ಬಂಟ್ವಾಳ: ಬರಿಮಾರು ಗ್ರಾಮದ ಶ್ರೀ ಮಹಮಾಹಿ ದೇವಸ್ಥಾನದ ಬಳಿ ವ್ಯಕ್ತಿಯೊಬ್ಬರು ಸರಕಾರಿ ಜಮೀನನ್ನು ಅತಿಕ್ರಮಣ ಮಾಡಿಕೊಂಡು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದನ್ನು ಹತ್ತು ದಿನದ ಒಳಗಾಗಿ ತೆರವುಗೊಳಿಸುವಂತೆ ಮಂಗಳೂರು ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್ ಅವರು ತಾಕೀತು ಮಾಡಿದ್ದಾರೆ.
ಸ್ಥಳೀಯ ನಿವಾಸಿ ಮ್ಯಾಕ್ಸಿಂ ಸಿಕ್ಚೇರ ಎಂಬವರು ನೀಡಿದ ದೂರಿನನ್ವಯ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಈ ಸೂಚನೆ ನೀಡಿದ್ದು ಬಳಿಕ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಗೆ ಆದೇಶಿಸಿದ್ದಾರೆ.
ಇಲ್ಲಿನ ಪೂವಪ್ಪ ಪೂಜಾರಿ ಎಂಬವರು ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿ ಕಪ್ಪು ಗಣಿಗಾರಿಕೆ ನಡೆಸುತ್ತಿದ್ದಾರೆ. ಇದರಿಂದಾಗಿ ಪರಿಸರದ ಜನರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ದೂರು ಸಲ್ಲಿಸಿದ್ದರು. ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್ರ ಜೊತೆ ಗಣಿ ಇಲಾಖೆಯ ಗಿರೀಶ್ ಮೋಹನ್, ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕೆ., ಗ್ರಾಮ ಕರಣಿಕರಾದ ಬಸಪ್ಪ, ತಾಲೂಕು ಕಚೇರಿಯ ಸಿಬ್ಬಂದಿ ಸದಾಶಿವ ಕೈಕಂಬ ಉಪಸ್ಥಿತರಿದ್ದರು.