ಸುಳ್ಯ: ಸಿದ್ಧರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಹಿಂದುಳಿದ ವರ್ಗಗಳ ಮತ್ತು ದುರ್ಬಲರ ಅಭಿವೃದ್ಧಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗು ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನೂತನ ತಾಲೂಕು ಸಮಾಜ ಕಲ್ಯಾಣ ಇಲಾಖಾ ಕಚೇರಿಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ, ಗಡಿ ಪ್ರದೇಶ ಕಾಮಗಾರಿ ಹಾಗು ಅಂಬೇಡ್ಕರ್ ಭವನ ಕಾಮಗಾರಿ ಶಂಕುಸ್ಥಾಪನೆ ಮತ್ತು ಅಜ್ಜಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ನಡೆಸಿ, ಡಿ.ದೇವರಾಜ ಅರಸು ಭವನದ ನೂತನ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಾಸ್ಟೇಲ್ ಗಳಿಗೆ ಅರ್ಜಿ ಸಲ್ಲಿಸುವ ಎಲ್ಲರಿಗೂ ಅವಕಾಶ ನೀಡಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ 20 ಸಾವಿರ ಕೋಟಿ ರೂಗಳನ್ನು ಮೀಸಲಿರಿಸಲಾಗಿದೆ ಎಂದು ಅವರು ಹೇಳಿದರು.
ಆರು ತಿಂಗಳಲ್ಲಿ ಅಂಬೇಡ್ಕರ್ ಭವನ ಪೂರ್ತಿಗೆ ಸೂಚನೆ:
ನೆನೆಗುದಿಗೆ ಬಿದ್ದಿರುವ ಸುಳ್ಯ ಅಂಬೇಡ್ಕರ್ ಭವನ ನಿರ್ಮಾಣವನ್ನು ಆರು ತಿಂಗಳಲ್ಲಿ ಪೂರ್ತಿ ಮಾಡಬೇಕು. ಅದಕ್ಕೆ ಎಷ್ಟು ಹಣ ಬೇಕಾದರೂ ನೀಡುವುದಾಗಿ ಸಚಿವರು ಸೂಚನೆ ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಅಭಿವೃದ್ಧಿ ಪರ ಚಿಂತನೆಯಿಂದ ಸಾಮಾಜಿಕ ಬದಲಾವಣೆ ತರಲು ಸಾಧ್ಯವಾಗಿದೆ ಎಂದು ಹೇಳಿದರು. ದುರ್ಬಲರ ಅಭಿವೃದ್ಧಿ ಮಾಡುವ ಕಾರ್ಯದಲ್ಲಿ ಯಾವತ್ತೂ ಶಕ್ತಿ ಕಳೆದುಕೊಳ್ಳಬಾರದು ಎಂದು ಹೇಳಿದರು.
ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ರಾಜೀವ್ ಗಾಂಧಿ ಆರೋಗ್ಯ ವಿವಿಯ ಸಿಂಡಿಕೇಟ್ ಸದಸ್ಯ ಡಾ.ಬಿ.ರಘು, ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ.ಸದಸ್ಯೆ ಆಶಾ ತಿಮ್ಮಪ್ಪ ಗೌಡ, ನ.ಪಂ.ಅಧ್ಯಕ್ಷೆ ಶೀಲಾವತಿ ಮಾಧವ, ತಾ.ಪಂ.ಉಪಾಧ್ಯಕ್ಷೆ ಶುಭದಾ ಎಸ್.ರೈ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ತಾ.ಪಂ.ಸದಸ್ಯ ಅಬ್ದುಲ್ ಗಫೂರ್, ಅಜ್ಜಾವರ ಗ್ರಾ.ಪಂ.ಅಧ್ಯಕ್ಷ ಪ್ರಸಾದ್ ಕುಮಾರ್ ರೈ, ಉಬರಡ್ಕ ಗ್ರಾ.ಪಂ.ಅಧ್ಯಕ್ಷ ಹರೀಶ್ ಉಬರಡ್ಕ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ.ಜಿ.ಸಂತೋಷ್ ಕುಮಾರ್, ಪುತ್ತೂರು ಸಹಾಯಕ ಕಮೀಷನರ್ ರಘುನಂದನ್ ಮೂರ್ತಿ, ತಹಶೀಲ್ದಾರ್ ಎಂ.ಎಂ.ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಚಂದ್ರಶೇಖರ ಪೇರಾಲು ಸ್ವಾಗತಿಸಿ, ಬಾಲಚಂದ್ರ.ಕೆ ವಂದಿಸಿದರು. ಅಚ್ಚುತ ಅಟ್ಲೂರು ನಿರೂಪಿಸಿದರು.