ಮೂಡುಬಿದಿರೆ: ವಿದ್ಯಾಗಿರಿಯಲ್ಲಿ ಕುಂಚದ ಗರಿಯಲ್ಲಿ ಮತ್ತೆ ಬಣ್ಣದ `ಭಿನ್ನಣ’. ಭಿನ್ನ ಸ್ಥಳಗಳಿಂದ ಬಂದ ರಾಷ್ಟ್ರಮಟ್ಟದ 20 ಕಲಾವಿದರು ತಮ್ಮದೇ ವಿಭಿನ್ನ ಶೈಲಿಯಲ್ಲಿ ಕುಂಚಗಳಿಂದ ಸುಮಾರು 40 ಕಲಾಕೃತಿಗಳಲ್ಲಿ ಬದುಕು-ಭಾವನೆಗಳಿಗೆ ಬಣ್ಣದ ನಮೂನೆಯನ್ನು ನೀಡುತ್ತಿದ್ದಾರೆ.
ಈ ಬಾರಿಯ ವರ್ಣವಿರಾಸತ್ ನಲ್ಲಿ ಮುಖ್ಯವಾಗಿ ಹೆರಿಟೇಜ್ ಲ್ಯಾಂಡ್ ಸ್ಕೇಪ್, ವರ್ಣಗಳಲ್ಲಿ ಭಾವನೆಗಳ ಬಣ್ಣನೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಪ್ರತಿಯೊಂದು ಕಲಾಕೃತಿಗಳಲ್ಲಿ ಒಂದಕ್ಕೊಂದು ಭಿನ್ನವಾಗಿ ಮೂಡಿಬಂದಿದ್ದು, ಕಲಾರಸಿಕರನ್ನು ಆಕರ್ಷಿಸುತ್ತಿದೆ. ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ಅರಳುತ್ತಿರುವ ಕಲಾಕೃತಿಗಳನ್ನು ದೇಶಿಯ ಸಂಸ್ಕೃತಿ ಅನಾವರಣಗೊಳ್ಳುತ್ತಿದೆ. ಐದು ದಿನಗಳ ರಾಷ್ಟ್ರೀಯ ಕಲಾಶಿಬಿರ ಕುಂಚಗಳಲ್ಲಿ ಬಣ್ಣದ ಪ್ರಪಂಚ ಸೃಷ್ಠಿಸುತ್ತಿದೆ.
ಕೈಯೇ ಕುಂಚ:
ಮುಂಬೈಯ ಕಲಾವಿದ ರಮೇಶ್ ಹರಿ ಪಜ್ಪಂಡೆ ಶಿಬಿರದಲ್ಲಿ ಭಿನ್ನ ರೀತಿಯಲ್ಲಿ ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಬ್ರಶ್ ಕುಂಚವನ್ನು ಬಳಸದೆ, ತನ್ನ ಕೈಯನ್ನೇ ಕುಂಚವಾಗಿಸಿ ಚಿತ್ರಗಳನ್ನು ರಚಿಸುತ್ತಿದ್ದಾರೆ. ಕೆಲವು ಕಡೆ ಕುಂಚ ಅನಿವಾರ್ಯವಿರುವ ಸಂದರ್ಭದಲ್ಲೂ ಕಾಗದವನ್ನು ಕುಂಚವಾಗಿಸಿ ಚಿತ್ರವನ್ನು ಪೂರ್ಣಗೊಳಿಸುತ್ತಿದ್ದಾರೆ. ಅವರು ತಮ್ಮ ಚಿತ್ರದಲ್ಲಿ ರಾಧಕೃಷ್ಣ, ದಂಪತಿಯ ಚಿತ್ರವನ್ನು ಬಿಡಿಸಿದ್ದಾರೆ.
ಕ್ಯಾನ್ವಸ್ ನಲ್ಲಿ ಬಣ್ಣದ ಹುಡಿ:
ಮುಂಬೈಯ ಇನ್ನೊಬ್ಬ ಕಲಾವಿದ ನಿಲೇಶ್ ಡಿ. ಭಾರ್ತಿ ಬಣ್ಣದ ಹುಡಿಗಳಲ್ಲಿ ಲ್ಯಾಂಡ್ ಸ್ಕೇಪ್ ಅದರಲ್ಲೂ ಕಾಶಿ ಘಾಟ್ ಅನ್ನು ಚಿತ್ರಿಸಿದ್ದಾರೆ. ಗಂಗೆಯ ಜಲ, ಸಾಂಪ್ರದಾಯಿಕ ಕಟ್ಟಡಗಳ ಚಿತ್ರಣಗಳು ಛಾಯಾಚಿತ್ರಗಳಂತೆ ನೈಜ್ಯತೆಯನ್ನು ನೀಡುತ್ತಿರುವುದು ವಿಶೇಷ. ಬಹಳ ಅಪರೂಪದ ಶೈಲಿಯನ್ನು ತನ್ನದಾಗಿಸಿಕೊಂಡು ನಿಲೇಶ್ ಶಿಬಿರದಲ್ಲಿ ಇದೇ ರೀತಿಯ ಎರಡು ಚಿತ್ರಗಳನ್ನು ರಚಿಸುತ್ತಿದ್ದಾರೆ. ಮುಂಬೈಯ ಅಮಿ ಪಾಟೇಲ, ಚೆನ್ನೈಯ ಬಾಲಸುಬ್ರಮಣ್ಯಂ, ಮುಂಬೈಯ ದೇವದಾಸ್ ಶೆಟ್ಟಿ, ಕೇರಳದ ದ್ರುವರಾಜ್, ಗಣಪತಿ ಹೆಗ್ಡೆ ಬೆಂಗಳೂರು, ಗಂಗಥರನ್ ತಮಿಳುನಾಡು, ಚೆನ್ನೈಯ ಕನ್ನನ್, ಕಾಂತರಾಜು ಬೆಂಗಳೂರು, ಕಿಶೋರ್ ಗುಜರಾತ್, ಪಾಲಕ್ ದುಬೇ ಹೈದರಾಬಾದ್, ಪ್ರೀತಿ ಸಂಯುಕ್ತ, ರಮ್ಯಂಡುದಾಸ್ ತ್ರಿಪೂರ್, ಸಾಗರ್ ಮುಂಬೈ, ಮೈಸೂರಿನ ಸಚ್ಚಿದಾನಂದ, ಸಂಗ್ರಮ್ ಕುಮಾರ್ ಒಡಿಸ್ಸಾ, ಸ್ಮಿಜ ವಿಜಯನ್, ಶ್ರಿಜ ಪಲ್ಲಂ, ವಿಜಯ ಕುಮಾರ್ ಅವರ ಕುಂಚದಲ್ಲಿ ಕಲೆಗಳು ಅರಳುತ್ತಿದೆ.
ವಿರಾಸತ್ ವೈಭವಕ್ಕೆ ಸಾಂಸ್ಕೃತಿಕ ಮೆರವಣಿಗೆ
ಮೂಡುಬಿದಿರೆ: 2017ನೇ ಆಳ್ವಾಸ್ ವಿರಾಸತ್ ಮೂಡುಬಿದಿರೆ ಸಮೀಪದ ಪುತ್ತಿಗೆ ವಿವೇಕಾನಂದ ನಗರದಲ್ಲಿ ಮತ್ತೆ ಅನಾವರಣಗೊಂಡಿದೆ. ಆವರಣ ಸುತ್ತ ಅಳ್ವಾಸ್ ಸಾಂಪ್ರಾದಾಯಿಕ ಅಲಂಕಾರ ಮನಸ್ಸಿಗೆ ಮುದ ನೀಡುವಂತಿದ್ದರೇ, ವಿರಾಸತ್ ಉದ್ದೀಪನದ ಮೊದಲು ನಡೆದ ಸಾಂಸ್ಕೃತಿಕ ಮೆರವಣಿಗೆ ಆಳ್ವಾಸ್ ವಿರಾಸತ್ ವೈಭವಕ್ಕೆ ಪೂರಕವಾಗಿ ಹೊಸ ಮೆರಗು ನೀಡಿದೆ.
ಬಯಲು ರಂಗಮಂದಿರದಿಂದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬೃಹತ್ ವೇದಿಕೆಯ ಕಡೆಗೆ ಸಾಗಿಬಂದ ಮೆರವಣಿಗೆಯಲ್ಲೂ ದೇಶಿಯ ಸಂಸ್ಕೃತಿ ಅನಾವರಣಗೊಂಡಿದೆ. ಶಂಖದ ನಾದ, ಚೆಂಡೆ-ಕೊಂಬು, ಕೊರಗರ ಡೊಳ್ಳು, ಶ್ರೀಲಂಕಾದ ಸಾಂ್ರದಾಯಿಕ ನೃತ್ಯ ಕಲಾವಿದರು, ಕಲಶ, ಸಾಕ್ಸೋಫೊನ್, ಕದಾನಿ ಧ್ವನಿ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದೆ. 15 ನಿಮಿಷಗಳಲ್ಲಿ ಮುಕ್ತಾಯಗೊಂಡ ಮೆರವಣಿಗೆ ವಿರಾಸತ್ ಉದ್ಘಾಟನೆಗೆ ಮುನ್ನಡಿಯಾಯಿತು.