ಬೆಳ್ತಂಗಡಿ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 4 ರಂದು ಸಾಯಂಕಾಲ 6.50ಕ್ಕೆ ಗೋಧೂಳಿ ಲಗ್ನ ಸುಮೂರ್ತದಲ್ಲಿ 46ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ.
ದಿನಾಂಕ 15-01-2017ರಂದು ಬೆಳಿಗ್ಗೆ ಉಚಿತ ಸಾಮೂಹಿಕ ವಿವಾಹಕ್ಕಾಗಿ ಪ್ರತ್ಯೇಕ ಕಚೇರಿಯನ್ನು ವಸಂತ ಮಹಲ್ ನ (ಮಂಜಯ್ಯ ಹೆಗ್ಗಡೆ ಕಲಾಭವನ) ಬಲ ಭಾಗದ ಕೊಠಡಿಯಲ್ಲಿ ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ 08256-277144 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆ ಕಣ ಹಾಗೂ ಮಂಗಲ ಸೂತ್ರವನ್ನು ನೀಡಲಾಗುವುದು. ಯಾವುದೇ ಸಂದರ್ಭದಲ್ಲಿ ಎರಡನೇ ವಿವಾಹಕ್ಕೆ ಅವಕಾಶವಿರುವುದಿಲ್ಲ. ಮದುವೆಯ ಎಲ್ಲಾ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದಲೇ ಭರಿಸಲಾಗುವುದು.
ಸಾಮೂಹಿಕ ವಿವಾಹದಲ್ಲಿ ಮದುವೆ ಆಗಲಿಚ್ಛಿಸುವವರು ಏಪ್ರಿಲ್ 30ರೊಳಗೆ ಸವಿವರ ಮಾಹಿತಿ ಹಾಗೂ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ವರದಕ್ಷಿಣೆ ಹಾಗೂ ವಿವಾಹಕ್ಕಾಗುವ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ 1972ರಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿದ ಉಚಿತ ಸಾಮೂಹಿಕ ವಿವಾಹವನ್ನು ಪ್ರತಿವರ್ಷ ನಡೆಸುತ್ತಿದ್ದು ಕಳೆದ ವರ್ಷದವರೆಗೆ 11,927 ಜೊತೆ ವಿವಾಹವಾಗಿರುತ್ತದೆ.
ಧರ್ಮಸ್ಥಳದಲ್ಲಿ ನಗದು ರಹಿತ ಪಾವತಿ ಸೌಲಭ್ಯ: ಭಕ್ತಾದಿಗಳ ಅನುಕೂಲಕ್ಕಾಗಿ ಧರ್ಮಸ್ಥಳದಲ್ಲಿ ವಿವಿಧ ಸೇವೆಗಳಿಗೆ ನಗದು ರಹಿತ ಪಾವತಿ ಸೌಲಭ್ಯ ಕಲ್ಪಿಸಿದ್ದು ಡಿ. ಹರ್ಷೇಂದ್ರ ಕುಮಾರ್ ಶನಿವಾರ ಇದಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ದೇವಸ್ಥಾನದಲ್ಲಿ ಪೂಜೆ ಹಾಗೂ ವಿವಿಧ ಸೇವೆಗಳು, ಅನ್ನದಾನಕ್ಕೆ ನಗದು ರಹಿತ ಪಾವತಿ ಸೌಲಭ್ಯವಿದ್ದು ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.