ಕಾಸರಗೋಡು: ರಾಷ್ಟ್ರ ಕವಿ ಗೋವಿಂದ ಪೈ ಸ್ಮಾರಕ ಗಿಳಿವಿಂಡು ಹಾಗೂ ಸ್ಮಾರಕ ಲೋಕಾರ್ಪಣೆಗೆ ಅಂತಿಮ ಸಿದ್ಧತೆ ನಡೆಯುತ್ತಿದೆ. ಜನವರಿ 19ರಂದು ಸಂಜೆ 3.30 ಕ್ಕೆ ಲೋಕಾರ್ಪಣೆಗೊಳ್ಳಲಿದೆ. ಕೇರಳ – ಕರ್ನಾಟಕ ಮುಖ್ಯ ಮಂತ್ರಿಗಳು, ಸಚಿವದ್ವಯರು ಉಪಸ್ಥಿತರಿರುವರು.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಿಂದ ಪೈ ಭವನಿಕಾ ರಂಗ ಮಂದಿರವನ್ನು, ಗಿಳಿವಿಂಡು- ರಾಷ್ಟ್ರಕವಿ ಗೋವಿಂದ ಪೈ ಸಾಂಸ್ಕೃತಿಕ ಕೇಂದ್ರವನ್ನು ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಲಿದ್ದಾರೆ. ಪುನರ್ ಚೇತನಗೊಂಡ ಗೋವಿಂದ ಪೈ ನಿವಾಸವನ್ನು ಕೇರಳ ಸಾಂಸ್ಕೃತಿಕ ಸಚಿವ ಎ. ಕೆ ಬಾಲನ್ , ಗೋವಿಂದ ಪೈ ಪ್ರತಿಮೆ ಅನಾವರಣವನ್ನು ಕರ್ನಾಟಕ ಕನ್ನಡ ಮತ್ತು ಸಾಂಸ್ಕೃತಿಕ ಸಚಿವೆ ಉಮಾಶ್ರೀ, ಗಿಳಿವಿಂಡು ಯಕ್ಷ ದೇಗುಲ ವನ್ನು ಕೇರಳ ಸಚಿವ ಇ. ಚಂದ್ರಶೇಖರನ್ , ಪಾರ್ತಿಸುಬ್ಬ ಯಕ್ಷ ವೇದಿಕೆಯನ್ನು ಕರ್ನಾಟಕ ಅರಣ್ಯ ಸಚಿವ ಬಿ . ರಮಾನಾಥ ರೈ ಉದ್ಘಾಟಿಸುವರು.
ಮಂಜೇಶ್ವರ ಶಾಸಕ ಪಿ . ಬಿ ಅಬ್ದುಲ್ ರಜಾಕ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕಾಸರಗೋಡು ಸಂಸದ ಪಿ . ಕರುಣಾಕರನ್ , ಶಾಸಕರಾದ ಎನ್.ಎ ನೆಲ್ಲಿಕುನ್ನು, ಕೆ. ಕುಞರಾಮನ್ , ಎಂ. ರಾಜಗೋಪಾಲ್, ಜಿಲ್ಲಾಧಿಕಾರಿ ಕೆ . ಜೀವನ್ ಬಾಬು , ಮಾಜಿ ಸಚಿವ ಎಂ.ಎ ಬೇಬಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ. ಸಿ ಬಷೀರ್, ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ ಎಂ ಅಶ್ರಫ್, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಅಝೀಜ್ ಹಾಜಿ, ಮಾಜಿ ಶಾಸಕ ಸಿ.ಎಚ್ ಕುಞ೦ಬು ಮೊದಲಾದವರು ಉಪಸ್ಥಿತರಿರುವರು.
ಸುಮಾರು 1.83 ಎಕ್ರೆ ಜಮೀನಿನಲ್ಲಿ ತಲೆ ಎತ್ತಿ ನಿಂತಿರುವ ಯೋಜನೆಯು ಗಮನಸೆಳೆಯುತ್ತಿದೆ. ಯಕ್ಷಗಾನ ಕಲಾರೂಪಗಳಿಗೆ ಮಾತ್ರವಾಗಿ ಒಂದು ವಿಶೇಷ ಮ್ಯೂಸಿಯಂನ್ನು ನಿರ್ಮಿಸಲಾಗಿದೆ. 6 ಅಡಿ ಎತ್ತರದ ಗೋವಿಂದ ಪೈ ಪ್ರತಿಮೆಯನ್ನು ಸ್ಥಾಪಿಸುವ ಕಾರ್ಯ ನಡೆಯುತ್ತಿದೆ. ಗೋವಿಂದ ಪೈಗಳ ನಿವಾಸವನ್ನು ಪರಂಪರಾಗತ ಆಸ್ತಿಯನ್ನಾಗಿ ಸಂರಕ್ಷಿಸಿಡುವ ಜೊತೆಗೆ,ಅವರ ಎಲ್ಲಾ ಕೃತಿಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.
ಗೋವಿಂದ ಪೈನೆಲೆಸಿದ್ದ ಮಂಜೇಶ್ವರ ನಿವಾಸವನ್ನು ಸಂರಕ್ಷಿಸುವ ಉದ್ದೇಶದಿಂದ ಆಧುನೀಕರಿಸಿ ಗಿಳಿವಿಂಡು ಎಂದು ಪುನರ್ ನಾಮಕರಣಗೊಳಿಸುವ ಯೋಜನೆಗೆ 2008ರಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿತ್ತು. 2008ರ ಮಾರ್ಚ್ 23 ರಂದು ಗೋವಿಂದ ಪೈ 125ನೇ ಜನ್ಮದಿನಾಚರಣೆ ಯಂದು ಶಿಲಾನ್ಯಾಸ ನೆರವೇರಿಸಲಾಗಿತ್ತು. ಒಟ್ಟು ಯೋಜನೆ ಪೂರ್ಣಗೊಳ್ಳಲು ನಾಲ್ಕು ಕೋಟಿ ರೂ . ವೆಚ್ಚ ರೂ . ಗಿಂತ ಅಧಿಕ ವೆಚ್ಚ ಮಾಡಲಾಗಿದೆ. ಯೋಜನೆಯ ಅಂತಿಮ ಸಿದ್ಧತೆ ಕುರಿತು ಶನಿವಾರ ಸಂಜೆ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷ ವೀರಪ್ಪ ಮೊಯ್ಲಿ ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ತೇಜೋಮಯ, ಕೆ. ಆರ್ ಜಯಾನಂದ , ಕೆ ಕಮಲಾಕ್ಷ, ಸುಭಾಶ್ಚ೦ದ್ರ ಕಣ್ವತೀರ್ಥ, ಕಕ್ಕಿಲ್ಲಾಯ ಮೊದಲಾದವರು ಉಪಸ್ಥಿತರಿದ್ದರು.