ಪುತ್ತೂರು: ಮಾತು ಬರುತ್ತಿಲ್ಲ, ಕಣ್ಣು ಕಾಣುವುದಿಲ್ಲ. ಹಾಸಿಗೆಯಿಂದ ಮೇಲಕ್ಕೆ ಏಳುವಂತಿಲ್ಲ. ಆದರೂ, ಕಳೆದ ಇಪ್ಪತ್ತು ವರ್ಷಗಳಿಂದ ಎಂಡೋಪೀಡಿತನಾಗಿ ಹಾಸಿಗೆಯಲ್ಲೇ ಬದುಕು ಸಾಗಿಸುತ್ತಿರುವ ನಗರದ ಉರ್ಲಾಡಿ ನಿವಾಸಿ ಪ್ರತೀಕ್(20) ಅವರಿಗೆ ಆರೋಗ್ಯ ಇಲಾಖೆ ಈ ತನಕ ಉಚಿತ ಔಷ ಕೊಟ್ಟಿಲ್ಲ. ಜತೆಗೆ ಕಳೆದ ಮೂರು ತಿಂಗಳಿಂದ ಆರೋಗ್ಯ ಯೋಗ ಕ್ಷೇಮ ವಿಚಾರಿಸಿಲ್ಲ..!
20 ವರ್ಷದ ವ್ಯಥೆ
ಕಾರ್ಕಳದ ಸಾಣೂರು ನಿವಾಸಿ ಆಗಿರುವ ಜಯಶ್ರೀ ಅವರು 25 ವರ್ಷದ ಹಿಂದೆ ವಿವಾಹವಾಗಿ ಪುತ್ತೂರಿನ ಉರ್ಲಾಡಿಗೆ ಬಂದಿದ್ದರು. ಸಾಣೂರು ಪ್ರದೇಶದಲ್ಲಿ ಎಂಡೋ ಸಂತ್ರಸ್ತ ಕುಟುಂಬಗಳು ಇವೆ. ಅದರ ಪರಿಣಾಮ ಎಂಬಂತೆ, ಮೊದಲನೆಯ ಪುತ್ರ ಪ್ರತೀಕ್ ಎಂಡೋಪೀಡಿತನಾಗಿ ಜನಿಸಿದ್ದಾನೆ. ಇನ್ನೂ ಎಳೆ ಮಗುವಿನಂತಿರುವ ಪ್ರತೀಕ್ ಗೆ 20 ವರ್ಷ ದಾಟಿದೆ. ಈತನ ಬದುಕಿನ ಎಲ್ಲ ಕಾರ್ಯವೂ ಹಾಸಿಗೆಗೆ ಸೀಮಿತವಾಗಿದೆ.
ಪ್ರತೀಕ್ ಆರಂಭದಲ್ಲಿ ಮಾತನಾಡುತ್ತಿದ್ದ. ಕಣ್ಣು ಕೂಡ ಕಾಣಿಸುತಿತ್ತು. ದೀರ್ಘ ಕಾಲದ ಔಷಧ ಸೇವನೆಯ ಅಡ್ಡ ಪರಿಣಾಮದಿಂದ, ಕಣ್ಣು, ಮಾತು ಅವೆರಡನ್ನು ಕಳಕೊಂಡ ಪ್ರತೀಕ್ ಈಗ ಬಾಹ್ಯ ಪ್ರಪಂಚದ ಅರಿವಿಲ್ಲದೆ ಕಾಲ ಕಳೆಯುತಿದ್ದಾರೆ. ಪ್ರತಿ ದಿನ ಆರೇಳು ಬಗೆಯ ಔಷಧಗಳು ಇವೆ. ಪ್ರತೀಕ್ ತಂದೆ ದೂರದ ಮುಂಬೈಯಲ್ಲಿ ಉದ್ಯೋಗಿ, ತಾಯಿ ಮತ್ತು ಸಹೋದರಿ ಈತನ ಆರೈಕೆ ಮಾಡುತ್ತಾರೆ.
ಉಚಿತ ಔಷಧ ಕೊಟ್ಟಿಲ್ಲ..!
ಎಂಡೋಪೀಡಿತ ಆದ ಕಾರಣ ಆರಂಭದಲ್ಲಿ ವೈದ್ಯರು ಆಗೊಮ್ಮೆ-ಈಗೊಮ್ಮೆ ಬರುತ್ತಿದ್ದರು. ಆದರೆ ಕಳೆದ ಇಪ್ಪತ್ತು ವರ್ಷದಿಂದ ಉಚಿತ ಔಷಧ ನೀಡಿಲ್ಲ. ಹಾಗಾಗಿ ಮನೆ-ಮಂದಿ ತಿಂಗಳಿಗೆ 2000 ಸಾವಿರಕ್ಕೂ ಅಧಿಕ ಖರ್ಚು ಮಾಡಿ ಖಾಸಗಿ ಆಸ್ಪತ್ರೆಯಿಂದ ಔಷಧ ತರುತ್ತಾರೆ. ಪದೇ-ಪದೇ ಆರೋಗ್ಯ ಕೈ ಕೊಡುವ ಕಾರಣ, ಆಸ್ಪತ್ರೆಗೆ ಹೋಗುವ ಖರ್ಚು ಬೇರೆಯೇ ಇದೆ ಅನ್ನುತ್ತಾರೆ ಪ್ರತೀಕ್ ತಾಯಿ ಜಯಶ್ರೀ .
ತಪಾಸಣೆ ಇಲ್ಲ
ಹೈಕೋರ್ಟ್ ಈ ಹಿಂದೆ ಸರಕಾರಕ್ಕೆ ಎಂಡೋಪೀಡಿತ ಮಕ್ಕಳ ಆರೈಕೆಗಾಗಿ ವಾರದಲ್ಲಿ ಒಂದು ಬಾರಿ ಮನೆ ಭೇಟಿ ಮಾಡುವಂತೆ ಸೂಚನೆ ನೀಡಿತ್ತು. ಆರೋಗ್ಯ ಇಲಾಖೆಗೆ ಸರಕಾರವೂ ನಿರ್ದಶನ ನೀಡಿತ್ತು. ಆದರೆ ಅದು ಪಾಲನೆ ಆಗುತ್ತಿಲ್ಲ ಅನ್ನುವುದಕ್ಕೆ ಪ್ರತೀಕ್ ನ ಪ್ರಕರಣವೇ ಉದಾಹರಣೆ. ನಗರದಲ್ಲೇ ತಾಲೂಕು ಆಸ್ಪತ್ರೆ ಇದ್ದರೂ, ಕಳೆದ ನಾಲ್ಕು ತಿಂಗಳಿಂದ ಆರೋಗ್ಯ ಸಿಬಂದಿ ಈ ಮನೆಗೆ ಬಂದೇ ಇಲ್ಲ. ಜತೆಗೆ ಔಷಧಿಯು ಕೊಟ್ಟಿಲ್ಲ. ಸರಕಾರದ ಆದೇಶ, ಭರವಸೆ ಬರೀ ಕಡತದೊಳಗೆ ಮಾತ್ರ ಇದೆ ಅನ್ನುವುದಕ್ಕೆ ಇದು ಉದಾಹರಣೆ..!
ಸಾಣೂರಿನಲ್ಲಿ ಪ್ರೌಢಶಾಲಾ ತರಗತಿಯಲ್ಲಿ ಇರುವ ಸಂದರ್ಭದಲ್ಲಿ ಗೇರು ತೋಟಗಳಿಗೆ ಹೆಲಿಕಾಪ್ಟರ್ ಮೂಲಕ ಔಷಧ ಸಿಂಪಡಣೆ ನಡೆದಿತ್ತು. ಅಲ್ಲಿ ಹಲವೂ ಎಂಡೋಪೀಡಿತ ಮಕ್ಕಳು ಇದ್ದಾರೆ. ಪ್ರತೀಕ್ ಗೆ ತಿಂಗಳಿಗೆ 3000 ಸಾವಿರ ರೂ. ಮಾಸಾಶನ ಬಿಟ್ಟರೆ ಇನ್ನೇನೂ ಸಿಗುತ್ತಿಲ್ಲ ಅನ್ನುವುದು ಪ್ರತೀಕ್ ತಾಯಿಯ ಅಳಲು.