ನೀಡದಂತೆ ಅಡ್ಡಿ ಪಡಿಸುತ್ತಿದ್ದಾರೆ. ಆದರೆ ನಾನು ಬಡ ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡುವ ತನಕ ವಿರಮಿಸುವುದಿಲ್ಲ ಎಂದು ದೃಢನಿಲುವನ್ನು ವ್ಯಕ್ತಪಡಿಸಿದ್ದಾರೆ.
ಮಾಜಿ ಶಾಸಕರು ತನ್ನ ಶಾಸಕತ್ವದ ಅವಧಿಯಲ್ಲಿ ಬಡವರ ನಿವೇಶನದ ಬಗ್ಗೆ ಅಧಿವೇಶನದಲ್ಲಿ ಒಂದೇ ಒಂದು ಭಾರಿ ಮಾತನಾಡಿದ ಇತಿಹಾಸವಿಲ್ಲ. ಇದೀಗ ನಾನು ಅಧಿವೇಶನದಲ್ಲಿ ಪದೇ ಪದೇ ಚರ್ಚೆ ನಡೆಸಿ ಸರಕಾರದ ಮೇಲೆ ಒತ್ತಡ ಹೇರಿದ ಪರಿಣಾಮ ಇದೀಗ ಹಕ್ಕು ಪತ್ರ ಸಿಗುತ್ತಿದೆ ಹಾಗೂ ಇದರ ಪರಿಣಾಮದಿಂದಾಗಿಯೇ ದಂಡ ಶುಲ್ಕ ಪಾವತಿಯಲ್ಲಿ ಶೇ. 50ರಿಂದ ಶೇ. 25 ರಷ್ಟು ಕಡಿತಗೊಂಡಿದೆ ಎಂಬ ವಿವರವನ್ನು ನೀಡಿದರು.
ಅಧಿಕಾರ ಇರಲಿ, ಇಲ್ಲದಿರಲಿ ಬಡವರ ಪರ ಕೆಲಸ ಮಾಡುತ್ತಿರುವುದು ನನ್ನ ಸಮಾಜ ಸೇವೆಯಾಗಿದೆ. ಮಾಜಿ ಶಾಸಕರು ತನ್ನ ಪಕ್ಷದ, ಸರಕಾರದ ಮೂಲಕ ಎಷ್ಟೇ ಅಡ್ಡಿ ಪಡಿಸಿದರೂ, ಬೆದರಿಕೆ ಹಾಕಿದರೂ ತಾಲೂಕಿನ ಬಡ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಕಾರ್ಯ ಮುಂದುವರಿಯಲಿದೆ ಎಂಬ ಸ್ವಷ್ಟ ಸಂದೇಶವನ್ನು ಇದೇ ಸಂದರ್ಭದಲ್ಲಿ ನೀಡಿದ್ದಾರೆ.