ಬೆಳ್ತಂಗಡಿ: ನದಿ ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ವಿದ್ಯಮಾನ ತಾಲೂಕಿನ ನಡ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಇನ್ನೊಬ್ಬರೂ ಮುಳುಗಿದ್ದರೂ ಜೀವಾಪಾಯದಿಂದ ಪಾರಾಗಿದ್ದಾರೆ.
ಮೃತಪಟ್ಟವರು ಉಡುಪಿ ಜಿಲ್ಲೆಯ ಫಕೀರನಕಟ್ಟೆ ನಿವಾಸಿಗಳಾದ ರಹೀಮ್(30), ಇವರ ಪತ್ನಿ ರುಬೀನಾ(25), ರುಬಿನಾಳ ತಂಗಿ ಯಾಸಿನ್ (23) ತಮ್ಮ ಸುಬಾನ್ (15) ಎಂಬವರಾಗಿದ್ದು ಅಪಾಯದಿಂದ ಪಾರಾದವರು ರುಬಿನಾರ ತಾಯಿ ಮೈಮುನಾ(55) ಎಂದು ಗುರುತಿಸಲಾಗಿದೆ. ಇವರು ಬೆಳ್ತಂಗಡಿ ತಾಲೂಕಿನ ಕಾಜೂರು ದರ್ಗಾಕ್ಕೆ ಭೇಟಿ ನೀಡಿ ನಂತರ ನಡ ಗ್ರಾಮದ ಗಡಾಯಿಕಲ್ಲು(ನರಸಿಂಹ ಗಡ)ವೀಕ್ಷಿಸಿ ನಂತರ ಅದರ ಬಳಿ ಇರುವ ನದಿಯಲ್ಲಿ ಸ್ನಾನಮಾಡಲು ಹೋಗಿ ಈಜು ಬಾರದೆ ಮೃತ ಪಟ್ಟಿರಬಹುದೆಂದು ಶಂಕಿಸಲಾಗಿದೆ. ಗಡಕ್ಕೆ ಸಂಪರ್ಕಿಸುವ ರಸ್ತೆ ಮದ್ಯದಲ್ಲೆ ಸೇತುವೆ ಇದ್ದು ಅದರ ಬಳಿಯೇ ನೀರಿನ ಗುಂಡಿಗೆ ಸ್ನಾನಮಾಡಲು ಇಳಿದಿದ್ದಾರೆ. ಇದೇ ವೇಳೆ ಮಧ್ಯಾಹ್ನ ಸುಮಾರು 2ಗಂಟೆಯ ವೇಳೆಗೆ ಸಾರ್ವಜನಿಕರು ಇವರನ್ನು ನೋಡಿದ್ದು ನಂತರ ಸ್ವಲ್ಪ ಸಮಯದ ಬಳಿಕ ಸಮೀಪ ಇರುವ ತೋಟದಲ್ಲಿ ನೀರು ಹಾಕುತ್ತಿದ್ದ ಸ್ಥಳೀಯರಿಗೆ ಬೊಬ್ಬೆ ಹಾಕುವುದು ಕೇಳಿದೆ. ತಕ್ಷಣವೇ ಗ್ರಾಮಸ್ಥರು ಸ್ಥಳಕ್ಕೆ ಬಂದಾಗ ಮಹಿಳೆ ಮುಳುಗುತ್ತಿರುವ ದೃಶ್ಯ ಕಂಡುಬಂದಿದ್ದು ಕೂಡಲೇ ಈಕೆಯನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ತಕ್ಷಣ ಇವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಂತರ ಇನ್ನೊರ್ವ ಕುಟುಂಬದ ಸಾಹಿನಾ ಎಂಬುವರು ದಡದಲ್ಲೇ ಇದ್ದು ಮುಳುಗಿರುವವರ ಮಾಹಿತಿ ನೀಡಿದ್ದಾರೆ. ಬಳಿಕ ನಾಲ್ವರ ಶವವನ್ನು ಮೇಲಕ್ಕೆತ್ತಲಾಗಿದೆ.ಮೃತಪಟ್ಟವರಲ್ಲಿ ಮೈಮುನಾರ ಹಿರಿ ಮಗಳು ರುಬಿನಾ, ಅಳಿಯ ರಹೀಮ್, ಮಗ ಸುಹಾನ್, ಮಗಳು ಯಾಸಿನ್ ಆಗಿದ್ದು ಪಾರಾದವರಲ್ಲಿ ಇನ್ನೊರ್ವ ಮಗಳು ಸಾಹಿನಾ ಮತ್ತು ರುಬಿನಾಳ ಒಂದು ವರ್ಷದ ಮಗು, ಮಕ್ಕಳಾದ ಸೈಮ್ (4) ಮತ್ತು ಸುಹೈಲ್(3) ಎಂಬವರಾಗಿದ್ದಾರೆ.
ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಎಸ್.ಐ.ರವಿ, ತಹಶೀಲ್ದಾರರು ತಿಪ್ಪೇ ಸ್ವಾಮೀ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಸುಂದರವಾದ ಪ್ರದೇಶಕ್ಕೆ ಮಳೆಗಾಲ ಹೊರತು ಪಡಿಸಿ ಪ್ರತೀದಿನ ಈಜಾಡಲು, ನೀರಿನಲ್ಲಿ ಆಡಲು ಹಲವಾರು ಮಕ್ಕಳು ಯುವಕರು ಬರುತ್ತಾರೆ. ಗುಂಪಾಗಿ ಬಂದವರು ನೀರಿನಲ್ಲಿದ್ದು ಬೊಬ್ಬೆ ಹೊಡೆಯುವುದು ಮಾಮೂಲು. ಪರಿಸರದಲ್ಲಿ ಹಲವಾರು ಹಿಂದು-ಮುಸ್ಲಿಂ ಮನೆಗಳಿವೆ. ಬುಧವಾರ ಮೈಮುನಾ ಎಂಬುವರು ಬೊಬ್ಬೆ ಹಾಕಿದಾಗ ಸುತ್ತಲಿನವರಿಗೆ ಈ ಬೊಬ್ಬೆ ಕೇಳಿದ್ದರೂ ಇದು ಎಂದಿನಂತೆ ಇರುವುದೇ ಎಂದು ನಿರ್ಲಕ್ಷಿಸಿದ್ದರು. ಆದರೆ ಬರಬರುತ್ತಾ ಆರ್ತನಾದವೇ ಕೇಳಿಬಂದಾಗ ಸ್ಥಳೀಯರಾದ ಮೋಹನಗೌಡ ಬೇಚಾರು ಅವರು ಓಡೋಡಿ ಬಂದು ಮಹಿಳೆಯನ್ನು ರಕ್ಷಿಸಿದ್ದಾರೆ. ಬಳಿಕ ಮಹಿಳೆ ಇನ್ನೂ ನಾಲ್ವರು ನೀರೊಳಗಿದ್ದಾರೆ ಎಂದು ಮಾಹಿತಿ ನೀಡಿದಾಗ ಕೂಡಲೇ ಮೋಹನ ಸಹಿತ ಸುಂದರ ಗೌಡ, ಶ್ರೀಧರ ಮೊಯಿಲಿ, ಶಾಮ ಸುಂದರ ನಡ ಹಾಗೂ ಅವರ ಸಹೋದರರು ಸೇರಿ ಹೆಣಗಳನ್ನು ಮೇಲೆತ್ತಿದ್ದಾರೆ.
ಹೆಣಗಳು ಸಿಕ್ಕಿದ ಸ್ಥಳದಲ್ಲಿ ಮುಳುಗಿ ಸಾವನ್ನಪ್ಪುವಷ್ಟು ನೀರಿಲ್ಲದಿದ್ದರೂ ನಾಲ್ವರೂ ಹೇಗೆ ಶವವಾದರೂ ಎಂಬುದು ನಿಗೂಢವಾಗಿದೆ. ಅಲ್ಲದೆ ನಾಲ್ವರೂ ಪರಸ್ಪರ ಕೈ ಹಿಡಿದುಕೊಂಡೇ ಇದ್ದರು ಎಂದು ಹೇಳಲಾಗಿದೆ.
ಈ ಪ್ರದೇಶದಲ್ಲಿ ಈಜಾಡಲು ಬರುವ ಒಂದು ಕೋಮಿನ ಯುವಕರು ಅಶ್ಲೀಲವಾಗಿ ವರ್ತಿಸುವುದು ಫೊಟೊ ತೆಗೆಯುವುದು ಆಗಾಗ್ಗೆ ನಡೆಯುತ್ತಿರುತ್ತದೆ ಎಂಬುದು ಸ್ಥಳೀಯರ ವಿವರಣೆಯಾಗಿದೆ. ಇದನ್ನು ಆಕ್ಷೇಪಿಸಿದರೆ ಎಲ್ಲಿ ಕೋಮು ಗಲಭೆಯಾಗುತ್ತೋ ಎಂಬ ಅನುಮಾನವನ್ನೂ ವ್ಯಕ್ತಪಡಿಸುತ್ತಾರೆ. ಇಲ್ಲಿನ ವಿದ್ಯಮಾನಗಳ ಬಗ್ಗೆ ಸ್ಥಳೀಯರು ಹಲವಾರು ಬಾರಿ ಪೋಲಿಸರಿಗೂ ಮಾಹಿತಿ ನೀಡಿದ್ದರು. ಇನ್ನಾದರೂ ಇಲ್ಲೊಂದು ಸಿಸಿ ಟಿವಿಯನ್ನು, ಸೂಚನಾ ಫಲಕವನ್ನು ಅಳವಡಿಸುವುದರತ್ತ ಇಲಾಖೆ ಗಮನಹರಿಸಬೇಕಾಗಿದೆ.