ಸುಳ್ಯ: ಕ್ಯಾಂಪ್ಕೋ ಅಡಕೆ ಖರೀದಿಸುವಾಗ ಮಿತಿಯನ್ನು ವಿಧಿಸುತ್ತಿದ್ದು, ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ ಎಂದು ಕೆಲವು ರಾಜಕೀಯ ವ್ಯಕ್ತಿಗಳು ಮಾಡುತ್ತಿರುವ ಆರೋಪ ರಾಜಕೀಯ ಪ್ರೇರಿತ ಮತ್ತು ಕಪೋಲ ಕಲ್ಪಿತ ಎಂದು ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ತಿಳಿಸಿದ್ದಾರೆ.
ನವಂಬರ್ 10 ರ ನಂತರ ಕ್ರಮವಾಗಿ ಕ್ಯಾಂಪ್ಕೋ ಸಂಸ್ಥೆಯು ರೈತರಿಂದ ತಿಂಗಳಿಗೆ ನಾಲ್ಕು ಕ್ವಿಂಟಾಲ್ ನಂತರ ಒಮ್ಮೆಗೆ ಐದು ಕ್ವಿಂಟಾಲ್ ಮತ್ತು ಜನವರಿ 12 ರಿಂದ ಈ ಮೊದಲಿನಂತೆ ಯಾವುದೇ ಮಿತಿ ಇಲ್ಲದೆ ಎಷ್ಟೇ ಮೌಲ್ಯದ ಅಡಿಕೆ ತಂದರೂ ರೈತರಿಂದ ಖರೀದಿಸುವಂತೆ ಆಡಳಿತ ಮಂಡಳಿಯು ನಿರ್ಧರಿಸಿದ್ದು ಅದರಂತೆ ಕ್ಯಾಂಪ್ಕೋದ ಎಲ್ಲಾ ನೇರ ಖರೀದಿ ಶಾಖೆ ಮತ್ತು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳಲ್ಲಿ ಖರೀದಿಸಲಾಗುತ್ತಿದೆ. ಕ್ಯಾಂಪ್ಕೋ ಶಾಖೆಯಿಂದ ಖರೀದಿಸಿದ ಅಡಿಕೆಯ ಮೊತ್ತವನ್ನು ಅದೇ ದಿನ ಚೆಕ್ ಮುಖಾಂತರ ವಿಲೇವಾರಿ ಮಾಡಲಾಗುತ್ತದೆ. ಅದಲ್ಲದೆ ಅಡಿಕೆ ಮಾರಾಟ ಮಾಡುವ ಕೃಷಿಕರಿಂದ ಶೇ.ಒಂದರಷ್ಟು ಕಡಿತ ಮಾಡಲಾಗುತ್ತದೆ ಎಂಬ ಆರೋಪ ಸಂಪೂರ್ಣ ಸತ್ಯಕ್ಕೆ ದೂರವಾಗಿರುತ್ತದೆ.
ಈಗಾಗಲೇ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿ ರಾಜ್ಯ ಸರ್ಕಾರದ ಒಡಂಬಡಿಕೆಯನ್ನು ಕೇಳಿರುತ್ತದೆ. ಅದಕ್ಕೆ ಈವರೆಗೆ ರಾಜ್ಯ ಸರ್ಕಾರವು ಯಾವುದೇ ಸ್ಪಂದನೆಯನ್ನು ನೀಡಿರುವುದಿಲ್ಲ. ಕೆಲವು ರಾಜಕಾರಣಿಗಳು ಪ್ರಚಾರಕ್ಕಾಗಿ ಮಾಡುತ್ತಿರುವ ಈ ಹಾದಿ ತಪ್ಪಿಸುವ ಆಪಾದನೆಯು ರೈತರಿಗೆ ಸಹಕಾರಿ ಸಂಸ್ಥೆಯ ಮೇಲಿರುವ ನಂಬಿಕೆಗೆ ಹೊಡೆತ ಕೊಟ್ಟಂತಾಗಿದೆ.
ಇಷ್ಟೆಲ್ಲ ಸುಳ್ಳು ಆರೋಪವನ್ನು ಹೊರಿಸುವವರು ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡುವುದರತ್ತ ಗಮನಹರಿಸುವುದು ಸೂಕ್ತ. ದೇಶದ ಆರ್ಥಿಕ ವ್ಯವಸ್ಥೆಯನ್ನು ಶಿಸ್ತು ಬದ್ದವಾಗಿ ಮುನ್ನಡೆಸಿಕೊಂಡು ಹೋಗುವುದಕ್ಕೆ ಪೂರಕವಾಗಿ ಪ್ರದಾನ ಮಂತ್ರಿ ನರೇಂದ್ರ ಮೋದಿ ಜಾರಿಗೆ ತಂದಿರು ನೋಟು ಅಪಮೌಲ್ಯ ಗೊಳಿಸಿದ ಕ್ರಮವನ್ನು ಇಡೀ ದೇಶ ಒಕ್ಕೊರಲಿನಿಂದ ಸ್ವಾಗತಿಸಿ ಬೆಂಬಲವನ್ನು ಸೂಚಿಸಿರುವುದು ದೇಶದ ಜನತೆಗೆ ಗೊತ್ತಿರುವ ವಿಷಯ. ಅದರಲ್ಲೂ ವಿಶೇಷವಾಗಿ ರೈತರು ಈ ಕ್ರಮವನ್ನು ಅತ್ಯಂತ ಉತ್ತಮ ಕ್ರಮವೆಂದು ಸ್ವಾಗತಿಸಿರುತ್ತಾರೆ ಎಂದು ಕೃಷ್ಣಪ್ರಸಾದ್ ಮಡ್ತಿಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.