ಪುತ್ತೂರು : ನಗರಸಭೆ ವ್ಯಾಪ್ತಿಯ ಗುರುಂಪುನಾರ್-ಮೂವಪ್ಪು ನಡುವೆ ದಲಿತ ನಿವಾಸಿಗಳ ಮನೆಗಳಿಗೆ ಸಂಪರ್ಕ ರಸ್ತೆ ಕಲ್ಪಿಸುವಂತೆ ಕಳೆದ ಹಲವು ದಿನಗಳಿಂದ ದಲಿತ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದು, ಆದರೆ ರಸ್ತೆ ಹಾದು ಹೋಗಬೇಕೆಂಬ ಬೇಡಿಕೆ ಇರುವ ಸ್ಥಳದಲ್ಲಿ ದಲಿತ ಮನೆಗಳೇ ಇಲ್ಲ ಎಂಬ ವಿಚಾರ ಗುರುವಾರ ನಗರಸಭೆ ವತಿಯಿಂದ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ..!
ರಸ್ತೆ ನಿರ್ಮಾಣ ಆಗಬೇಕೆಂಬ ಬೇಡಿಕೆ ವ್ಯಕ್ತವಾದ ಪ್ರದೇಶದ ನಿವಾಸಿಗಳು ಮತ್ತು ನಗರಸಭೆ ವತಿಯಿಂದ ಗುರುವಾರ ಜಂಟಿಯಾಗಿ ನಡೆದ ಪರಿಶೀಲನೆಯ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ನಗರಸಭೆಯ ಸದಸ್ಯರು, ಅಕಾರಿಗಳು ಈ ವಿಚಾರ ತಿಳಿಸಿದರು. ಅದಕ್ಕೆ ಸಂಬಂಧಿಸಿ ರಸ್ತೆ ಹಾದುಹೋಗುವ ಬೇಡಿಕೆ ಇರುವ ಇಕ್ಕೆಲೆಗಳಲ್ಲಿ ಇರುವ ಮನೆಗಳ ವಿವರವನ್ನೂ ಪ್ರತ್ಯಕ್ಷವಾಗಿ ಮುಂದಿಟ್ಟರು.
ಗುರುಂಪುನಾರ್-ಮೂವಪ್ಪು
ಪುತ್ತೂರು ನಗರದಿಂದ ಬನ್ನೂರು ಆರ್ ಟಿಓ ಕಚೇರಿ ಸಮೀಪದ ಒಳ ರಸ್ತೆಯಲ್ಲಿ ಮೂರು ಕಿ.ಮೀ.ಸಾಗಿದರೆ ಗುರುಂಪ್ನಾರ್. ಇನ್ನೊಂದು ಭಾಗದ ನೆಹರೂನಗರ -ಪಡ್ಡಾಯೂರು ಮೂಲಕ ಸಾಗಿದರೆ ಮೂವಪ್ಪು. ದಲಿತ ಸಂಘಟನೆಗಳಿಂದ ರಸ್ತೆ ಬೇಡಿಕೆ ಇರುವುದು ಗುರುಂಪುನಾರ್ನಿಂದ-ಮೂವಪ್ಪು ಮಧ್ಯೆ ಇರುವ ಒಂದು ಕಿ.ಮೀ. ಕಾಲು ಹಾದಿಯಲ್ಲಿ. ಇಲ್ಲಿನ ಪಟ್ಟಾಭೂಮಿಯಲ್ಲಿ ಅಡಿಕೆ ತೋಟ, ತೋಡು ಇದ್ದು, ಇಲ್ಲಿ ರಸ್ತೆ ನಿರ್ಮಾಣಕ್ಕೆ ಸ್ಥಳೀಯರೂ ಒಪ್ಪಿಗೆ ಸೂಚಿಸುತ್ತಿಲ್ಲ. ಕಾರಣ ನಮಗೆ ರಸ್ತೆ ಆವಶ್ಯಕತೆ ಇಲ್ಲ ಅನ್ನುವುದು ಅವರ ನಿಲುವು. ದಲಿತ ಕುಟುಂಬಕ್ಕೆ ಸಂಪರ್ಕ ರಸ್ತೆ ಬೇಕೇ-ಬೇಕು ಅನ್ನುವುದು ದಲಿತ ಸಂಘಟನೆಗಳ ಆಗ್ರಹ.
ಗುರುಂಪುನಾರ್-ಮೂವಪ್ಪು ಮಧ್ಯೆ ರಸ್ತೆ ನಿರ್ಮಾಣದ ಬೇಡಿಕೆ ಬಂದ ಸ್ಥಳದಲ್ಲಿ ದಲಿತರ ಮನೆಗಳು ಇಲ್ಲ. ಇಲ್ಲಿನ ಆರು ಪಟ್ಟಾದಾರರು ರಸ್ತೆ ಒತ್ತುವರಿ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು, ಪ್ರಕರಣ ಕೋರ್ಟ್ ನಲ್ಲಿದೆ. ಗುರುಂಪುನಾರ್ನ ಎರಡು ಮನೆಗಳಿಗೆ ರಸ್ತೆಯ ಆವಶ್ಯಕತೆ ಇದ್ದರೂ, ಅವರಾರೂ ದಲಿತರಲ್ಲ. ಹೀಗಾಗಿ ಇಲ್ಲಿ ದಲಿತ ಕಾಲನಿಗೆ ರಸ್ತೆ ಬೇಕೆಂಬ ಹೋರಾಟ ಸುಳ್ಳು ಎಂದೂ ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಗುರುಂಪುನಾರ್ ಕುಂಞಿ ಅಹ್ಮದ್, ಅದ್ರಮಾ ಅವರ ಪ್ರಕಾರ, ಗುರುಂಪುನಾರ್ನಲ್ಲಿ ಶಿವರಾಮ ಭಟ್ ಅವರು ಜಾಗ ಖರೀದಿಸಿದ್ದು, ಅಲ್ಲಿಗೆ ರಸ್ತೆ ಸಂಪರ್ಕ ಇಲ್ಲ. ರಸ್ತೆಗೆ ಜಾಗ ನೀಡುವಂತೆ ಅವರು ನಮ್ಮಲ್ಲಿ ಕೇಳಿದಾಗ, ಅದಕ್ಕೆ ಪಾವತಿಸಬೇಕಾದ ದರ ಹೇಳಿದ್ದೇವು. ಅನಂತರ ಅವರು ಬರಲಿಲ್ಲ. ಆ ಬಳಿಕ ಇಲ್ಲಿ ಕೆಲವರೂ ರಸ್ತೆ ನಿರ್ಮಾಣಕ್ಕೆ ದಲಿತರನ್ನು ಎತ್ತಿಕಟ್ಟಿ, ಪ್ರತಿಭಟನೆ ನಡೆಸುತ್ತಿದ್ದಾರೆ. ಇಲ್ಲಿ ನಿಜವಾಗಿ ದಲಿತರ ಮನೆಗಳು ಇದ್ದರೆ ನಾವು ಈಗಲೂ ಬಿಟ್ಟು ಕೊಡುತ್ತೇವೆ. ಆದರೆ ಇಲ್ಲಿ ಮನೆಯೇ ಇಲ್ಲ ಅನ್ನುತ್ತಾರೆ.
ಪಡ್ಡಾಯೂರು ಮೂಲಕ ಮೂವಪ್ಪೆಗೆ ರಸ್ತೆ ಸಂಪರ್ಕ ಇದೆ. ಹಾಗಾಗಿ ಗುರುಂಪುನಾರ್ನಿಂದ ನಮಗೆ ರಸ್ತೆ ಸಂಪರ್ಕ ಬೇಡ. ನಮ್ಮದು ಪಟ್ಟಾ ಜಮೀನು. ನಮ್ಮ ಭೂಮಿಯಲ್ಲಿ ರಸ್ತೆ ನಿರ್ಮಿಸದಂತೆ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿದ್ದೇವೆ. ಇಲ್ಲಿ ದಲಿತರ ಒಂದೇ ಒಂದು ಕುಟುಂಬಗಳು ಇಲ್ಲ. ಗುರುಂಪುನರ್ ರಸ್ತೆಯ ಮತ್ತೊಂದು ಭಾಗದಲ್ಲಿ ಕೆಲ ದಲಿತ ಕುಟುಂಬಗಳು ಇವೆ. ಅವರಿಗೆ ಮೂವಪ್ಪು-ಗುರುಂಪುನಾರ್ ರಸ್ತೆಯ ಆವಶ್ಯಕತೆ ಇಲ್ಲ. ಈಗಾಗಲೇ ರಸ್ತೆ ಇದೆ ಅನ್ನುತ್ತಾರೆ ಮೂವಪ್ಪೆ ಶ್ರೀನಿವಾಸ ಗೌಡ, ಪುರುಷೋತ್ತಮ ಗೌಡ.
ರಸ್ತೆ ನಿರ್ಮಾಣ ಆಗಬೇಕೆಂಬ ಸ್ಥಳದ ಇಕ್ಕೆಲೆಗಳಲ್ಲಿ ಕುಂಞಿ ಅಹ್ಮದ್, ಅದ್ರಮಾ, ಶಿವರಾಮ ಆಚಾರ್ಯ, ಶಿವರಾಮ ಭಟ್, ವೆಂಕಪ್ಪ ಪೂಜಾರಿ, ಬಾಬು ಪೂಜಾರಿ, ಶಿವಪ್ಪ ಪೂಜಾರಿ, ಬೇಬಿ ಪೂಜಾರಿ, ಕೃಷ್ಣಪ್ಪ ಗೌಡ, ಶೇಖರ, ಶ್ರೀನಿವಾಸ ಗೌಡ, ಬಾಬು ಗೌಡ, ದೂಮಣ್ಣ ಗೌಡ ಅವರ ಜಾಗ ಇದೆ. ಅದರಲ್ಲಿ ಐದು ಮಂದಿ ನ್ಯಾಯಾಲಯದ ಮೆಟ್ಟಲೇರಿದ್ದಾರೆ. ವೆಂಕಪ್ಪ ಪೂಜಾರಿ ಕೃಷ್ಣಪ್ಪ ಗೌಡ ಅವರಿಗೆ ರಸ್ತೆಯ ಅವಶ್ಯಕತೆ ಇದೆ.
ದಲಿತರ ಮನೆಗಳಿಗೆ ಸಂಪರ್ಕ ರಸ್ತೆ ಬೇಕೆಂಬ ಪ್ರತಿಭಟನೆಯ ಹಿನ್ನಲೆಯಲ್ಲಿ ಸ್ಥಳ ಪರಿಶೀಲಿಸಿದ್ದೇವೆ. ಆದರೆ ಅಲ್ಲಿ ದಲಿತ ಕುಟುಂಬಗಳು ಇಲ್ಲ. ಹೀಗಾಗಿ ನಮ್ಮ ಮೇಲಿನ ಆರೋಪ ನಿರಾಧರ. ಹಿಂದುಳಿದ ವರ್ಗದ ಮೂರು ಮನೆಗಳಿಗೆ ರಸ್ತೆ ಆಗಬೇಕಿದ್ದರೂ, ಅದು ಪಟ್ಟಾ ಜಾಗದಾರರನ್ನು ವಿಶ್ವಾಸಕ್ಕೆ ಪಡೆದುಕೊಂಡು ಆಗಬೇಕಾದ ಪ್ರಕ್ರಿಯೆ ಅನ್ನುತ್ತಾರೆ ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು. ನಮ್ಮ ಮನೆಗೆ ರಸ್ತೆ ಸಂಪರ್ಕ ಇಲ್ಲ. ಕಳೆದ ಹಲವು ವರ್ಷಗಳಿಂದ ರಸ್ತೆ ಇಲ್ಲದ ಕಾರಣ ಮನೆ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ನಮ್ಮ ಸಮಸ್ಯೆ ಅನ್ನು ಎಲ್ಲರ ಗಮನಕ್ಕೆ ತಂದಿದ್ದೇವೆ. ಗುರುಂಪುನಾರ್ನಿಂದ ರಸ್ತೆ ಆದರೆ ನಮಗೆ ಅನುಕೂಲ ಅನ್ನುತ್ತಾರೆ ವೆಂಕಪ್ಪ ಪೂಜಾರಿ.
ಸಹಾಯಕ ಕಮಿಷನರ್ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ದಲಿತ ನಿವಾಸಿಗಳ ಮನೆಗಳು ಇಲ್ಲ. ರಸ್ತೆ ನಿರ್ಮಿಸಬೇಕೆಂಬ ಸ್ಥಳ ಪಟ್ಟಾ ಜಮೀನು ಅನ್ನುತ್ತಾರೆ ಸ್ಥಳೀಯ ವಾರ್ಡ್ ಸದಸ್ಯ ಹರೀಶ್ ನಾಕ್. ಈ ಸಂದರ್ಭದಲ್ಲಿ ಪ್ರಭಾರ ಪೌರಯುಕ್ತ ಕೆ.ಆರ್.ದೇವಾಡಿಗ, ನಗರಸಭೆ ಸದಸ್ಯ ಮಹಮ್ಮದ್ ಆಲಿ, ಮುಖೇಶ್ ಕೆಮ್ಮಿಂಜೆ, ನಗರಸಭೆಯ ಎಂಜಿನಿಯರ್ ತುಳಸಿ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.