ಪುತ್ತೂರು: ಇತರೆ ತಾಲೂಕಿನಲ್ಲಿ ಕಾಡುವಷ್ಟು ವಿದ್ಯುತ್ ಬವಣೆ ಪುತ್ತೂರು ತಾಲೂಕಿನಲ್ಲಿ ಸದ್ಯಕ್ಕಿಲ್ಲ. ಆದರೆ ಇಲ್ಲಿನ ಬೇಡಿಕೆಗೆ ತಕ್ಕಂತೆ ಹೊರಗಿನಿಂದ ವಿದ್ಯುತ್ ಪೂರೈಕೆ ಆಗದಿದ್ದರೆ, ಅದು ಬೀರುವ ಸಮಸ್ಯೆ ಉಳಿದ ತಾಲೂಕಿಗಿಂತಲೂ ಅತ್ಯಂತ ಪ್ರಮಾಣದ್ದು.!
ವಿದ್ಯುತ್ ಫಲಾನುಭವಿಗಳು: ತಾಲೂಕಿನಲ್ಲಿ 80,868 ವಿದ್ಯುತ್ ಸಂಪರ್ಕವಿದೆ. ಮಳೆಗಾಲದಲ್ಲಿ 35 ರಿಂದ 45 ಮೆ.ವ್ಯಾ ವಿದ್ಯುತ್ ಆವಶ್ಯವಿದ್ದರೆ, ಬೇಸಗೆ ಕಾಲದಲ್ಲಿ ಅದರ ಪ್ರಮಾಣ 75 ರಿಂದ 80 ಮೆ.ವ್ಯಾಟ್. ಬೇಸಗೆಯಲ್ಲಿ 10 ರಿಂದ 15 ಮೆ.ವ್ಯಾ.ವಿದ್ಯುತ್ ಪೂರೈಕೆ ಕೊರತೆ ಇದೆ. ಲೋಡ್ ಶೆಡ್ಡಿಂಗ್ ವ್ಯವಸ್ಥೆಯಲ್ಲಿ ಅದನ್ನು ಸರಿದೂಗಿಸಲಾಗುತ್ತಿದೆ. ಇಲ್ಲಿ ಮಳೆಗಾಲದಲ್ಲಿ ವಿದ್ಯುತ್ ಕೊರತೆ ಆಗುವುದಿಲ್ಲ. ಆದರೆ ಬೇಸಗೆ ಕಾಲದಲ್ಲಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಕಾರಣದಿಂದ ಕೃಷಿ ಪಂಪ್ ಸೆಟ್ ಮತ್ತು ಮನೆ ಸಂಪರ್ಕಗಳಿಗೆ ಕತ್ತಲ ಭಾಗ್ಯ ದರ್ಶನವಾಗುವುದು ಇದೆ.
ಸಬ್ ಸ್ಟೇಷನ್ ಗಳ ವಿವರ: ಪುತ್ತೂರಿನಲ್ಲಿ 110 ಕೆ.ವಿ.ಸಬ್ ಸ್ಟೇಷನ್, ಕುಂಬ್ರ, ನಗರದ ಕ್ಯಾಂಪ್ಕೋ, ನೆಲ್ಯಾಡಿ, ಸವಣೂರು, ಕಡಬದಲ್ಲಿ 33/11 ಸಬ್ ಸ್ಟೇಷನ್ ಗಳು ಇವೆ. 110 ಕೆ.ವಿ. ಸಬ್ ಸ್ಟೇಷನ್ ನಲ್ಲಿ 4.30 ಲಕ್ಷ ಯೂನಿಟ್, ಕ್ಯಾಂಪ್ಕೋ ಸಬ್ ಸ್ಟೇಷನ್ ನಲ್ಲಿ 72 ಸಾವಿರ ಯೂನಿಟ್, ನೆಲ್ಯಾಡಿ ಸಬ್ಸ್ಟೇಷನ್ ನಲ್ಲಿ 1.1 ಲಕ್ಷ ಯೂನಿಟ್, ಕುಂಬ್ರ ಸಬ್ ಸ್ಟೇಷನ್ ನಲ್ಲಿ 1.5 ಲಕ್ಷ ಯೂನಿಟ್, ಕಡಬ ಸಬ್ಸ್ಟೇಷನ್ ನಲ್ಲಿ 1.5 ಯೂನಿಟ್ ಖರ್ಚಾಗುತ್ತದೆ.
ಕೃಷಿ ತೋಟದ್ದೇ ಚಿಂತೆ: ತಾಲೂಕಿನಲ್ಲಿ 56,633 ಮನೆ ಸಂಪರ್ಕ, 7,443 ಕಮರ್ಷಿಯಲ್ ಸಂಬಂದ ಸಂಪರ್ಕ, 16,792 ಕೃಷಿ ಪಂಪ್ ಸೆಟ್ ಆಧಾರಿತ ವಿದ್ಯುತ್ ಸಂಪರ್ಕಗಳಿವೆ. ಇಲ್ಲಿ ಬೇಸಗೆ ಕಾಲದ ಲೋಡ್ ಶೆಡ್ಡಿಂಗ್ ಎಪೆಕ್ಟ್ ತಟ್ಟುವುದು ಕೃಷಿ ಪಂಪ್ಸೆಟ್ ಗಳಿಗೆ. ಏಳು ತಾಸು ಕಡ್ಡಾಯ ವಿದ್ಯುತ್ ನೀಡಬೇಕು ಎಂದು ಸರಕಾರ ಆದೇಶ ನೀಡಿದ್ದರೂ, ಈ ಬರಗಾಲದ ಮಧ್ಯೆ ಅದು ಪರಿಪಾಲನೆಗೆ ಬರುವುದು ಕಷ್ಟ. ಹೀಗಾಗಿ ತಾಲೂಕಿನ 9.400 ಹೆಕ್ಟೇರು ಅಡಿಕೆ ತೋಟಕ್ಕೆ ನೀರಿನ ಅಭಾವದ ಜತೆಗೆ ಕರೆಂಟ್ ಕೈ ಕೊಟ್ಟರೆ, ಜನರ ಜೀವನ ನಿರ್ವಹಣೆಯ ಮೇಲೆ ಗಂಭೀರ ಪರಿಣಾಮ ಬೀರುವುದು ನಿಶ್ಚಿತ.
ಸಬ್ ಸ್ಟೇಷನ್ ಸಮಸ್ಯೆ: ಪುತ್ತೂರು 110 ಕೆ.ವಿ.ಸಬ್ ಸ್ಟೇಷನ್ ಗೆ ವಾರಾಹಿಯಿಂದ ನೆಟ್ಲ ಮುಡ್ನೂರು 220 ಕೆ.ವಿ ಸಬ್ ಸ್ಟೇಷನ್ ಗೆ, ಅಲ್ಲಿಂದ ಪುತ್ತೂರು 110 ಕೆ.ವಿ.ಸಬ್ ಸ್ಟೇಷನ್ ಗೆ ಪೂರೈಕೆ ಆಗುತ್ತದೆ. ಅಲ್ಲಿಂದ ಐದು 33/11 ಕೆ.ವಿ.ಸಬ್ ಸ್ಟೇಷನ್ ಗೆ ವಿದ್ಯುತ್ ಪೂರೈಕೆಯಾಗಿ, ಆಯಾ ವ್ಯಾಪ್ತಿಯ ಫೀಡರ್ ಗಳಿಂದ ಮನೆ, ಕೃಷಿ, ವಾಣಿಜ್ಯ ಸಂಬಂತ ಕಟ್ಟಡಗಳಿಗೆ ವಿದ್ಯುತ್ ಪೂರೈಕೆ ಆಗುತ್ತದೆ.
ಪುತ್ತೂರು 110 ಕೆ.ವಿ. ಸಬ್ ಸ್ಟೇಷನ್ನಿಂದ ಸುಳ್ಯ, ಕಡಬದ 33 ಕೆ.ವಿ.ಸಬ್ ಸ್ಟೇಷನ್ಗೆ ವಿದ್ಯುತ್ ಪೂರೈಕೆ ಆಗುತ್ತಿದೆ. 33 ಕೆ.ವಿ. ಸಬ್ ಸ್ಟೇಷನ್ ಅನ್ನು 110 ಕೆ.ವಿ ಗೆ ಮೇಲ್ದರ್ಜೆಗೇರಿಸಿದರೆ, ಪುತ್ತೂರಿನ ಒತ್ತಡ ಕಡಿಮೆ ಆಗುತ್ತದೆ. ಜತೆಗೆ ಸುಳ್ಯ, ಪುತ್ತೂರಿನ ಸಮಸ್ಯೆಯು ನೀಗುತ್ತದೆ. ಸುಳ್ಯದ ಪ್ರಯತ್ನಕ್ಕೆ ಪ್ರಯತ್ನಕ್ಕೆ ಆಕ್ಷೇಪಗಳು ಅಡ್ಡಿಯಾದರೆ, ಕಡಬಕ್ಕೆ ಸಂಬಂಧಪಟ್ಟಂತೆ ಅಲಂಕಾರಿನಲ್ಲಿ ನಿರ್ಮಾಣದ ಪ್ರಸ್ತಾವನೆ ಇದೆ.
ಬೀದಿ ದೀಪದ ಕಥೆ: ತಾಲೂಕಿನಲ್ಲಿ 41 ಗ್ರಾ.ಪಂ. ವ್ಯಾಪ್ತಿಯಲ್ಲಿ ಬೀದಿ ದೀಪ ಇದೆ. ಎಲ್ಲ ವಾರ್ಡ್ ಗಳಲ್ಲಿ 15 ಸಾವಿರಕ್ಕೂ ಅಧಿಕ ಬೀದಿ ದೀಪ ಅಳವಡಿಸಲಾಗಿದೆ. ಅದರಲ್ಲಿ ಶೇ.80 ಕ್ಕೂ ಅಕ ವಿದ್ಯುತ್ ಆಧಾರಿತ ದೀಪಗಳು. ಉಳಿದವು ಸೌರ ಶಕ್ತಿ ಆಧಾರಿತವಾದವು. ಬಹುತೇಕ ಗ್ರಾ.ಪಂ.ಗಳಿಂದ ಮೆಸ್ಕಾಂಗೆ ಲಕ್ಷಾಂತರ ರೂ. ವಿದ್ಯುತ್ ಬಿಲ್ ಪಾವತಿಗೆ ಬಾಕಿ ಇರಿಸಿಕೊಂಡಿವೆ. ಕೆಲ ಪಂಚಾಯತ್, ನಗರ ವ್ಯಾಪ್ತಿಯಲ್ಲಿ ಬೆಳಗ್ಗಿನ ಹೊತ್ತು ಬೀದಿ ದೀಪ ಉರಿದ ಉದಾಹರಣೆಗಳು ಇವೆ..!
ಎಲ್ಇಡಿ ಬಲ್ಬ್: ಮೆಸ್ಕಾಂ ಅಕಾರಿಗಳ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಈ ತನಕ 1,43,000 ಲಕ್ಷ ಎಲ್ಇಡಿ ಬಲ್ಬ್ ವಿತರಿಸಲಾಗಿದೆ. ಆರಂಭದಲ್ಲಿ 100 ರೂ. ಧಾರಣೆ ಇದ್ದ ಬಲ್ಬ್ ಗೆ ಈಗ 80 ರೂ. ಇದೆ. ಬಲ್ಬ್ ಬಳಕೆಯಿಂದ ವಿದ್ಯುತ್ ಮಿತ ಬಳಕೆಗೆ ಸಹಕಾರಿ ಆಗಿದೆ ಎನ್ನುತ್ತಾರೆ ಅಕಾರಿಗಳು. ಆದರೆ ಹಾಳಾದ ಬಲ್ಬ್ ರಿಪೇರಿಗೆ ವ್ಯವಸ್ಥೆ ಇಲ್ಲದೆ ಹಳೆ ಬಲ್ಬ್ ಗತಿ ಎಂಬ ಸ್ಥಿತಿ ಬರಲಿದೆ.
ಸೌರ ಮೇಲ್ಛಾವಣಿ ಘಟಕ: ಗ್ರಾಹಕರೇ ಸ್ವತಃ ವಿದ್ಯುತ್ ಉತ್ಪಾದಿಸಿ, ಮಿಕ್ಕಿದ್ದನ್ನು ಮಾರಿ ಸ್ವ ಬಳಕೆ ಮತ್ತು ಆದಾಯ ಗಳಿಸುವ ಸೌರಶಕ್ತಿ ಮೇಲ್ಛಾವಣಿ ಘಟಕ ಯೋಜನೆಗೆ ತಾಲೂಕಿನಲ್ಲಿ ಪ್ರತಿಕ್ರಿಯೆ ನೀರಸವಾಗಿದೆ. ಯೋಜನೆ ಜಾರಿಗೊಂಡು ಎರಡು ವರ್ಷ ಆದರೂ, ಏಳು ಘಟಕಗಳು ಮಾತ್ರ ಕಾರ್ಯಾಚರಿಸುತ್ತಿವೆ. ಪುತ್ತೂರು ಮೆಸ್ಕಾಂ ವ್ಯಾಪ್ತಿಯಲ್ಲಿ ಐವರು ಮತ್ತು ಕಡಬ ವ್ಯಾಪ್ತಿಯಲ್ಲಿ ಇಬ್ಬರು ಗ್ರಾಹಕರು ಘಟಕ ಅಳವಡಿಸಿ, ಆದಾಯ ಗಳಿಸುತ್ತಿದ್ದಾರೆ. ವಿದ್ಯುತ್ ಬಳಸುವ ಅತ್ಯಕ ಸಂಖ್ಯೆಯ ಬಳೆಕೆದಾರರು ಸೌರಶಕ್ತಿ ಮೇಲ್ಛಾವಣಿಕ ಘಟಕ ಅಳವಡಿಸಿದರೆ, ವೋಲ್ಟೆಜ್ ಸುಧಾರಣೆ ಕಾಣಲಿದೆ. ಕೃಷಿ ಪಂಪ್ ಸೆಟ್ ಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತದೆ ಎನ್ನುತ್ತಾರೆ ಮೆಸ್ಕಾಂ ಅಕಾರಿಗಳು.
ಇಲ್ಲಿ ಸಮಸ್ಯೆ ಕಡಿಮೆ: ಉಳಿದ ತಾಲೂಕಿಗೆ ಹೋಲಿಸಿದರೆ ಪುತ್ತೂರು ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಕಡಿಮೆ. 33 ಕೆ.ವಿ.ಸಬ್ಸ್ಟೇಷನ್ ಗಳಲ್ಲಿ 2 ತಾಸು ಲೋಡ್ ಶೆಡ್ಡಿಂಗ್ ಆಗುತ್ತದೆ. ಸರಕಾರದ ಸುತ್ತೋಲೆ ಪ್ರಕಾರ ಕೃಷಿ ಪಂಪ್ ಸೆಟ್ ಗಳಿಗೆ ಏಳು ತಾಸು ವಿದ್ಯುತ್ ಪೂರೈಕೆ ಮಾಡಬೇಕು. ಆದರೆ ಇಲ್ಲಿ 8 ರಿಂದ ಗರಿಷ್ಟ 18 ತಾಸು ತನಕ ವಿದ್ಯುತ್ ಪೂರೈಸುತ್ತೇವೆ. ಸುಳ್ಯ, ಕಡಬದಲ್ಲಿ 110 ಕೆ.ವಿ ಸಬ್ ಸ್ಟೇಷನ್ ನಿರ್ಮಾಣವಾದರೆ, ಪುತ್ತೂರಿನ ಒತ್ತಡ ಕಡಿಮೆ ಆಗುತ್ತದೆ.- ನಾರಾಯಣ ಪೂಜಾರಿ ಕಾರ್ಯಪಾಲಕ ಎಂಜಿನಿಯರ್, ಪುತ್ತೂರು, ಮೆಸ್ಕಾಂ