ಉಳ್ಳಾಲ: ಉಚ್ಚಿಲ ಪೆರಿಬೈಲ್ ಬಳಿ ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಉಚ್ಚಿಲ ನಿವಾಸಿಗಳಾದ ಗುರು (25) ಮತ್ತು ಜಾನ್ (30) ಎಂಬವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಕ್ಬಾಲ್ ಮತ್ತು ಮನ್ಸೂರ್ ಇಬ್ಬರು ಉಚ್ಚಿಲ ಸಮುದ್ರ ತೀರದಲ್ಲಿ ವಾಲಿಬಾಲ್ ಆಡಲು ಬಂದಿದ್ದ ಸಂದರ್ಭ ಎರಡು ಬೈಕುಗಳಲ್ಲಿ ಬಂದ ಆರು ಮಂದಿಯ ತಂಡ ರಾಡ್ ಹಾಗೂ ಮರದ ದಿಮ್ಮಿಯಿಂದ ಇಕ್ಬಾಲ್ ಎಂಬಾತನಿಗೆ ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿತ್ತು.
ಜೋಡಿಗೆ ನಿಂದಿಸಿದ್ದರು: ಜ.11ರಂದು ಗುರು ಮತ್ತು ಪ್ರಿಯತಮೆ ಉಚ್ಚಿಲ ಸಮುದ್ರ ತೀರಕ್ಕೆ ವಿಹಾರಕ್ಕೆಂದು ಬಂದಿದ್ದರು. ಈ ಸಂದರ್ಭ ಅಲ್ಲೇ ವಾಲಿಬಾಲ್ ಆಟವಾಡುತ್ತಿದ್ದ ಇಕ್ಬಾಲ್ ಇಬ್ಬರನ್ನು ಕಂಡು ಅವಾಚ್ಯವಾಗಿ ನಿಂದಿಸಿದ್ದನು. ಇದರಿಂದ ಕೆದರಿದ ಗುರು ಇಕ್ಬಾಲ್ ನನ್ನು ಪ್ರಶ್ನಿಸಲು ಮುಂದಾದಾಗ ಇಕ್ಬಾಲ್ ಮತ್ತು ತಂಡ ಬೆದರಿಕೆಯೊಡ್ಡಿ ವಾಪಸ್ಸು ಕಳುಹಿಸಿತ್ತು. ಇದರ ದ್ವೇಷ ಇಟ್ಟುಕೊಂಡ ಗುರು ತನ್ನ ಸ್ನೇಹಿತ ಜಾನ್ ಸಹಿತ ನಾಲ್ವರ ಜತೆಗೆ ಸೇರಿಕೊಂಡು ಉಚ್ಚಿಲ ಪೆರಿಬೈಲು ಬಳಿ ಆಟವಾಡಲು ಬಂದಿದ್ದ ಇಕ್ಬಾಲ್ ಗೆ ಮಾರಣಾಂತಿಕ ದಾಳಿ ನಡೆಸಿದೆ. ಹಲ್ಲೆಗೊಳಗಾದ ಇಕ್ಬಾಲ್ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದು, ಘಟನೆಯಿಂದ ಉಚ್ಚಿಲದಲ್ಲಿ ಉಂಟಾದ ಬಿಗುವಿನ ವಾತಾವರಣ ಇಬ್ಬರ ಬಂಧನದಿಂದ ತಿಳಿಯಾಗಿದೆ.