ಸುಳ್ಯ: ಅನುದಾನ ಹಂಚಿಕೆ ಮತ್ತು ಕಾಮಗಾರಿಗಳ ಟೆಂಡರ್ ನಡೆಸಿರುವುದರಲ್ಲಿ ತಾರತಮ್ಯ ಆಗಿದೆ ಆದುದರಿಂದ ಈಗ ನಡೆಸಿರುವ ಟೆಂಡರನ್ನು ರದ್ದು ಪಡಿಸಬೇಕು ಎಂದು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಒಟ್ಟಾಗಿ ಒತ್ತಾಯಿಸಿದ ಮತ್ತು ಇದು ಸಭೆಯಲ್ಲಿ ಗದ್ದಲಯ ವಾತಾವರಣ ಸೃಷ್ಠಿಸಿದ ಘಟನೆ ಸುಳ್ಯ ನಗರ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಅಧ್ಯಕ್ಷೆ ಶೀಲಾವತಿ ಮಾಧವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಹಿಂದೆ ಆದ ನಿರ್ಣಯದಂತೆ ಎಸ್ಎಫ್ಸಿ, ವರ್ಗ ಒಂದು ಮತ್ತು 14ನೇ ಹಣಕಾಸು ಯೋಜನೆಯ ಅನುದಾನ ಸೇರಿಸಿ ಪ್ರತಿ ವಾಗೆ 8.25 ಲಕ್ಷದ ಅನುದಾನ ನೀಡಲು ನಗರ ಪಂಚಾಯಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಕೆಲವೇ ಕೆಲವು ವಾರ್ಡ್ ಗಳ ಅಭಿವೃದ್ಧಿಗೆ ಮಾತ್ರ ಅನುದಾನ ಮೀಸಲಿರಿಸಿ ಟೆಂಡರ್ ಕರೆಯಲಾಗಿದೆ, ಮಾತ್ರವಲ್ಲದೆ ಕೆಲವು ವಾರ್ಡ್ ಗಳಿಗೆ ದೊಡ್ಡ ಮೊತ್ತದ ಅನುದಾನ ಮೀಸಲಿರಿಸಲಾಗಿದೆ ಎಂದು ಸದಸ್ಯರು ದೂರಿದರು. ಈ ಟೆಂಡರ್ ಪ್ರಕ್ರಿಯೆಯನ್ನು ರದ್ದುಪಡಿಸಬೇಕೆಂದು ಸದಸ್ಯರಾದ ಕೆ.ಎಸ್.ಉಮ್ಮರ್ ಮತ್ತು ರಮಾನಂದ ರೈ ಪಟ್ಟು ಹಿಡಿದರು. ಇದಕ್ಕೆ ಮಾಜಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಹೊರತುಪಡಿಸಿ ಆಡಳಿತ ಮತ್ತು ವಿರೋಧ ಪಕ್ಷದ ಎಲ್ಲಾ ಸದಸ್ಯರೂ ಬೆಂಬಲ ಸೂಚಿಸಿದರು. ಇದು ಭಾರೀ ಗದ್ದಲಕ್ಕೆ ಮತ್ತು ಚರ್ಚೆಗೆ ಗ್ರಾಸವಾಯಿತು. ಹಿಂದೆ ಆದ ನಿರ್ಣಯದಂತೆ ಟೆಂಡರ್ ಆಗಲಿ, ನಮ್ಮ ಅನುದಾನ ನಮಗೆ ಕೊಡಿ ಇದರಲ್ಲಿ ತಾರತಮ್ಯ ಯಾಕೆ ಎಂದು ಸದಸ್ಯರು ಪ್ರಶ್ನಿಸಿದರು. ಕಳೆದ ಜೂನ್ ತಿಂಗಳಲ್ಲಿ ಆದ ನಿರ್ಣಯವನ್ನು ಬದಲಿಸಲು ಆಗುವುದಿಲ್ಲ, ಇದಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡುವುದಿಲ್ಲ ಎಂದು ಮುಖ್ಯಾಧಿಕಾರಿ ಮತ್ತು ಇಂಜಿನಿಯರ್ ತಿಳಿಸಿದಾಗ ಸದಸ್ಯರು ಇವರನ್ನು ತೀವ್ರ ತರಾಟೆಗೆತ್ತಿಕೊಂಡರು.
ಹಿಂದೆ ಆದ ನಿರ್ಣಯದಂತೆ ಅನುದಾನ ಬಿಡುಗಡೆ ಆಗಿಲ್ಲ, ಒತ್ತಡಕ್ಕೆ ಮಣಿದು ಅಧಿಕಾರಿಗಳು ನಿರ್ಣಯವನ್ನು ಬದಲಿಸಿ ತಮಗೆ ಬೇಕಾದಂತೆ ಟೆಂಡರ್ ಮಾಡಿದ್ದಾರೆ ಇದನ್ನು ಒಪ್ಪಲು ಸಾಧ್ಯವಿಲ್ಲ. ಇದರ ವಿರುದ್ಧ ಜಿಲ್ಲಾಧಿಕಾರಿಗಳಲ್ಲಿಗೆ ಸದಸ್ಯರ ನಿಯೋಗ ತೆರಳುವುದಾಗಿ ಗೋಕುಲ್ ದಾಸ್, ರಮಾನಂದ ರೈ ಮತ್ತು ಉಮ್ಮರ್ ಹೇಳಿದಾಗ ಇದಕ್ಕೆ ಉಳಿದ ಸದಸ್ಯರು ಬೆಂಬಲ ಸೂಚಿಸಿದರು. ಸುಮಾರು ಒಂದೂವರೆ ಘಂಟೆಗೂ ಹೆಚ್ಚು ಸಮಯ ಈ ಕುರಿತು ಚರ್ಚೆ ನಡೆದು ಟೆಂಡರ್ ಪ್ರಕ್ರಿಯೆಯನ್ನು ರದ್ದು ಪಡಿಸುವ ನಿರ್ಣಯ ಕೈಗೊಳ್ಳದಿದ್ದರೆ ಸಭೆ ಮುಂದುವರಿಸಲು ಬಿಡುವುದಿಲ್ಲ ಎಂದು ಸದಸ್ಯರು ಹೇಳಿದರು. ಈ ಸಂದರ್ಭದಲ್ಲಿ ತೀವ್ರ ವಾಗ್ವಾದ ಚರ್ಚೆ ಗರಿಗೆದರಿದವು. ಇದನ್ನು ಸರಿಪಡಿಸದಿದ್ದರೆ ಸಭೆಯನ್ನು ಬಹಿಷ್ಕರಿಸುವುದಾಗಿ ಕೆಲವು ಸದಸ್ಯರು ಘೋಷಿಸಿದರು. ಇದನ್ನು ಸರಿಪಡಿಸದೆ ಸಭೆಗೆ ಹಾಜರಾಗುವುದಿಲ್ಲ, ಈ ರೀತಿಯ ಸರ್ವಾಧಿಕಾರಿ ಧೋರಣೆ ಮತ್ತು ಅನ್ಯಾಯ ಒಪ್ಪುವುದಿಲ್ಲ ಎಂದು ಸದಸ್ಯರು ಪಟ್ಟು ಹಿಡಿದರು.
ಐದನೇ ವಾರ್ಡ್ ಗೆ 75 ಲಕ್ಷ ಅನುದಾನ.?
ಮಾಜಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಅವರ ಐದನೇ ವಾರ್ಡ್ ಗೆ ಸುಮಾರು 75 ಲಕ್ಷದಷ್ಟು ಅನುದಾನವನ್ನು ಮೀಸಲಿಡಲಾಗಿದೆ. ಇದು ಅಭಿವೃದ್ಧಿಯಲ್ಲಿ ಮಾಡಿದ ತಾರತಮ್ಯ ಎಂದು ಕೆ.ಎಸ್.ಉಮ್ಮರ್ ಸಭೆಯಲ್ಲಿ ದಾಖಲೆಯನ್ನು ಪ್ರದರ್ಶಿಸಿದರು. ತಾರತಮ್ಯ ಎಸಗಿ ಒಂದೇ ವಾರ್ಡ್ ಗೆ ಅನುದಾನ ನೀಡಿದಕ್ಕೆ ಸದಸ್ಯರಾದ ರಮಾನಂದ ರೈ, ಎನ್.ಎ.ರಾಮಚಂದ್ರ, ಗೋಕುಲ್ ದಾಸ್, ಕೆ.ಎಂ.ಮುಸ್ತಫಾ, ಮೀನಾಕ್ಷಿ ಸೇರಿದಂತೆ ಎಲ್ಲಾ ಸದಸ್ಯರೂ ವಿರೋಧ ವ್ಯಕ್ತಪಡಿಸಿದರು. ಎಲ್ಲಾ ಸದಸ್ಯರ ವಾರ್ಡ ಗೂ ಇಷ್ಟೇ ಅನುದಾನವನ್ನು ನೀಡಿ ಇಲ್ಲದಿದ್ದರೆ ಟೆಂಡರನ್ನು ರದ್ದು ಪಡಿಸಿ ಎಂದು ಅವರು ಒತ್ತಾಯಿಸಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ಮಾಜಿ ಅಧ್ಯಕ್ಷರು ತಮ್ಮ ವಾರ್ಡ್ ಗೆ ಅನುದಾನ ತರಿಸಿದ್ದಾರೆ ಎಂದು ಸದಸ್ಯರು ಒಕ್ಕೊರಲಿನಿಂದ ದೂರಿದರು. ಕೆಲವು ಕಾಮಗಾರಿಗಳನ್ನು ತಪ್ಪಾಗಿ ತಮ್ಮ ವಾರ್ಡ್ ಗೆ ಸೇರ್ಪಡೆ ಮಾಡಲಾಗಿದೆ ಎಂದು ಪ್ರಕಾಶ್ ಹೆಗ್ಡೆ ಹೇಳಿದರು.
ಎಲ್ಲಾ ಅಧ್ಯಕ್ಷರ ಅವಧಿಯಲ್ಲಿಯೂ ಅಧ್ಯಕ್ಷರಿಗೆ ಶೇ.30 ರಷ್ಟು ಹೆಚ್ಚುವರಿ ಅನುದಾನ ಮೀಸಲಿರಿಸಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು. ಅಧ್ಯಕ್ಷರಿಗೆಂದು ಮೀಸಲಿರಿಸಿದ್ದ ಅನುದಾನವನ್ನು ತುರ್ತು ಕಾಮಗಾರಿಗೆ ಬಳಸಲು ಮತ್ತು ಅದನ್ನು ಎಲ್ಲಾ ವಾರ್ಡ ಗಳಿಗೂ ಹಂಚಿಕೆ ಮಾಡಬೇಕಿತ್ತು. ಅದನ್ನು ಒಂದೇ ವಾರ್ಡ್ ಗೆ ಬಳಸಿಕೊಂಡದ್ದು ಸರಿಯಲ್ಲ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ತಮ್ಮ ವಾರ್ಡ್ ಗೂ ಅನುದಾನ ಬಂದಿಲ್ಲ- ಅಧ್ಯಕ್ಷೆ
ಈ ರೀತಿ ಅನುದಾನ ಹಂಚಿಕೆ ಆಗಿರುವುದು ತಮ್ಮ ಗಮನಕ್ಕೆ ಬಂದಿಲ್ಲ. ತಾವು ಅಧಿಕಾರ ವಹಿಸಿಕೊಳ್ಳುವ ಮೊದಲೇ ಕ್ರಿಯಾಯೋಜನೆ ಮತ್ತು ನಿರ್ಣಯ ಆಗಿತ್ತು. ಇದೀಗ ತಮ್ಮ ವಾಡರ್್ಗೂ ಅನುದಾನ ಬಂದಿಲ್ಲ ಎಂದು ಅಧ್ಯಕ್ಷೆ ಶೀಲಾವತಿ ಮಾಧವ ಮತ್ತು ಉಪಾಧ್ಯಕ್ಷೆ ಹರಿಣಾಕ್ಷಿ ಹೇಳಿದರು. ಬಳಿಕ ಮಾತುಕತೆ ನಡೆದು ಅನುದಾನ ಹಂಚಿಕೆ ಆಗದ 13 ವಾಡರ್್ಗಳಿಗೆ ತಲಾ 15 ಲಕ್ಷದಂತೆ ಅನುದಾನ ಮೀಸಲಿರಿಸಲು ಮತ್ತು ಕೂಡಲೇ ಟೆಂಡರ್ ನಡೆಸಿ 10 ಲಕ್ಷ ರೂಗಳ ಕಾಮಗಾರಿ ನಡೆಸಲು ನಿರ್ಧರಿಸಲಾಯಿತು.
ಮೀನು ಮಾರುಕಟ್ಟೆಯ ನೀರಿನ ಬಿಲ್:
ಗಾಂಧೀನಗರದ ಕೆಎಫ್ಡಿಸಿ ಮೀನು ಮಾರುಕಟ್ಟೆಯವರು ಕಳೆದ ಏಳು ವರ್ಷದಿಂದ ನೀರಿನ ಬಿಲ್ ಕಟ್ಟಿಲ್ಲ ಅದನ್ನು ಸಂಗ್ರಹಿಸಬೇಕು ಮತ್ತು ಬಾಡಿಗೆಯನ್ನು 20 ಸಾವಿರಕ್ಕೆ ಏರಿಸಬೇಕು ಎಂದು ಸದಸ್ಯರಾದ ಪ್ರಕಾಶ್ ಹೆಗ್ಡೆ ಮತ್ತು ರಮಾನಂದ ರೈ ಒತ್ತಾಯಿಸಿದರು. ಈ ಕುರಿತು ಸದಸ್ಯರ ಮಧ್ಯೆ ಪರ ವಿರೋಧ ಚರ್ಚೆ ನಡೆಯಿತು. 15 ಸಾವಿರ ರೂ ಬಾಡಿಗೆ ವಿಧಿಸಲು ಕಳೆದ ತಿಂಗಳಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು ಎಂದು ಕೆಲ ಸದಸ್ಯರು ವಾದಿಸಿದರು. ಏಳು ವರ್ಷದಿಂದ ನೀರಿನ ಬಿಲ್ ಸಂಗ್ರಹವಾಗಿಲ್ಲ ಎಂದು ಹೇಳುವ ಪ್ರಕಾಶ್ ಹೆಗ್ಡೆಯವರು ತಮ್ಮ ಅಧಿಕಾರ ಅವಧಿಯಲ್ಲಿ ನೀರಿನ ಬಿಲ್ ಯಾಕೆ ಸಂಗ್ರಹಿಸಿಲ್ಲ ಎಂದು ಗೋಕುಲ್ದಾಸ್ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ವಾಗ್ವಾದ ನಡೆದಾಗ ಹಿಂದೆ ನಿರ್ಣಹಿಸಿದಂತೆ 15 ಸಾವಿರ ಬಾಡಿಗೆ ಪಡೆಯಲಾಗುವುದು ಮತ್ತು ಅವರಿಂದ ನೀರಿನ ಬಿಲ್, ಒಳಚರಂಡಿ ಸಂಪರ್ಕ ಶುಲ್ಕ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ತ್ಯಾಜ್ಯ ಶುಲ್ಕ ಸಂಗ್ರಕ್ಕೆ ನಿರ್ಧಾರ:
ಮನೆ ಮನೆಯಿಂದ ಕಸ ಸಂಗ್ರಹಿಸುವುದಕ್ಕೆ ಪ್ರತಿ ಮನೆಯಿಂದ ಮಾಸಿಕ 25 ರೂ ಶುಲ್ಕ ಸಂಗ್ರಹಿಸಲು ನಿರ್ಧರಿಸಲಾಯಿತು. ಶುಲ್ಕ ವಿಧಿಸುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಮತ್ತು ಈ ಕುರಿತು ಚಚರ್ಿಸಲು ವಿಶೇಷ ಸಭೆ ಕರೆಯಬೇಕು ಎಂದು ಸದಸ್ಯರು ಒತ್ತಾಯಿಸಿದ ಮೇರೆಗೆ ವಿಶೇಷ ಸಭೆ ಕರೆಯಲು ನಿರ್ಧರಿಸಲಾಯಿತು.
ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ಸದಸ್ಯರಾದ ಪ್ರೇಮ ಟೀಚರ್, ಸುನಿತಾ ಡಿಸೋಜ, ಶ್ರೀಲತಾ ಪ್ರಸನ್ನ, ಗಿರೀಶ್ ಕಲ್ಲುಗದ್ದೆ, ಗೋಪಾಲ ನಡುಬೈಲು, ಜಾನಕಿ ನಾರಾಯಣ, ಕಿರಣ್ ಕುರುಂಜಿ, ಶಿವಕುಮಾರ್ ಕಂದಡ್ಕ, ನಝೀರ್ ಶಾಂತಿನಗರ, ಶಶಿಕಲಾ ನೀರಬಿದಿರೆ, ಪುರುಷೋತ್ತಮ ಬಂಗಾರಕೋಡಿ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.