ಕಾರ್ಕಳ: ಸಂತಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ 2017 ಜನವರಿ 22, 23, 24, 25, ಹಾಗೂ 26 ರಂದು ಜರಗಲಿರುವುದು ಈ ಬಗ್ಗೆ ಎಲ್ಲಾ ಪೂರ್ವಭಾವಿ ಸಿದ್ದತೆಗಳು ನಡೆದಿದ್ದು, ಬಸಿಲಿಕದ ವತಿಯಿಂದ ವಾರ್ಷಿಕ ಮಹೋತ್ಸವದ ಆಚರಣೆಗೆ ಸನ್ನದ್ದಗೊಂಡಿದ್ದು, ಶ್ರೀಕ್ಷೇತ್ರಕ್ಕೆ ಆಗಮಿಸುತ್ತಿರುವ ಯಾತ್ರಿಕರ, ಭಕ್ತಾದಿಗಳ ಭೇಟಿಯು ಆದ್ಯಾತ್ಮಿಕ ನೆಮ್ಮದಿ, ಮಾನಸಿಕ ಸಂತೃಪ್ತಿ ಹಾಗೂ ಸ್ಮರಣೀಯ ಎಂದು ಬಸಿಲಿಕಾ ನಿರ್ದೇಶಕ ವಂದನೀಯ ಜಾರ್ಜ್ ಡಿಸೋಜಾ ಹೇಳಿದರು.
ಬಸಿಲಿಕದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜನವರಿ 22 ರ ಆದಿತ್ಯವಾರ ಬೆಳಿಗ್ಗೆ 7.30 ಕ್ಕೆ ದಿವ್ಯ ಬಲಿಪೂಜೆಯೊಂದಿಗೆ ಭ್ರಾತೃತ್ವದ ಭಾನುವಾರವನ್ನು ಆಚರಿಸಿ ದಿವ್ಯ ಪರಮ ಪ್ರಸಾದದ ಮೆರವಣಿಗೆಯೊಂದಿಗೆ ಈ ವರ್ಷದ ವಾರ್ಷಿಕ ಮಹೋತ್ಸವವು ಪ್ರಾರಂಭಗೊಳ್ಳುವುದು. ಅಪರಾಹ್ನ 3.00 ಹಾಗೂ 5.00 ಗಂಟೆಗೆ ಮಕ್ಕಳಿಗಾಗಿ ವಿಶೇಷ ಬಲಿಪೂಜೆ ಅರ್ಪಿಸಲಾಗುವುದು.
ಜನವರಿ 23ರಂದು ಸೋಮವಾರ ಬೆಳಿಗ್ಗೆ 10.00 ಗಂಟೆಗೆ ಮಕ್ಕಳಿಗಾಗಿ ವಿಶೇಷ ದಿವ್ಯ ಬಲಿಪೂಜೆ ಹಾಗೂ ಅಪರಾಹ್ನ 3.30 ಗಂಟೆಗೆ ಅಸ್ವಸ್ಥರಿಗಾಗಿ ವಿಶೇಷ ಬಲಿಪೂಜೆ ಅರ್ಪಿಸಲಾಗುವುದು. ಅಸ್ವಸ್ಥರು ಅದೇ ದಿವಸದ ಬಲಿಪೂಜೆಗೆ ಬಂದು ನಮ್ಮೊಂದಿಗೆ ಸಹಕರಿಸಬೇಕಾಗಿ ವಿನಂತಿಸುತ್ತೇವೆ. ವಾರ್ಷಿಕ ಮಹೋತ್ಸವದ ದಿನಗಳಲ್ಲಿ 31 ದಿವ್ಯ ಬಲಿ ಪೂಜೆಗಳನ್ನು ಕೊಂಕಣಿ ಹಾಗೂ 12 ದಿವ್ಯ ಬಲಿ ಪೂಜೆಗಳನ್ನು ಕನ್ನಡ ಭಾಷೆಗಳಲ್ಲಿ ಅರ್ಪಿಸಲಾಗುವುದು. ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಬೆಂಗಳೂರಿನ ಮಹಾ ಧರ್ಮಾಧ್ಯಕ್ಷರು, ಬಳ್ಳಾರಿಯ ಧರ್ಮಾಧ್ಯಕ್ಷರು, ಬೆಳ್ತಂಗಡಿಯ ಧರ್ಮಧ್ಯಕ್ಷರು, ಮಂಗಳೂರಿನ ಧರ್ಮಾಧ್ಯಕ್ಷರು ಹಾಗೂ ನಮ್ಮ ಉಡುಪಿ ಧರ್ಮಾಧ್ಯಕ್ಷರು ಇಲ್ಲಿಗೆ ಆಗಮಿಸಿ ಬಲಿಪೂಜೆಯನ್ನು ಅರ್ಪಿಸುವರು ಎಂದರು.
95 ಸಿಸಿ ಕ್ಯಾಮರಾ: ಯಾತ್ರಿಕರ ಸುರಕ್ಷತೆಗಾಗಿ ಹಳೆಯ ಮತ್ತು ಹೊಸ ಇಗರ್ಜಿಗಳ ಒಳಗಡೆ, ಬಸಿಲಿಕದ ವಠಾರದಲ್ಲಿ ಈಗಾಗಲೇ 64 ಸಿ.ಸಿ ಕ್ಯಾಮರಗಳನ್ನು ಅಳವಡಿಸಿದ್ದು, ಜಾತ್ರಾ ಪರಿಸರದಲ್ಲಿ ಇನ್ನೂ 32 ಸಿ.ಸಿ ಕ್ಯಾಮರಾಗಳನ್ನು ಆಯಕಟ್ಟಿನ ಸ್ಥಳದಲ್ಲಿ ಅಳವಡಿಸಲಾಗುವುದು.
ಬಸಿಲಿಕದ ಮೂಡುದಿಕ್ಕಿನಲ್ಲಿರುವ ಮಣ್ಣನ್ನು ತೆಗೆದು ಸುಮಾರು ಆರುವತ್ತು ಸಾವಿರ ಚ.ಅಡಿಗಳಷ್ಟು ಸ್ಥಳವಕಾಶವನ್ನು ಕಳೆದ ವರುಷ ಹೆಚ್ಚಿಸಲಾಗಿದ್ದು, ಇದರಿಂದ ಹರಕೆ ಹಾಕುವಲ್ಲಿ ಮತ್ತು ಮೊಂಬತ್ತಿ ಉರಿಸುವಲ್ಲಿ ಭಕ್ತರಿಗೆ ಆಗುವ ಅಡಚಣೆ ಹಾಗೂ ತೊಂದರೆಯನ್ನು ನಿವಾರಿಸಿ ಹೆಚ್ಚಿನ ಅನುಕೂಲತೆಗಳನ್ನು ಕಲ್ಪಿಸಲಾಗಿದೆ.
ಕಥೋಲಿಕ್ ಕ್ರೈಸ್ತರಿಗೆ ದೇವಾಲಯದ ಪಶ್ಚಿಮ ಭಾಗದಲ್ಲಿ ಅಂದರೆ ‘ಪವಾಡ ಮೂರ್ತಿ’ ಪ್ರತಿಷ್ಠಾಪಿಸಿದ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಪಾಪನಿವೇದನೆಗೆ ವ್ಯವಸ್ಥೆ ಮಾಡಲಾಗಿದೆ. ಹಳೆದೇವಾಲಯದ ಒಳಗೆ ಪ್ರಾರ್ಥನೆಗಾಗಿ ಮಾತ್ರ ಅವಕಾಶ ನೀಡಲಾಗಿದೆ.
ಭಕ್ತರು ಶ್ರೀಕ್ಷೇತ್ರಕ್ಕೆ ಹೇಳಿಕೊಂಡ ಹಣದ ರೂಪದ ಹರಕೆ, ವಸ್ತು ರೂಪದ ಹರಕೆ, ಮೊಂಬತ್ತಿಗಳ ಹರಕೆಗಳನ್ನು ಹಳೆ ದೇವಾಲಯದ ಪೂರ್ವಭಾಗದಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ತಮಗೆ ಪವಿತ್ರ ಜಲಪ್ರಸಾದ ಮತ್ತು ಪುಪ್ಪ ಪ್ರಸಾದವನ್ನು ಅಲ್ಲಿಯೇ ನೀಡಲಾಗುವುದು.
ಪವಾಡ ಪುಷ್ಕರಿಣಿ ಸಂದರ್ಶಿಸಲು ಪುಷ್ಕರಿಣಿಗೆ ಇಳಿಯಲು ಹಾಗೂ ಮೇಲೆ ಬರಲು ಎಲ್ಲಾ ಭಕ್ತರಿಗೆ ಅನುಕೂಲವಾಗುವಂತೆ, ಪುಷ್ಕರಿಣಿಯ ಹೊರ ವಿನ್ಯಾಸ ಮರುನಿರ್ಮಿಸಲಾಗಿದೆ. ಭಕ್ತಾಧಿಗಳಿಗೆ ಕುಡಿಯಲು ಶುದ್ದ ಹಾಗೂ ತಂಪು ನೀರಿನ ವ್ಯವಸ್ಥೆಯನ್ನು ಬಸಿಲಿಕದ ವಠಾರದಲ್ಲಿ ಐದು ಸ್ಥಳದಲ್ಲಿ ಮಾಡಲಾಗಿದೆ.
ಶಾರೀರಿಕ ಅಗತ್ಯತೆ ಪೂರೈಸಲು ದೇವಾಲಯದ ಮುಂಭಾಗದ ದ್ವಾರದ ಮೂಲಕ ಒಳಬಂದಾಗ, ಪೋಲಿಸ್ ಸೇವಾ ಕೇಂದ್ರದ ಪಕ್ಕದಲ್ಲಿ ಸುಮಾರು 40 ರಷ್ಟು ಆಧುನಿಕ ಸವಲತ್ತುಗಳುಳ್ಳ ಶೌಚಾಲಯಗಳನ್ನು, ಗುರುನಿವಾಸದ ಬಲ ಬದಿಯಲ್ಲಿ 20 ಶೌಚಾಲಯಗಳನ್ನು ಈ ವರ್ಷ ನಿರ್ಮಿಸಲಾಗಿದೆ. ಅಂಗವಿಕಲರಿಗಾಗಿ ಪ್ರತ್ಯೇಕ ಹಾಗೂ ಅಶಕ್ತ ಹಿರಿಯ ನಾಗರಿಕರಿಗಾಗಿ ಕೊಮೊಡ್ ಮಾದರಿಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ಕಾನೂನು ಮತ್ತು ಶಿಸ್ತು ಪಾಲನೆಗಾಗಿ ಗರಿಷ್ಟ ಸಂಖ್ಯೆಯ ಪೋಲಿಸ್ ಅಧಿಕಾರಿ ಹಾಗೂ ಪೋಲಿಸ್ ಸಿಬಂಧಿ ಕರ್ತವ್ಯ ನಿರ್ವಹಿಸಲಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಹಾಗೂ ರಿಜರ್ವ್ ಪೋಲಿಸ್ ತುಕಡಿಗಳಿದ್ದು ಯಾತ್ರಾರ್ಥಿಗಳ ಸುರಕ್ಷಿತೆಯ ಹೊಣೆ ನಿರ್ವಹಿಸಲಿರುವರು.
ಯಾತ್ರಾರ್ಥಿಗಳ ವಾಹನಗಳ ನಿಲುಗಡೆಯ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ನುರಿತ ಗೃಹರಕ್ಷದಳ ಹಾಗೂ ಇತರ ಸಿಬಂಧಿಗಳು ನಿರ್ವಹಿಸಲಿರುವರು. ಕಾಬೆಟ್ಟು ದ್ವಾರದ ಮೂಲಕ ಬರುವ ವಾಹನಗಳ ದಟ್ಟಣೆಯಿಂದ ಭಕ್ತಾಧಿಗಳಿಗೆ ಆಗುವ ಅಡಚಣೆಯನ್ನುನಿವಾರಿಸಲು, ಪುಲ್ಕೇರಿಯಿಂದ ದೂಪದಕಟ್ಟೆ ಮೂಲಕ ವಾಹನಗಳನ್ನು ಕಳುಹಿಸಿ ಬಸಿಲಿಕದ ಅತೀ ಸಮೀಪ ಬರುವಂತೆ ಮಾಡಿ ವಾಹನಗಳ ನಿಲುಗಡೆಗೆ 5 ಸ್ಥಳಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಹಾಗೂ ದ್ವಿಚಕ್ರ ವಾಹನಗಳಿಗೆ ಒಂದು ಕಡೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.
ಬಸಿಲಕಕ್ಕೆ ಆಗಮಿಸುವ ಯಾತ್ರಾರ್ಥಿಗಳ ವಾಹನಗಳ ನಿಲುಗಡೆಗೆ ಹೆಚ್ಚಿನ ಸ್ಥಳವಕಾಶ ಒದಗಿಸಲಾಗಿದೆ. ದೂಪದಕಟ್ಟೆಯಿಂದ ಬರುವವರಿಗೆ, ದೂಪದಕಟ್ಟೆ ದ್ವಾರ ಪ್ರವೇಶಿಸುವಾಗ ಎಡಬದಿಗೆ ವಿಸ್ತಾರವಾದ ನಿಲುಗಡೆ ಸ್ಥಳ, ಮುಂದಕ್ಕೆ ಗಾರ್ಡನ್ ಹೌಸ್ ಗಿಂತ ಮುಂಚಿನ ತಿರುವಿನ ಬಲ ಹಾಗೂ ಎಡಬದಿಯಲ್ಲಿ 2 ಕಡೆ ಗಾರ್ಡನ್ ಹೌಸ್ ದಾಟಿದ ನಂತರ ಎಡಬದಿಯಲ್ಲಿ ಎರಡು ಕಡೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಕಾಬೆಟ್ಟು ಕಡೆಯಿಂದ ಬರುವ ವಾಹನಗಳಿಗೆ ಪ್ರಸಾದ್ ಟೈಲರ್ ಜಂಕ್ಷನ್ ಹತ್ತಿರ ಎಡಬದಿ, ಹೈಸ್ಕೂಲು ಆಟದ ಮೈದಾನ ಹಾಗೂ ಚೇತನಹಳ್ಳಿ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಅದೂ ಅಲ್ಲದೆ ಪರ್ಪಲೆ ಗುಡ್ಡೆಯಲ್ಲಿಯೂ ಈ ವರುಷ ಹೊಸದಾಗಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ಮಾಲಕರು ಮತ್ತು ಚಾಲಕರು ಸಹಕರಿಸಬೇಕಾಗಿ ವಿನಂತಿ.
ವೆಹಿಕಲ್ ಪಾಸ್ ಹೊಂದಿದ ವಾಹನ ಚಾಲಕರು ತಮ್ಮ ವಾಹನವನ್ನು ಕಾಬೆಟ್ಟು-ಅತ್ತೂರು ಕ್ವಾನ್ವೆಂಟ್ ಮಾರ್ಗವಾಗಿಯೇ ಬರಲು ವಿನಂತಿಸಲಾಗಿದೆ. ವೆಹಿಕಲ್ ಪಾಸ್ ಹೊಂದಿದ ಎಲ್ಲಾ ವಾಹನಗಳಿಗೆ ದೇವಾಲಯದ ಮೂಡು ದಿಕ್ಕಿನಲ್ಲಿರುವ ಗುಡ್ಡದಲ್ಲಿ ಹೊಸದಾಗಿ ನಿರ್ಮಿಸಿದ ಮೈದಾನಿನಲ್ಲಿ ಪಾರ್ಕಿಂಕ್ ವ್ಯವಸ್ಥೆ ಮಾಡಲಾಗಿದೆ.
ವೆಹಿಕಲ್ ಪಾಸ್ ಹೊಂದಿದ ವಾಹನಗಳು ಅಥವಾ ಪರ್ಪಲ ಗುಡ್ಡೆಯ ಮೇಲೆ ನಿಲುಗಡೆ ಮಾಡಿದ ವಾಹನಗಳು ತಾವು ಬಂದ ಮಾರ್ಗವಾಗಿ ಹಿಂದಿರುಗಲು ಅವಕಾಶ ಇಲ್ಲ. ನಿಲುಗಡೆ ಸ್ಥಳದಿಂದ ಮುಂದೆ ಸಾಗಿ ಪರ್ಪಲೆ ಕ್ರಿಸ್ತ ಸೇವಕಿ ಆಶ್ರಮದ ಏಕಮುಖ ರಸ್ತೆಯ ಮೂಲಕ ಕಾರ್ಕಳ-ಪಡುಬಿದ್ರಿ ರಸ್ತೆಗೆ ಸಂಪರ್ಕ ಕಲ್ಪಿಸಲಾಗಿದೆ.
ಬಸಿಲಿಕದ ವಠಾರದಲ್ಲಿ ಬಸಿಲಿಕದ ಅಧಿಕೃತ ಸ್ಟಾಲಿನಲ್ಲಿ ಮಾತ್ರ ಮೊಂಬತ್ತಿ ಮಾರಾಟ ಮಾಡಲಾಗಿದೆ. ಬಸಿಲಿಕದ ವಠಾರದಲ್ಲಿ ಯಾತ್ರಿಕರ ಸುರಕ್ಷತೆ ಹಾಗೂ ಅನುಕೂಲಕ್ಕಾಗಿ ಅನಧಿಕೃತ ಮೊಂಬತ್ತಿ ಮಾರಟ ಸಂಪೂರ್ಣವಾಗಿ ನಿಷೇದಿಸಲಾಗಿದೆ.
ಮಹೋತ್ಸವದ ಸಂದರ್ಭದಲ್ಲಿ ಭಿಕ್ಷಾಟನೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಭಕ್ತರು ಹರಕೆ ರೂಪದಲ್ಲಿ ಭಿಕ್ಷುಕರಿಗೆ ನೀಡುವ ದಾನವನ್ನು ಸಂಗ್ರಹಿಸಿ, ಮಹೋತ್ಸವದ ಮರುದಿನ ಅಂದರೆ 27ನೇ ತಾರೀಕು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಭಿಕ್ಷುಕರಿಗೆ ಊಟ ಹಾಗೂ ಸಂಗ್ರಹಿಸಿದ ದಾನವನ್ನು ನೀಡಲಾಗುವುದು.
ಮಹೋತ್ಸವದ ದಿನಗಳಲ್ಲಿ ನೀಡುವ ಸೇವೆ, ಸೌಲಭ್ಯ ಹಾಗೂ ಸೂಚನೆಗಳನ್ನು ದೂಪದಕಟ್ಟೆಯಿಂದ ಚೇತನಹಳ್ಳಿಯವರೆಗೆ ಕೇಳುವಂತೆ ಧ್ವನಿವರ್ಧಕದ ಮೂಲಕ ನಿರಂತರವಾಗಿ ಯಾತ್ರಿಕರಿಗೆ ತಿಳಿಸಲಾಗುವುದು.
ಆರೋಗ್ಯ ಪರಿಪಾಲನೆಯಲ್ಲಿ ಜಿಲ್ಲಾಡಳಿತದ ಪಾತ್ರ ಮಹತ್ವದ್ದು.
ವಾರ್ಷಿಕೋತ್ಸವ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಸುಮಾರು 18 ಲಕ್ಷ ಮಂದಿ ಅಗಮಿಸುವ ನಿರೀಕ್ಷೆ ಇದೆ. ಭಕ್ತಾದಿಗಳ ಮೂಲಸೌಕರ್ಯ ಒದಗಿಸುವಲ್ಲಿ ಬೆಸಿಲಿಕಾ ಆಡಳಿತ ಮಂಡಳಿ ಎಲ್ಲಾ ರೀತಿಯಲ್ಲಿ ಸೂಕ್ತ ಕ್ರಮಕೈಗೊಂಡಿದೆ. ವಾರ್ಷಿಕೋತ್ಸವ ವೇಳೆಗೆ ರಸ್ತೆಯ ಇಕ್ಕೆಲಗಳಲ್ಲಿ ತಿಂಡಿ-ತಿನಸುಗಳು, ಹಣ್ಣು-ಹಂಪಲುಗಳು ಮಾರಾಟ ಕೇಂದ್ರಗಳು ತೆರೆಯಲಾಗುತ್ತಿದೆ. ಮಾರಾಟ ಮಳಿಗೆಗಳಿಗೆ ಅಗತ್ಯ ನೀರಿನ ಪೊರೈಕೆ ಮಾಡುವುದು ಹಾಗೂ ಭಕ್ತಾದಿ, ಯಾತ್ರಾರ್ಥಿಗಳಿಗೆ ಕಳಪೆರಹಿತ ಆಹಾರ ಪದಾರ್ಥ ನೀಡುವ ಹೊಣೆಗಾರಿಗೆ ಜಿಲ್ಲಾಡಳಿತದ್ದಾಗಿದೆ.
ಕಳಪೆ ಆಹಾರ ಪತ್ತೆ ಹಚ್ಚುವುದಕ್ಕಾಗಿ ತೆರೆದ ಸ್ಥಳದಲ್ಲಿ ಸೇವಿಸುವ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದಕ್ಕೆ ಸಂಪೂರ್ಣ ನಿಷೇಧಿಸಬೇಕೆಂದು ಇದೇ ಸಂದರ್ಭದಲ್ಲಿ ಬೆಸಿಲಿಕಾ ನಿರ್ದೇಶಕರಾದ ವಂದನೀಯ ಜಾರ್ಜ್ ಡಿಸೋಜಾ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಸಂತ ಲಾರೆನ್ಸ್ ಧರ್ಮಕೇಂದ್ರದ ಪಾಲನಾ ಮಂಡಳಿಯ ಕಾರ್ಯದರ್ಶಿ ಸಂತೋಷ್ ಡಿಸಿಲ್ವ, ಉಪಾಧ್ಯಕ್ಷ ರಿಚರ್ಡ್ ಪಿಂಟೋ, ವಲೇರಿಯಾನ್ ಪಾಯಸ್, ಜಾನ್ ಡಿಸಿಲ್ವ ಮೊದಲಾದವರು ಉಪಸ್ಥಿತರಿದ್ದರು.