ಬೆಳ್ತಂಗಡಿ: ಒಂದೆಡೆ ದುರ್ನಾತ ಬೀರುವ ಚರಂಡಿಯಿಂದಾಗಿ ಮೂಗು ಮುಚ್ಚಿಕೊಂಡೇ ಇರುವ ಸ್ಥಿತಿ. ಮತ್ತೊಂದೆಡೆ ಕಸದ ರಾಶಿ. ಮಗದೊಂದೆಡೆ ಇವತ್ತೋ ನಾಳೆಯೋ ಬೀಳುವ ಹಂತದಲ್ಲಿರುವ ಗೋಡೆಗಳು. ಇದರ ಮಧ್ಯೆ ಮುರುಕಲು ಮನೆಯಲ್ಲಿ ಕೂಲಿನಾಲಿ ಮಾಡಿಕೊಂಡು ಬದುಕುತ್ತಿರುವ ಪುಟ್ಟದೊಂದು ಸಂಸಾರ.
ಈ ರೀತಿಯ ದಯನೀಯ ಸ್ಥಿತಿ ಇರುವುದು ವಿದ್ಯಾ ಕೇಂದ್ರ, ವ್ಯಾಪಾರಿ ಕೇಂದ್ರವೆನಿಸಿರುವ ಉಜಿರೆಯ ಹೃದಯಭಾಗದಲ್ಲಿ. ಉಜಿರೆ ಪೇಟೆ ಸನಿಹದ ಬ್ರದರ್ಸ್ ಕಾಂಪ್ಲೆಕ್ಸ್ ಪಕ್ಕದಲ್ಲಿ ಸುಮಾರು ಮೂವತ್ತು ವರ್ಷದಿಂದ ಕೊಟ್ಟಿಗೆಯಂತಹ ಮನೆಯಲ್ಲಿ ಮಧ್ಯವಯಸ್ಕ ಮಹಿಳೆ ಪೇಮ ತನ್ನ ಸಹೋದರನ ಮಕ್ಕಳೊಂದಿಗೆ ಯಾವುದೇ ಸೌಲಭ್ಯಗಳಿಲ್ಲದೆ ದಿನದೂಡುತ್ತಿರುವುದು ಉಜಿರೆಯ ಆಡಳಿತದ, ಸ್ವಯಂಸೇವಾ ಸಂಸ್ಥೆಗಳ ಗಮನಕ್ಕೆ ಬಂದಿಲ್ಲದಿರುವುದು ಸೋಜಿಗವೇ ಸರಿ.
ಕಮ್ಮಾರ ವೃತ್ತಿಯಲ್ಲಿದ್ದ ಪ್ರೇಮಾ ಅವರ ಪತಿ ಕೂಸಪ್ಪ ಆಚಾರಿ ಹಲವಾರು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಪ್ರೇಮಾ ಅವರ ಸಹೋದರ ರಾಘವ ಜೊತೆಗಿದ್ದರೂ ಸುಮಾರು 6 ವರ್ಷಗಳ ಹಿಂದೇ ಇವರೂ ಇಹಲೋಕ ತ್ಯಜಿಸಿದ್ದಾರೆ. ಇತ್ತ ರಾಘವ ಅವರಿಗೆ 3 ಮಕ್ಕಳು. ಪತ್ನಿ ಮೂವರು ಮಕ್ಕಳಲ್ಲಿ ಓರ್ವ ಹೆಣ್ಣು ಮಗುವಿನೊಂದಿಗೆ ಉಜಿರೆ ಬಿಟ್ಟು ತೆರಳಿದ್ದಾರೆ. ಇನ್ನಿಬ್ಬರು ಮಕ್ಕಳಾದ ಸಂತೋಷ ಹಾಗೂ ವೀಣಾ ಪ್ರೇಮಾ ಅವರೊಟ್ಟಿಗೆ ಇದ್ದಾರೆ. ಮಕ್ಕಳ ತಾಯಿ ಈಗ ಎಲ್ಲಿದ್ದಾರೆ ? ಹೇಗಿದ್ದಾರೆ ? ಎಂಬುದು ಯಾರಿಗೂ ತಿಳಿಯದು. ಮಕ್ಕಳಿಬ್ಬರೂ ಅತ್ತೆಯ ಪೋಷಣೆಯೊಂದಿಗಿದ್ದು ಸನಿಹದ ಜನಾರ್ದನ ಶಾಲೆಯಲ್ಲಿ ಎಂಟು ಹಾಗೂ ಏಳನೇ ತರಗತಿಯಲ್ಲಿ ಓದುತ್ತಿದ್ದಾರೆ.
ಪ್ರೇಮಾ ಹಾಗೂ ಮಕ್ಕಳು ಇರುವ ಸ್ಥಳ ಇಂದಿನ ವ್ಯವಸ್ಥೆಯಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವಂತಹದು. ಈಗಾಗಲೇ ಒಂದು ಬದಿಯಿಂದ ಒತ್ತುವರಿಯಾಗಿದೆ. ಉಜಿರೆಯ ಪೇಟೆಯಿಂದ ಇಲ್ಲಿನ ಮನೆ ಇರುವ ಜಾಗಕ್ಕೆ ಬಂದಾಗ ಯಾವುದೋ ಪುರಾತನ ಜಾಗಕ್ಕೆ ಬಂದಂತೆ ಭಾಸವಾಗುತ್ತದೆ. ಇಲ್ಲಿನ ಪರಿಸರವನ್ನು ಗಮನಿಸಿದಾಗ ಒಂದೆಡೆ ಉಜಿರೆ ಗ್ರಾ.ಪಂ. ನಿರ್ಮಿಸಿರುವ ಚರಂಡಿಯಿದ್ದು ಗಬ್ಬೆದ್ದು ನಾರುತ್ತಿರುವ ಇದು ತೆರೆದ ಸ್ಥಿತಿಯಲ್ಲಿ ಇದೆ. ಪಾಪ ಮಕ್ಕಳು ಮೂಗು ಮುಚ್ಚಿಕೊಂಡೇ ದಿನದೂಡಬೇಕಾದ ಸ್ಥಿತಿ. ಸೂಕ್ತ ಶೌಚಾಲಯವಿಲ್ಲದೆ, ಸೀರೆಯನ್ನು ಅಡ್ಡಗಟ್ಟಿ ಪ್ರಾತವರ್ಧಿಗಳನ್ನು ಪೂರೈಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಇವರದು. ವಿಡಂಬನೆಯೇನೆಂದರೆ ಅಕ್ಕಪಕ್ಕದವರು ಇವರ ಮನೆಯಂಗಳಕ್ಕೇ ಕಸ ಸುರಿಯುವುದು. ನಗರ ಪ್ರದೇಶದವರಿಗೆ ಸ್ವಚ್ಛತೆಯ ಅರಿವು ಇದೆ ಎಂದು ತಿಳಿದುಕೊಂಡರೆ ಅದು ನಮ್ಮ ಭ್ರಮೆ ಎಂದು ಇಲ್ಲಿ ನೋಡಿದರೆ ಗೊತ್ತಾಗುತ್ತದೆ. ಪ್ರೇಮಾ ಶ್ರೀಮಂತರ ಮನೆಯಲ್ಲಿ ಮನೆಗೆಲಸ ಮಾಡಿಕೊಂಡು ಮಕ್ಕಳ ಪೋಷಣೆ ಮಾಡುತ್ತಿದ್ದಾರೆ.
ಈ ಬಡಕುಟುಂಬವನ್ನು ಎಬ್ಬಿಸಲು ಈಗಾಗಲೇ ವಿಫಲ ಪ್ರಯತ್ನಗಳು ನಡೆದಿದ್ದಾವೆ. ಸ್ವಜಾತಿ ಬಾಂಧವರೇ ಎಬ್ಬಿಸಲು ಪ್ರಯತ್ನಪಟ್ಟಿದ್ದೂ ಉಂಟಂತೆ. ಆಗಲೋ ಈಗಲೋ ಬಿದ್ದು ಹೋಗುವ ಸ್ಥಿತಿಯಲ್ಲಿದ್ದ ಪ್ರೇಮಾ ಅವರ ಮನೆಯ ಗೋಡೆಯ ಸ್ಥಿತಿಯನ್ನು ಕಂಡ ಕರ್ನಾಟಕ ಕಾರ್ಮಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಉಜಿರೆಯ ಲಕ್ಷ್ಮಣ ಗೌಡ ಅವರು ಸುಮಾರು ಇಪ್ಪತ್ತು ಸಾವಿರ ವೆಚ್ಚದಲ್ಲಿ ಮನೆಯ ಸುತ್ತ ಹಾಗೂ ಶೌಚಾಲಯಕ್ಕೆ ಸಿಮೆಂಟ್ ಇಟ್ಟಿಗೆಯಿಂದ ಭದ್ರವಾದ ಗೋಡೆಯನ್ನು ಕಟ್ಟಿಸಿಕೊಟ್ಟಿದ್ದಾರೆ. ಅಲ್ಲದೆ ಅವರು ಕುಟುಂಬದ ದುಃಸ್ಥಿತಿಯ ಬಗ್ಗೆ ಪಂ.ನ ಗಮನಕ್ಕೂ ತಂದಿದ್ದಾರೆ.
ಬಡವರಿಗಾಗಿ ಕೇಂದ್ರ, ರಾಜ್ಯ ಸರಕಾರಗಳು ಅನೇಕ ಯೋಜನೆಗಳನ್ನು ತಂದಿದ್ದರೂ ಅದು ಕಟ್ಟಕಡೆಯ ಕುಟುಂಬಕ್ಕೆ ತಲುಪುವುದಿಲ್ಲ ಎಂಬುದಕ್ಕೆ ಉಜಿರೆಯಲ್ಲಿನ ಈ ಕುಟುಂಬ ತಾಜಾ ಉದಾಹರಣೆಯಾಗಿದೆ. ಇನ್ನು ಉಜಿರೆ ಹಾಗೂ ಆಸುಪಾಸಿನಲ್ಲಿ ಹಲವಾರು ಸಂಘ ಸಂಸ್ಥೆಗಳಿದ್ದರೂ ಪರದಾಟ ನಡೆಸುತ್ತಿರುವ ಈ ಕುಟುಂಬ ಅವರ ಕಣ್ಣಿಗೂ ಬೀಳದಿರುವುದು ಸೋಜಿಗದ ಸಂಗತಿ. ಇನ್ನಾದರೂ ಉಜಿರೆ ಗ್ರಾ.ಪಂ.ನವರು ಇತ್ತಕಡೆ ಪಾದ ಬೆಳೆಸಿ, ಸ್ಥಿತಿಗತಿ ಗಮನಿಸಿ ಒಂದೋ ಇಲ್ಲಿಯೇ ಸಧೃಢ ಮನೆಕಟ್ಟಿಕೊಡುವ ಮತ್ತು ಅವರಿಗೆ ಸಿಗುವಂತಹ ಇನ್ನಿತರ ಸೌಲಭ್ಯ ನೀಡುವತ್ತ ಗಮನ ಹರಿಸಬೇಕು. ಅಥವಾ ಸಮಸ್ಯೆಗಳೇನಾದರೂ ಇದ್ದಲ್ಲಿ ಅವರಿಗೆ ಬೇರೆ ಕಡೆ ನಿವೇಶನ ನೀಡಿ ಮನೆ ಕಟ್ಟಿಕೊಟ್ಟು ಸ್ಥಳಾಂತರಿಸುವ ಯೋಜನೆಯನ್ನು ಹಾಕಿ ಕೊಂಡಲ್ಲಿ ಕುಟುಂಬ ನೆಮ್ಮದಿಯಿಂದ ಜೀವನ ಮಾಡಬಹುದಾಗಿದೆ.
ಕುಟುಂಬದ ದುಸ್ಥಿತಿ ಕಂಡು ಕರ್ನಾಟಕ ಕಾರ್ಮಿಕ ಹಿತರಕ್ಷಣಾ ವೇದಿಕೆಯ ಮೂಲಕ ಕಿಂಚಿತ್ ಸಹಾಯ ಮಾಡಿದ್ದೇವೆ. ಇನ್ನಾದರೂ ಬಡ ಕುಟುಂಬದ ಸಂಕಟಕ್ಕೆ ಉಜಿರೆಯ ಗ್ರಾಮ ಪಂಚಾಯತ್ ಆದಷ್ಟು ಬೇಗ ಸ್ಪಂದಿಸುವುದು ಅಗತ್ಯ – ಲಕ್ಷ್ಮಣ ಗೌಡ