ಮೂಡುಬಿದಿರೆ: ಬೆಹತಿ ಹವಾ ಸ ತಾ ವೋ…ಕಹಾ ಗಯ ಉಸೇ ಡೂಂಡೋ…(ಎಲ್ಲಿ ಹೋದ ಹುಡುಕಿ) ಎಂದು ಹಾಡು ಕೇಳಿದಾಗ ಸಹಸ್ರಾರು ಹುಡುಕಾಡಲು ಶುರು ಮಾಡುತ್ತಾರೆ. ಅಬ್ಬರದ ಸಂಗೀತದ ನಡುವೆ ತಕ್ಷಣ ಗಾಯಕನ ಆಗಮನ, ರೋಮಾಂಚನಗೊಂಡ ಪ್ರೇಕ್ಷಕರನ ಸಂಗೀತಕ್ಕೆ ಮಾರುಹೋದ ಪ್ರೇಕ್ಷಕನ ಪಾಡನ್ನು ಅದೇ ಗಾಯಕ ಹಿಂದಿ ಹಾಡಿನ ಮಧ್ಯೆ ಹಾಡಿದ `ಕುಡಿ ನೋಟವೇ ಮನಮೋಹಕ… ಹುಡುಕಾಟವೇ ಆಕರ್ಷಕ’ ಎನ್ನುವ ಕನ್ನಡ ಸಿನಿಮಾದ ಹಾಡು ಕಟ್ಟಿಕೊಟ್ಟಿತು.
ಆಳ್ವಾಸ್ ವಿರಾಸತ್ ನ ಕೊನೆಯ ದಿನ ಪ್ರೇಕ್ಷಕನ ಮನವನ್ನು ಸಂಗೀತದೊಂದಿಗೆ ಲೀನಗೊಳಿಸಿದ್ದು ಬಾಲಿವುಡ್ ನ ಹೆಸರಾಂತ ಗಾಯಕ ಶಾನ್. ತನ್ನ ಮಧುರ ಕಂಠಸಿರಿಯಲ್ಲಿ ಸಹಸ್ರಾರು ಪ್ರೇಕ್ಷಕರನ್ನು ಮಂತ್ರ ಮುಗ್ದಗೊಳಿಸಿದರು.
ಸಂಜೆ ಆರು ಗಂಟೆಗೆ ಶುರುವಾದ ಸಂಗೀತ ರಸಸಂಜೆಯಲ್ಲಿ ಮೊದಲ 30 ನಿಮಿಷ ಬಾಲಿವುಡ್ ನ ಗಾಯಕಿ ಪಾಯಲ್ ದೇವ್ ಬಾಲಿವುಡ್ ಹಾಡ್ಗಳಿಂದ ಸಂಗೀತ ರಸಿಕರನ್ನು ಸೆಳೆದರು. ಸುಮಾರು ಒಂದುವರೆ ಗಂಟೆ ಶಾನ್ ಏಕಾಂಗಿಯಾಗಿ ಹಾಡಿದ ಬಳಿಕ ಪಾಯಲ್-ಶಾನ್ ಜೋಡಿ ಡುಯೆಟ್ ಹಾಡುಗಳಿಗೆ ಸ್ವರವಾದರು.
ಎಂಚ ಉಲ್ಲರ್:
ಒಂದೆರಡು ಹಾಡು ಹಾಡಿದ ಶಾನ್ ತಕ್ಷಣ ಪ್ರೇಕ್ಷಕನ ಜೊತೆ ಮಾತಿಗಿಳಿಯುತ್ತಾರೆ-ಮೂಡುಬಿದಿರೆದಕುಲು ಎಂಚಾ ಉಲ್ಲರ್? ಖುಷಿಟ್ ಉಲ್ಲರ್(ಮೂಡುಬಿದಿರೆಯವರು ಹೇಗಿದ್ದೀರಾ?, ಖುಷಿಯಲಿ ಇದ್ದೀರಿ)ಎಂದು ತುಳುವಿನಲ್ಲಿ ಮಾತನಾಡಿತ್ತಾರೆ…ಇಲ್ಲಿ ಹೆಚ್ಚು ಇರೋದು ಕನ್ನಡದವರು ಅನ್ಸುತೆ ಎಂದು ಹುಡುಗಾಟ ಸಿನಿಮಾದ ಎನೋ ಒಂಥರಾ ಹಾಡಿಗೆ ಸ್ವರವಾದರು. ಮಂಗಳೂರಿಗೆ ಕೆಲವು ಸಲ ಬಂದಿದ್ದೇನೆ.ಆದ್ರೆ ಪ್ರತಿ ಬಾರಿ ಬರುವಾಗ ನಾನು ಮೊದಲ ಬಾರಿ ಬರುತ್ತಿದ್ದೇನೆ ಎನ್ನುವ ಅನುಭವಾಗುತ್ತದೆ. ಅಷ್ಟುಕ್ಕೂ ಆಳ್ವಾಸ್ ಗೆ ಮೊದಲ ಬಾರಿ ಬರುತ್ತಿದ್ದೇನೆ ಎಂದ ಶಾನ್, ತನ್ನ ಮೊದಮೊದಲ ಹಾಡು ಒ ಪೆಹಲೀ ಬಾರ್ ಹಾಡನ್ನು ಹಾಡಿ, ಪ್ರೇಕ್ಷಕ ಮತ್ತಷ್ಟು ಆಕರ್ಷಿಸಲು ಸಫಲರಾದರು. ಹಿಂದಿ, ಕನ್ನಡ, ಇಂಗ್ಲೀಷ್ ಹೀಗೆ ವಿವಿಧ ಭಾಷೆಯ ಹಾಡು ಶಾನ್ ಕಂಠಸಿರಿಯಲ್ಲಿ ಕೇಳಿಬಂದು ವಿರಾಸತ್ ನಲ್ಲಿ ಶೈನ್ ಆಗುವಂತೆ ಮಾಡಿತು.
ಇಪ್ಪತ್ತಮೂರನೇ ಆಳ್ವಾಸ್ ವಿರಾಸತ್ ಗೆ ವರ್ಣರಂಜಿತ ತೆರೆ
ಮೂಡುಬಿದಿರೆ: ಮೂರು ದಿನಗಳಲ್ಲಿ ನೂರಾರು ಕಲಾವಿದರಿಗೆ ವೇದಿಕೆಯಾಗಿ ಸಹಸ್ರಾರು ಪ್ರೇಕ್ಷಕರ ಮನೋಲ್ಲಾಸಕ್ಕೆ ಕಾರಣ, ಪ್ರೇರಣೆಯಾದ ಇಪ್ಪತ್ತಮೂರನೇ ಆಳ್ವಾಸ್ ವಿರಾಸತ್ ಭಾನುವಾರ ಗಾನ-ನೃತ್ಯ ವೈಭವದೊಂದಿಗೆ ವರ್ಣರಂಜಿತವಾಗಿ ತೆರೆ ಕಂಡಿದೆ.
ಮೂಡುಬಿದಿರೆ-ವಿದ್ಯಾಗಿರಿ ಸಮೀಪದ ಪುತ್ತಿಗೆಪದವಿನ ವಿವೇಕಾನಂದ ಆಳ್ವಾಸ್ ಆವರಣದಲ್ಲಿ ಮೂರು ಸಂಜೆ ನಾದ-ನೃತ್ಯಗಳದ್ದೇ ದರ್ಬಾರು. ಕಳೆದ ಎರಡು ದಶಕಗಳಲ್ಲಿ ಪ್ರೇಕ್ಷಕರನ ಮನಸ್ಸಿನಲ್ಲಿ ವಿಶಿಷ್ಟ ರೀತಿಯಲ್ಲಿ ಅಚ್ಚೊತ್ತಿದ್ದ ವಿರಾಸತ್ ಇನ್ನೆರಡು ವರ್ಷದಲ್ಲಿ ಬೆಳ್ಳಿ ಹಬ್ಬದತ್ತ ಸಾಗಲು ಇಪ್ಪತ್ತಮೂರನೇ ವಿರಾಸತ್ ಮುನ್ನುಡಿ ಬರೆಯಿತು.
ಕಲೆ, ನೃತ್ಯ, ಸಂಗೀತಗಳಿಂದ ಪ್ರದಾನವಾಗಿರುವ ಆಳ್ವಾಸ್ ವಿರಾಸತ್ ಮೂರು ದಿನಗಳಲ್ಲಿ ಒಟ್ಟಾರೆ 13 ಗಂಟೆಯ ಸಾಂಸ್ಕೃತಿಕ ವೈವಿಧ್ಯ, ಬರೋಬ್ಬರಿ 625 ರಷ್ಟು ಕಲಾವಿದರು ವೇದಿಕೆಯಲ್ಲಿ ಕಾಣಿಸಿಕೊಂಡರು.
ನವ ಉಲ್ಲಾಸ ನೀಡಿದ ಯುವ ವಿರಾಸತ್:
ಕಳೆದ 22 ವರ್ಷಗಳಲ್ಲಿ ರಾಷ್ಟ್ರಮಟ್ಟದ ನೃತ್ಯ ಕಲಾವಿದರು ಸಾಂಸ್ಕೃತಿಕ ವೈವಿದ್ಯಗಳನ್ನು ನಡೆಸಿಕೊಂಡು ಬಂದರೇ ಈ ಬಾರಿ ಆಳ್ವಾಸ್ ವಿದ್ಯಾರ್ಥಿ ಕಲಾವಿದರ ಅಪೂರ್ವ ನೃತ್ಯ ವೈಭವದಿಂದಲೇ ಗಮನಸೆಳೆಯಿತು. 600ಕ್ಕೂ ಅಧಿಕ ಆಳ್ವಾಸ್ ನ ಸಾಂಸ್ಕೃತಿಕ ತಂಡದ ಕಲಾವಿದರು ವಿವಿಧ ರಾಜ್ಯಗಳ ಅಪರೂಪದ ಕಲಾ ಪ್ರಕಾರಗಳಿಂದ ವೇದಿಕೆಯಲ್ಲಿ ವೃತ್ತಿಪರ ಕಲಾವಿದರಂತೆ ಕಾಣಿಸಿಕೊಂಡರು.
ತೆರೆ ಬೀಳುವ ಮೊದಲು…
ಬಾಲಿವುಡ್ ಗಾಯಕ ಶಾನ್ ಹಾಗೂ ಪಾಯಲ್ ದೇವ್ ಅವರ ಆರಂಭಗೊಂಡ ಸಂಗೀತ ರಸಸಂಜೆಯು ಸೇರಿದ ಜನಸ್ತೋಮವನ್ನು ಸಂಗೀತ ಲೋಕಕ್ಕೆ ಕರೆದೊಯ್ಯಿತು. ಎರಡನೇ ಕಾರ್ಯಕ್ರಮವಾಗಿ ಉಡುಪಿಯ ಲತಾಂಗಿ ಸ್ಕೂಲ್ ಆಫ್ ಮ್ಯೂಸಿಕ್ನ ಕು.ಗಾರ್ಗಿ, ಅರ್ಚನಾ ಮತ್ತು ಸಮನ್ವಿ ಅವರಿಂದ ಗಾನಾರ್ಚನ ಪ್ರಸ್ತುತಿಗೊಂಡಿತು.
ನಂತರ ಆಳ್ವಾಸ್ ವಿದ್ಯಾರ್ಥಿಗಳಿಂದ ನಡೆದ ನೃತ್ಯ ಸಂಭ್ರಮದಲ್ಲಿ ಚೆನ್ನೈನ ಶೀಲಾ ಉನ್ನಿಕೃಷ್ಣನ್ ನಿರ್ದೇಶನದಲ್ಲಿ 40 ವಿದ್ಯಾರ್ಥಿ ಕಲಾವಿದರಿಂದ ಭರತನಾಟ್ಯ-ಪುಷ್ಪಾಂಜಲಿ, ಪ್ರೀತಮ್ ಸಿಂಗ್ ನಿರ್ದೇಶನದಲ್ಲಿ 30 ವಿದ್ಯಾರ್ಥಿ ಕಲಾವಿದರಿಂದ ಮಣಿಪುರದ ಸ್ಟಿಕ್ ಡ್ಯಾನ್ಸ್ ಹಾಗೂ ಕೊಲಂಬೊ ಜಯಂಪತಿ ಭಂಡಾರ ನಿರ್ದೇಶನದಲ್ಲಿ 60 ವಿದ್ಯಾರ್ಥಿ ಕಲಾವಿದರಿಂದ ಶ್ರೀಲಂಕಾದ ಜನಪದ ನೃತ್ಯ ಅನಾವರಣಗೊಳ್ಳುವ ಮೂಲಕ ಮೂರು ದಿನಗಳ ಕಾಲ ನಡೆದ ಈ ವರ್ಷದ ಆಳ್ವಾಸ್ ವಿರಾಸತ್ಗೆ ತೆರೆ ಎಳೆಯಿತು.
ಆಳ್ವಾಸ್ ವರ್ಣ ವಿರಾಸತ್ ಸಮಾರೋಪ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ವಿರಾಸತ್ 2017 ರಾಷ್ಟ್ರೀಯ ಉತ್ಸವಕ್ಕೆ ಪೂರಕವಾಗಿ ಐದು ದಿನಗಳು ನಡೆದ ಆಳ್ವಾಸ್ ವರ್ಣ ವಿರಾಸತ್ 2017 ರಾಷ್ಟ್ರೀಯ ಚಿತ್ರಕಲಾ ಶಿಬಿರವು ಭಾನುವಾರ ಸಮಾರೋಪಗೊಂಡಿತು.
ನವದೆಹಲಿ ಲಲಿತಾ ಕಲಾ ಅಕಾಡೆಮಿಯ ಮುಖ್ಯಸ್ಥ ಚಿ.ಸು ಕೃಷ್ಣ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಕಲೆಮನಸ್ಸಿಗೆ ಮುದ ನೀಡುವುದು ಮಾತ್ರವಲ್ಲ ಸಮಾಜವನ್ನು ತಿದ್ದುವ, ಸತ್ಯವನ್ನು ಆಗ್ರಹಿಸುವ ಕೆಲಸವನ್ನು ಮಾಡುತ್ತಿದೆ. ಶಿಕ್ಷಣ, ಸಾಂಸ್ಕ್ರತಿಕ, ಕ್ರೀಡಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಆಳ್ವಾಸ್ ಚಿತ್ರಕಲೆಯಲ್ಲೂ ಮುಂಚೂಣಿ ಸಾಧಿಸಲಿ ಎಂದು ಹಾರೈಸಿದರು.
ಆಳ್ವಾಸ್ ವಿರಾಸತ್ 2017 ಪ್ರಶಸ್ತಿ ಪುರಸ್ಕೃತ ಹಿರಿಯ ಚಿತ್ರಕಲಾವಿದ ರೇವ ಶಂಕರ ಶರ್ಮ, ಗೋಪಾಲಕೃಷ್ಣ ಪೈ ಮುಖ್ಯ ಅತಿಥಿಯಾಗಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಸಲಹಾ ಸಮಿತಿಯ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು. ತಮಿಳುನಾಡಿನ ಕಲಾವಿದ ಗಂಗಥರನ್ ಶಿಬಿರದ ಕುರಿತು ಮಾತನಾಡಿದರು. ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಭಾಗವಹಿಸಿದ ರಾಷ್ಟ್ರಮಟ್ಟದ ಕಲಾವಿದರಾದ ಮುಂಬೈಯ ದೇವದಾಸ ಶೆಟ್ಟಿ ರಮೇಶ್ ಹರಿ ಪಜ್ಪಂಡೆ, ನಿಲೇಶ್ ಡಿ. ಭಾರ್ತಿ, ಅಮಿ ಪಟೇಲ್, ಚೆನ್ನೈಯ ಬಾಲಸುಬ್ರಮಣ್ಯಂ,ಕೇರಳದ ದ್ರುವರಾಜ್, ಗಣಪತಿ ಹೆಗ್ಡೆ ಬೆಂಗಳೂರು, ಚೆನ್ನೈಯ ಕನ್ನನ್, ಕಾಂತರಾಜು ಬೆಂಗಳೂರು, ಕಿಶೋರ್ ಗುಜರಾತ್, ಪಾಲಕ್ ದುಬೇ ಹೈದರಾಬಾದ್, ಪ್ರೀತಿ ಸಂಯುಕ್ತ, ರಮ್ಯಂಡುದಾಸ್ ತ್ರಿಪೂರ್, ಸಾಗರ್ ಮುಂಬೈ, ಮೈಸೂರಿನ ಸಚ್ಚಿದಾನಂದ, ಸಂಗ್ರಮ್ ಕುಮಾರ್ ಒಡಿಸ್ಸಾ, ಸ್ಮಿಜ ವಿಜಯನ್, ಶ್ರಿಜ ಪಲ್ಲಂ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು.
ರೇವ ಶಂಕರ್ ಶರ್ಮರಿಗೆ ಆಳ್ವಾಸ್ ವರ್ಣವಿರಾಸತ್ ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನೀಡುತ್ತಾ ಬರುತ್ತಿರುವ ಆಳ್ವಾಸ್ ವರ್ಣ ವಿರಾಸತ್ಪ್ರಶಸ್ತಿಯನ್ನು ಹಿರಿಯ ಕಲಾವಿದ ರಾಜಸ್ಥಾನದ ರೇವ ಶಂಕರ ಶರ್ಮ ಅವರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಭಾನುವಾರ ಸಂಜೆ ವಿರಾಸತ್ ವೇದಿಕೆಯಲ್ಲಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಕೆ.ಅಭಯಚಂದ್ರ ಜೈನ್, ಉದ್ಯಮಿ ಕೆ.ಶ್ರೀಪತಿ ಭಟ್, ಜಯಕರ ಆಳ್ವ, ಮೀನಾಕ್ಷಿ ಆಳ್ವ, ಹಿರಿಯ ಚಿತ್ರಕಲಾವಿದ ದೇವದಾಸ ಶೆಟ್ಟಿ, ಕಲಾವಿದರಾದ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ಪುರುಷೋತ್ತಮ ಅಡ್ವೆ, ಆಳ್ವಾಸ್ ನ ಟ್ರಸ್ಟಿ ವಿವೇಕ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.