ಬಂಟ್ವಾಳ: ಬಿ.ಸಿ.ರೋಡ್ ಸಮೀಪದ ಕೈಕುಂಜೆಯಲ್ಲಿ ಮಹಿಳೆಯೋರ್ವರ ಕತ್ತಿನಿಂದ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೈವಲಿಗೆ ನಿವಾಸಿ ಜನಾರ್ಧನ ಮಂಜಲ್ಪಾಡಿ ಎಂಬವರ ಪುತ್ರ ಕಿರಣ್(24) ಮತ್ತು ಕ್ಯಾಲಿಕಟ್ ಜಿಲ್ಲೆಯ ಪೆರಂಬರ ತಾಲೂಕಿನ ಚೆಂಬರಾ ನಿವಾಸಿ ಅಹ್ಮದ್ ಪಿ.ಕೆ. ಎಂಬವರ ಪುತ್ರ ನಿಝಾಮ್ ಬಂಧಿತ ಆರೋಪಿಗಳು.
ಬಂಟ್ವಾಳ ಬಿ.ಮೂಡಾ ಗ್ರಾಮದ ಕೈಕುಂಜೆ ನಿವಾಸಿ ಸುಬ್ರಾಯ ಮಯ್ಯ ಎಂಬವರ ಪತ್ನಿ ಕಮಲಾಕ್ಷಿ ಎಸ್. ಮಯ್ಯ ಎಂಬ ಮಹಿಳೆ ಜ. 5ರಂದು ಸಂಜೆ 6:45ರ ಸುಮಾರಿಗೆ ಕೈಕುಂಜೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕೊಂದರಲ್ಲಿ ಬಂದ ಇಬ್ಬರು ಮಹಿಳೆಯ ಕತ್ತಿನಿಂದ ಚಿನ್ನದ ಕರಿಮಣಿಯನ್ನು ಎಗರಿಸಿ ಪರಾರಿಯಾಗಿದ್ದರು.
ಎಗರಿಸಲ್ಪಟ್ಟ 1,40,000 ರೂ. ಮೌಲ್ಯದ ಚಿನ್ನದ ಕರಿಮಣಿಯನ್ನು ಹಾಗೂ 50,000 ರೂ. ಮೌಲ್ಯದ ಬೈಕನ್ನು ಆರೋಪಿಗಳಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಮಂಗಳೂರು ನೀರುಮಾರ್ಗ ಎಂಬಲ್ಲಿ ಮಹಿಳೆಯೊಬ್ಬರ ಕರಿಮಣಿ ಸರವನ್ನು ಎಗರಿಸಲು ವಿಫಲ ಯತ್ನ ನಡೆಸಿರುವುದಾಗಿ ತಿಳಿಸಿದ್ದಾರೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಭೂಷಣ್ ಜಿ. ಬೊರಸೆ, ಹೆಚ್ಚುವರಿ ಅಧೀಕ್ಷಕ ಸಿ.ಬಿ.ವೇದಮೂರ್ತಿ ನಿರ್ದೇಶನದಂತೆ, ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ಡಾ. ರವೀಶ್ ಸಿ.ಆರ್, ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ ಬಿ.ಕೆ. ಮಾರ್ಗದರ್ಶನದಂತೆ, ನಗರ ಠಾಣೆ ಎಸ್ಸೈ ನಂದಕುಮಾರ್ ಎಂ.ಎಂ., ನಗರ ಠಾಣೆಯ ಅಪರಾಧ ವಿಭಾಗದ ಎಸ್ಸೈ ಗಂಗಾಧರಪ್ಪರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಎಎಸ್ ಐ ಸಂಜೀವ ಕೆ., ಹೆಡ್ ಕಾನ್ಸ್ಟೇಬಲ್ ಗಳಾದ ಅಬ್ದುಲ್ ಕರೀಂ, ಸುಜು, ಕೃಷ್ಣ, ಸುರೇಶ್, ಗಿರೀಶ, ರಾಜೇಶ್, ಸಿಬ್ಬಂದಿಯಾದ ಅದ್ರಾಮ, ಸಂಪತ್ ಮತ್ತು ಮಂಗಳೂರು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಕಂಪ್ಯೂಟರ್ ವಿಭಾಗದ ಸಿಬ್ಬಂದಿಯಾದ ಸಂಪತ್, ದಿವಾಕರ ಪಾಲ್ಗೊಂಡರು.