ಸುಳ್ಯ: ಮಾನವ ಹಕ್ಕುಗಳ ಉಲ್ಲಂಘನೆ ಆದಲ್ಲಿ ಆಯೋಗದ ಶುಲ್ಕ ರಹೀತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು. ದೂರನ್ನು ಪರಿಶೀಲಿಸಿ ಮಾನವ ಹಕ್ಕುಗಳ ಉಲ್ಲಂಘಟನೆಯಾಗಿರುವುದು ಕಂಡು ಬಂದಲ್ಲಿ ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಿ. ಸಕ್ಸೇನಾ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸಹಭಾಗಿತ್ವದಲ್ಲಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮತ್ತು ತೆಕ್ಕಿಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಆಶ್ರಯದಲ್ಲಿ ಅರಂತೋಡಿನ ತೆಕ್ಕಿಲ್ ಸಮುದಾಯ ಭವನದಲ್ಲಿ ಗುರುವಾರ ಮಾನವ ಹಕ್ಕುಗಳ ಕುರಿತು ನಡೆದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯವರು, ಮಕ್ಕಳು, ಹಿರಿಯ ನಾಗರಿಕರು, ವಿಕಲಚೇತನರು. ಬಾಲ ಕಾರ್ಮಿಕರು ಹೀಗೆ ಸಮಾಜದ ಶೋಷಿತ ವರ್ಗದ ಜನರ ಬಗ್ಗೆ ಆಯೋಗ ವಿಶೇಷ ಕಾಳಜಿಯನ್ನು ವಹಿಸುತಿದೆ. ಇವರ ಮೇಲೆ ಶೋಷಣೆ, ದೌರ್ಜನ್ಯಗಳು ನಡೆದರೆ ಅಥವಾ ಮಾನವ ಹಕ್ಕುಗಳ ಉಲ್ಲಂಘನೆ ಆದರೆ ಆಯೋಗಕ್ಕೆ ದೂರು ನೀಡಿ ಎಂದು ಅವರು ಕರೆ ನೀಡಿದರು. ಶೋಷಿತ ವರ್ಗಕ್ಕೆ ಧೈರ್ಯ ಮತ್ತು ಆತ್ಮ ವಿಶ್ವಾಸ ತುಂಬಲು ಆಯೋಗವು ಹಲವು ಕ್ರಮಗಳನ್ನು ಕೈಗೊಳ್ಳುತಿದೆ. ಮಾಹಿತಿಯ ಕೊರತೆಯಿಂದ ಮತ್ತು ಕಾನೂನಿನ ಅರಿವಿಲ್ಲದೆ ಮಾನವ ಹಕ್ಕುಗಳ ಉಲ್ಲಂಘನೆ, ದೌರ್ಜನ್ಯಗಳು ನಡೆಯುತ್ತದೆ. ಇದರ ಬಗ್ಗೆ ಅರಿವು ಮೂಡಿಸಲು ಮತ್ತು ಜಾಗೃತಿ ಮೂಡಿಸಿ ಸದೃಢ ಸಮಾಜ ರುಪಿಸಲು ಆಯೋಗದ ವತಿಯಿಂದ ರಾಜ್ಯದಾದ್ಯಂತ ಮಾನವ ಹಕ್ಕುಗಳ ಬಗ್ಗೆ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಮೂಲಭೂತ ಸೌಲಭ್ಯದ ಕೊರತೆಯೂ ಮಾನವ ಹಕ್ಕುಗಳ ಉಲ್ಲಂಘನೆ:
ಬದುಕಲು ತೊಂದರೆ ಉಂಟು ಮಾಡಿದರೆ ಮತ್ತು ಬದುಕಲು ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸದೇ ಇರುವುದು ಕೂಡ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಮೀರಾ ಸಕ್ಸೇನಾ ಹೇಳಿದರು. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿ ಎಂದ ಅವರು ಚಿಕ್ಕವರಿದ್ದಾಗ ಪಡೆದ ಶಿಕ್ಷಣ ಜೀವನಪೂರ್ತಿ ಮಾರ್ಗದರ್ಶನ ನೀಡುತ್ತದೆ. ಉತ್ತಮ ಶಿಕ್ಷಣ ಉತ್ತಮ ವ್ಯಕ್ತಿತ್ವ ಮತ್ತು ಗುಣವನ್ನು ನೀಡುತ್ತದೆ. ಸಮಾಜದ ಅಭಿವೃದ್ಧಿಯಾಗಬೇಕಾದರೆ ಸಮಾಜದಲ್ಲಿ ಶೋಷಣೆ, ಮಾನವ ಹಕ್ಕುಗಳ ಉಲ್ಲಂಘನೆ ಕಡಿಮೆಯಾಗಿ ಗಂಡು-ಹೆಣ್ಣು ಸಮಾನಾಗಿ ಬದುಕುವಂತಾಗಬೇಕು ಎಂದರು. ಸಮಾಜದ ವಿವಿಧ ಸ್ತರಗಳಲ್ಲಿ ಹಲವು ರೀತಿಯ ಮಾನವ ಹಕ್ಕುಗಳ ಉಲ್ಲಂಘನೆ ನಿರಂತರ ನಡೆಯುತ್ತಾ ಇದೆ. ಇದರ ಬಗ್ಗೆ ಆಯೋಗಕ್ಕೆ ದೂರು ನೀಡಿ. ಅದರ ಬಗ್ಗೆ ಪರಿಶೀಲನೆ ನಡೆಸಿ ದೂರುಗಳು ನಿಜವಾಗಿದ್ದಲ್ಲಿ ಕ್ರಮ ಜರುಗಿಸಲಾಗುವುದು. ದೂರು ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು. ಸಮಾಜದಲ್ಲಿ ಈ ಕುರಿತು ಜಾಗೃತಿ ಅಗತ್ಯ ಎಂದು ಅವರು ಹೇಳಿದರು.
ಜಾಗೃತಿ ಅಗತ್ಯ- ಡಾ.ವೇದಮೂರ್ತಿ
ಕಾನೂನಿನ ಉಲ್ಲಂಘನೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಂತಹ ಪ್ರಕರಣಗಳು ಕಡಿಮೆಯಾಗಲು ಜನರಿಗೆ ಕಾನೂನನಿನ ಅರಿವು ಮತ್ತು ಜಾಗೃತಿ ಅತೀ ಅಗತ್ಯ ಎಂದು ಮುಖ್ಯ ಅತಿಥಿಯಾಗಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ವೇದಮೂರ್ತಿ ಹೇಳಿದರು. ಕಾನೂನಿನ ಅರಿವು ಪಡೆದಷ್ಟು ಸಮಾಜದಲ್ಲಿ ತಪ್ಪುಗಳು ಆಗುವುದು ಕಡಿಮೆಯಾಗುತ್ತದೆ. ಕೋಮು ಸಂಘರ್ಷ, ಮಾದಕ ವಸ್ತುಗಳ ಬಳಕೆಯಂತಹ ವಿಚಾರಗಳ ಬಗ್ಗೆ ಹೆಚ್ಚು ಜಾಗೃತಿ ಅಗತ್ಯ ಎಂದು ಅವರು ಹೇಳಿದರು.
ಬಳಿಕ ನಡೆದ ವಿಚಾರಗೋಷ್ಟಿಯಲ್ಲಿ ‘ಲಿಂಗತ್ವ ಸಮಾನತೆ ಹಾಗೂ ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ಕುರಿತು’ ಬೃಂದಾ ಅಡಿಗ ಹಾಗೂ ‘ಮಾನವ ಹಕ್ಕುಗಳು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳು’ ಎಂಬ ವಿಷಯದಲ್ಲಿ ಮನೋಹರ್ ರಂಗನಾಥ್ ವಿಚಾರ ಮಂಡಿಸಿದರು. ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯ ಹರೀಶ್ ಕಂಜಿಪಿಲಿ, ತಾಲೂಕು ಪಂಚಾಯಿತಿ ಸದಸ್ಯೆ ಪುಷ್ಪಾ ಮೇದಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ಅರಂತೋಡು-ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ನ ಅಧ್ಯಕ್ಷ ಎಂ.ಪಿ.ಉಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸುಕನ್ಯ, ಭಜನಾ ಮಂದಿರದ ಅಧ್ಯಕ್ಷ ಯು.ಎಂ.ನಾರಾಯಣ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಪ್ರಶಾಂತ್, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಕೆ.ಎಂ.ಮಹಮ್ಮದ್, ಹೊನ್ನಪ್ಪ ಅಡ್ತಲೆ, ವೆಂಕಟ್ರಮಣ ಮೇರ್ಕಜೆ, ಎ.ಎ.ಹನೀಫ್, ತೆಕ್ಕಿಲ್ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ತೀರ್ಥರಾಮ ಯು.ಕೆ, ಸಂಚಾಲಕ ಜಾವೇದ್.ಟಿ.ಎಂ, ಪ್ರೌಢಶಾಲಾ ಮುಖೋಪಾಧ್ಯಾಯಿನಿ ಹರಿಣಾಕ್ಷಿ.ಕೆ.ಎಸ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ದಾಮೋದರ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ ಶಿಕ್ಷಕಿ ಅಶ್ವಿನಿ ವಂದಿಸಿದರು. ಅಬ್ದುಲ್ಲ ಮಾಸ್ತರ್ ನಿರೂಪಿಸಿದರು.