ಬಂಟ್ವಾಳ : ಮಂಚಿ ಗ್ರಾಮದ ಕಡಂತಬೆಟ್ಟು ಎಂಬಲ್ಲಿನ ಕೆಂಪು ಕಲ್ಲಿನ ಕೋರೆಯಲ್ಲಿ ರವಿವಾರ ಸಂಜೆ ಹೂತ ಸ್ಥಿತಿಯಲ್ಲಿ ಪತ್ತೆಯಾದ ಶವದ ಕುರಿತಾದ ತನಿಖೆಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಚುರುಕುಗೊಳಿಸಿದ್ದು, ಮಂಗಳೂರು ಸಹಾಯಕ ಆಯುಕ್ತ ರೇಣುಕಾಪ್ರಸಾದ್ ಉಪಸ್ಥಿತಿಯಲ್ಲಿ ಸೋಮವಾರ ಶವಮಹಜರು ನಡೆಸಲಾಯಿತು.
ಕೊಳ್ನಾಡು ಮತ್ತು ಇರಾ ಗ್ರಾಮದ ಗಡಿ ಪ್ರದೇಶವಾದ ಕಡಂತಬೆಟ್ಟುವಿನ ಕೆಂಪು ಕಲ್ಲಿನ ಕೋರೆಯಲ್ಲಿ ಹೂತ ಸ್ಥಿತಿಯಲ್ಲಿದ್ದ ಮೃತದೇಹ ಭಾನುವಾರ ಸಂಜೆ ಪತ್ತೆಯಾಗಿತ್ತು. ಸ್ಥಳೀಯರು ನೀಡಿದ ಮಾಹಿತಿಯಂತೆ ಬಂಟ್ವಾಳ ಗ್ರಾಮಾಂತರ ಎಸ್ಸೈ ಎ.ಕೆ.ರಕ್ಷಿತ್ ಗೌಡ ಹಾಗೂ ಅವರ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಬಳಿಕ ಮೇಲಧಿಕಾರಿಗಳ ನಿರ್ದೇಶನದಂತೆ ಸೋಮವಾರ ಶವವನ್ನು ಮೇಲೆತ್ತಿ ತನಿಖೆ ಮುಂದುವರಿಸುವ ಬಗ್ಗೆ ತಿಳಿಸಿದ್ದರು. ಅದರಂತೆ ಸೋಮವಾರ ಮಂಗಳೂರಿನ ವಿಧಿವಿಜ್ಞಾನ ಇಲಾಖೆಯ ಡಾ.ಮಹಾಬಲ ಶೆಟ್ಟಿ ಯವರ ತಂಡ ಕಡಂತಬೆಟ್ಟುವಿಗೆ ಭೇಟಿ ನೀಡಿದ್ದು, ಬೆರಳಚ್ಚು ತಜ್ಞರ ತಂಡದ ಗೌರೀಶ್ ಮತ್ತವರ ತಂಡವೂ ಸ್ಥಳ ತನಿಖೆ ನಡೆಸಿದೆ.
9 ರಿಂದ 12 ತಿಂಗಳ ಹಿಂದಿನ ಘಟನೆ..!
ಮತದೇಹ ಸಂಪೂರ್ಣ ಕೊಳೆತು ಹೋದ ಸ್ಥಿತಿಯಲ್ಲಿದ್ದು ಕಳೆದ 9 ರಿಂದ 12 ತಿಂಗಳ ಅವಧಿಯಲ್ಲಿ ಈ ಮೃತ ದೇಹವನ್ನು ಹೂತಿರಬಹುದು. ಮೃತದೇಹ ಗಂಡಸಿನದ್ದಾಗಿದ್ದು, ಸುಮಾರು 55 ರಿಂದ 60 ವಯಸ್ಸು ಎಂದು ಅಂದಾಜಿಲಾಗಿದೆ. ದೇಹದ ನಾನಾಭಾಗಗಳ ಕುರುಹುಗಳನ್ನು ವಿಧಿವಿಜ್ಞಾನ ಇಲಾಖೆಯ ವೈದ್ಯರುಗಳು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದು, ಅದರ ಆಧಾರದಲ್ಲಿ ಮುಂದಿನ ತನಿಖೆ ನಡೆಸುವುದಾಗಿ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ ತಿಳಿಸಿದ್ದಾರೆ.
ಮೃತದೇಹ ಹೂತ ಸ್ಥಿತಿಯಲ್ಲಿ ಪತ್ತೆಯಾದ ವಿಚಾರ ತಿಳೀಯುತ್ತಿದ್ದಂತೆಯೇ ಭಾನುವಾರ ಸಂಜೆಯಿಂದಲೇ ಸ್ಥಳದಲ್ಲಿ ಭಾರೀ ಸಂಖ್ಯೆಯ ಜನಸ್ತೋಮ ನೆರೆದಿತ್ತು. ಸೋಮವಾರವೂ ವಿಧಿವಿಜ್ಞಾನ ಇಲಾಖೆಯ ಅಧಿಕಾರಿಗಳ ಭೇಟಿ ವೇಳೆಯೂ ನೂರಾರು ಗ್ರಾಮಸ್ಥರು ನೆರೆದಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ವೇದಮೂರ್ತಿ, ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್, ಅಮಾನುಲ್ಲಾ, ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ , ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತಿರರು ಉಪಸ್ಥಿತರಿದ್ದರು.
ಸಂಬಂಧಿಸಿದ ಸುದ್ದಿ: