ಮಡಿಕೇರಿ: ನೋಟುಗಳ ಚಲಾವಣೆೆಯನ್ನು ರದ್ದುಗೊಳಿಸಿರುವ ಕೇಂದ್ರದ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಗಾಂಧಿ ಮಂಟಪದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ದಿಕ್ಕಾರ ಕೂಗಿದರು.
ದೇಶದಲ್ಲಿ ಜನ ಸಾಮಾನ್ಯರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ದೂರ ಮಾಡಲು ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್, ಕೇಂದ್ರ ಸರ್ಕಾರ ಕೆೇವಲ ಮಾತಿನಲ್ಲಷ್ಟೆ ಕಾಲ ಹರಣ ಮಾಡುತ್ತಿದ್ದು, ಕೆಲಸ ಕಾರ್ಯಗಳ ಸಾಧನೆ ಶೂನ್ಯವೆಂದು ಟೀಕಿಸಿದರು. ಕಳೆದ 64 ವರ್ಷಗಳ ಗಣತಂತ್ರ ವ್ಯವಸ್ಥೆಯಲ್ಲಿ 20 ವರ್ಷಗಳ ಕಾಲ ಬಿಜೆಪಿ ಬೆಂಬಲಿತ ಸರ್ಕಾರಗಳು ದೇಶವನ್ನು ಆಳಿವೆ. ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿರುವ ಬಿಜೆಪಿ ಈ ಇಪ್ಪತ್ತು ವರ್ಷಗಳಲ್ಲಿ ದೇಶಕ್ಕೆ ಯಾವ ಕೊಡುಗೆ ನೀಡಿದೆ ಎಂಬುವುದನ್ನು ಬಹಿರಂಗಪಡಿಸಲಿ ಎಂದು ಅವರು ಒತ್ತಾಯಿಸಿದರು.
ನೋಟುಗಳ ಚಲಾವಣೆಯನ್ನು ರದ್ದು ಮಾಡಿರುವುದರಿಂದ ಮಂಗಳ ಕಾರ್ಯಗಳು ಸ್ಥಗಿತಗೊಂಡಿವೆ, ರೋಗಿಗಳ ಚಿಕಿತ್ಸಾ ವೆಚ್ಚ ಭರಿಸಲಾಗದೆ, ರೈತರು ಕೃಷಿ ಕಾರ್ಯದಲ್ಲಿ ತೊಡಗಲಾರದೆ, ತೋಟದ ಮಾಲೀಕರು ಕಾರ್ಮಿಕರಿಗೆ ವೇತನವನ್ನು ನೀಡಲಾಗದೆ ಸಂಕಷ್ಟವನ್ನು ಎದುರಿಸಿದ್ದಾರೆ. ಕೇಂದ್ರ ಸರ್ಕಾರ ನೋಟುಗಳ ಚಲಾವಣೆಯನ್ನು ರದ್ದುಗೊಳಿಸುವ ಮೂಲಕ ಕಪ್ಪು ಹಣವನ್ನು ಬಿಳಿ ಮಾಡಲು ಅವಕಾಶ ಕಲ್ಪಿಸಿದೆ ಎಂದು ಆರೋಪಿಸಿದರು.
ಮಹಿಳೆಯರು ಕಷ್ಟ ಕಾಲಕ್ಕಾಗಿ ಕೂಡಿಟ್ಟಿದ್ದ ಹಣ ಕಪ್ಪು ಹಣವೇ ಎಂದು ಪ್ರಶ್ನಿಸಿದ ಸಚಿವ ಸೀತಾರಾಮ್, ದೇಶದಲ್ಲಿ ವರ್ಷಕ್ಕೆ ಒಂದು ಬಾರಿ ತೆರಿಗೆ ಅಧಿಕಾರಿಗಳ ದಾಳಿ ಸಾಮಾನ್ಯವಾಗಿದ್ದು, ಪ್ರಸ್ತುತ ನಡೆಯುತ್ತಿರುವ ದಾಳಿ ವಿಶೇಷವೇನಲ್ಲವೆಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ ರಾಹುಲ್ ಗಾಂಧಿಯವರು ಜನರ ಪರವಾದ ಪ್ರಶ್ನೆಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದು, ಇದಕ್ಕೆ ಪ್ರಧಾನ ಮಂತ್ರಿಗಳು ಉತ್ತರಿಸಬೇಕು. ಉತ್ತರ ನೀಡದಿದ್ದಲ್ಲಿ 2019ರಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಬಿಜೆಪಿ ಪ್ರತಿನಿಧಿಗಳು ಕೊಡಗು ಜಿಲ್ಲೆಗೆ ಏನು ನೀಡಿದ್ದಾರೆ ಎನ್ನುವುದನ್ನು ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ತಿಳಿಸಿದ ಸೀತಾರಾಮ್, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಶ್ರಮಿಸುವಂತೆ ಕರೆ ನೀಡಿದರು.
ಎಐಸಿಸಿ ಸಂಯೋಜಕಿ ಉಷಾ ನಾಯ್ಡು ಮಾತನಾಡಿ, ನ.8 ರಂದು ರಾತ್ರಿ 8 ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರ್ಥಿಕ ಎಮರ್ಜೆನ್ಸಿಯನ್ನು ಘೋಷಣೆ ಮಾಡುವ ಮೂಲಕ ನಿಮ್ಮ ಸಂಪಾದನೆಯನ್ನು ನಿಮಗಿಲ್ಲದಂತೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 50 ದಿನಗಳಲ್ಲಿ ಅಚ್ಛೇ ದಿನ್ ಬರಲಿದೆ ಎಂದು ಮಾಧ್ಯಮಗಳ ಮೂಲಕ ಮನ್ ಕೀ ಬಾತ್ ನಲ್ಲಿ ಹೇಳಿಕೊಳ್ಳುತ್ತಿರುವ ಪ್ರಧಾನಿಗಳು ಮೊದಲು ಜನರ ಮನದ ಮಾತು ಕೇಳಲಿ. ಜನರು ಕಷ್ಟ ಪಟ್ಟು ದುಡಿದ ಹಣದ ಮೇಲೆ ಸರ್ಕಾರದ ನಿಯಂತ್ರಣ ಏಕೆ ಎಂದು ಪ್ರಶ್ನಿಸಿದ ಉಷಾ ನಾಯ್ಡು, ನಮ್ಮ ಹಣ ನಮ್ಮ ಖರ್ಚು ಎನ್ನುವುದು ನಮ್ಮ ಹಕ್ಕೆಂದು ಪ್ರತಿಪಾದಿಸಿದರು.
ನಕಲಿ ನೋಟು ಹಾಗೂ ಭಯೋತ್ಪಾದನೆಯ ನಿಯಂತ್ರಣಕ್ಕಾಗಿ ನೋಟುಗಳ ಚಲಾವಣೆಯನ್ನು ರದ್ದುಪಡಿಸಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ನ.9ರಂದೇ ನಕಲಿ ನೋಟು ಪತ್ತೆಯಾಗಿದೆ. ಆರ್ಥಿಕ ಸಂಕಷ್ಟದಿಂದ ಜನರು ಹಸಿವನ್ನು ಕೂಡ ನೀಗಿಸಿಕೊಳ್ಳಲು ಸಾಧ್ಯವಾಗದೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುತ್ತಿರುವ ಬಿಜೆಪಿ ಸರ್ಕಾರ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುತ್ತಿಲ್ಲವೆಂದು ಉಷಾ ನಾಯ್ಡು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಬಡವರ ಪರವಾಗಿ ಹೋರಾಡಲು ಕಾಂಗ್ರೆಸ್ ಸದಾ ಸಿದ್ಧವಿದ್ದು, ಕೇಂದ್ರದ ಅನಾಚಾರವನ್ನು ಪ್ರತಿಯೊಬ್ಬರು ಧಿಕ್ಕರಿಸಬೇಕೆಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷದ ಕೊಡಗು ಜಿಲ್ಲಾ ಉಸ್ತುವಾರಿ ಹುಸೇನ್ ಮಾತನಾಡಿ, ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ಆಧಾರ್ ಕಾರ್ಡ್ ನ್ನು ಜಾರಿಗೆ ತಂದಾಗ ಟೀಕೆ ವ್ಯಕ್ತಪಡಿಸಿದ್ದ ಬಿಜೆಪಿ, ಇದೀಗ ಎಲ್ಲಾ ವ್ಯವಹಾರಗಳಿಗೆ ಆಧಾರನ್ನೇ ಬಳಸಿಕೊಳ್ಳುತ್ತಿದೆಯೆಂದು ಟೀಕಿಸಿದರು. ದೇಶದ ಜನರ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡಿರುವ ಕೇಂದ್ರ ಸರ್ಕಾರ ಖಾತೆದಾರರಿಗೆ ಶೇ.18 ರಷ್ಟು ಬಡ್ಡಿ ನೀಡಬೇಕೆಂದು ಅವರು ಒತ್ತಾಯಿಸಿದರು.
ಗಾಂಧಿ ಮೈದಾನದಿಂದ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಚಿವೆ ಉಮಾಶ್ರೀ, ಮಾಜಿ ಸಂಸದ ಸಿದ್ದರಾಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ಕೆ.ಮಂಜುನಾಥ್ ಕುಮಾರ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಡಿಕೇರಿ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಕುಮಾರ್, ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ, ಕೆ.ಪಿ. ಚಂದ್ರಕಲಾ, ವಿ.ಪಿ. ಶಶಿಧರ್, ಮಹಿಳಾ ಘಟಕದ ಪ್ರಮುಖರಾದ ಕುಮುದಾ ಧರ್ಮಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.