ಸುಳ್ಯ: ಎಲ್ಲರೂ ಉತ್ತಮ ವ್ಯವಸ್ಥೆಯನ್ನು ಹೊಂದಿ ಜೀವನ ಮಟ್ಟವನ್ನು ಸುಧಾರಿಸಬೇಕೆಂದು ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತಿದೆ. ಸರ್ಕಾರ ನೀಡುವ ಸವಲತ್ತುಗಳನ್ನು ಫಲಾನುಭವಿಗಳು ಸಮರ್ಪಕವಾಗಿ ಬಳಸಿ ಸ್ವಾಭಿಮಾನದ ಬದುಕನ್ನು ರೂಪಿಸಬೇಕು ಎಂದು ಶಾಸಕ ಎಸ್.ಅಂಗಾರ ಹೇಳಿದ್ದಾರೆ.
ಸುಳ್ಯ ನಗರ ಪಂಚಾಯಿತಿಯಲ್ಲಿ ನಡೆದ ಸಮಾರಂಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಮನೆ ಮಂಜೂರಾತಿ ಪತ್ರ ಮತ್ತು ಕಾಮಗಾರಿ ಆದೇಶ ಪತ್ರವನ್ನು ವಿತರಿಸಿ ಅವರು ಮಾತನಾಡಿದರು.
ಎಲ್ಲರೂ ಸ್ವಾಭಿಮಾನದ ಬದುಕನ್ನು ಕಟ್ಟಿ ಕೊಳ್ಳಬೇಕೆನ್ನುವುದು ಸರ್ಕಾರದ ಆಶಯ, ಈ ಹಿನ್ನಲೆಯಲ್ಲಿ ವಸತಿ ನಿರ್ಮಾಣಕ್ಕೆ ಅನುದಾನವನ್ನು ನೀಡಲಾಗುತ್ತಿದೆ. ಇಂದು ಸ್ಪರ್ಧಾತ್ಮಕ ಮತ್ತು ಸವಾಲಿನ ದಿನಗಳಲ್ಲಿ ಸರ್ಕಾರಿ ಸವಲತ್ತುಗಳಿಗೆ ಸಾಕಷ್ಟು ಬೇಡಿಕೆಗಳು ಬಂದಿರುತ್ತದೆ. ಆಯ್ಕೆಯಾದ ಫಲಾನುಭವಿಗಳು ಹೆಚ್ಚು ಆಸಕ್ತಿಯಿಂದ ಕಾಲಮಿತಿಯೊಳಗೆ ಮನೆಗಳನ್ನು ಪೂರ್ತಿ ಮಾಡಿದರೆ ಮುಂದಿನ ದಿನಗಳಲ್ಲಿ ವಸತಿ ಯೋಜನೆಯಡಿಯಲ್ಲಿ ಹೆಚ್ಚು ಮನೆಗಳು ಮಂಜೂರಾಗಿ ಇನ್ನಷ್ಟು ಮಂದಿಗೆ ಸಹಾಯಕವಾಗಬಹುದು ಎಂದು ಅವರು ಹೇಳಿದರು.
ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷೆ ಶೀಲಾವತಿ ಮಾಧವ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ತಹಶೀಲ್ದಾರ್ ಎಂ.ಎಂ.ಗಣೇಶ್, ನಗರ ಪಂಚಾಯಿತಿ ಸದಸ್ಯರಾದ ಪ್ರಕಾಶ್ ಹೆಗ್ಡೆ, ಎನ್.ಎ.ರಾಮಚಂದ್ರ, ಕೆ.ಎಂ.ಮುಸ್ತಫಾ, ಮೀನಾಕ್ಷಿ, ಪ್ರೇಮ ಟೀಚರ್, ಗೋಪಾಲ ನಡುಬೈಲು, ಸುನಿತಾ ಡಿಸೋಜ, ಗಿರೀಶ್ ಕಲ್ಲುಗದ್ದೆ, ಕೆ.ಎಸ್.ಉಮ್ಮರ್, ಜಾನಕಿ ನಾರಾಯಣ, ನ.ಪಂ.ಇಂಜಿನಿಯರ್ ಶಿವಕುಮಾರ್, ತಾಲೂಕು ವಸತಿ ಯೋಜನೆಗಳ ನೋಡೆಲ್ ಅಧಿಕಾರಿ ಸಂತೋಷ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ನಗರ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕುಮಾರ್ ಸ್ವಾಗತಿಸಿ, ಆರೋಗ್ಯಾಧಿಕಾರಿ ರವಿಕೃಷ್ಣ ವಂದಿಸಿದರು. ಸುಳ್ಯ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ 115 ಮಂದಿಗೆ ಮನೆ ಮಂಜೂರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.