ಪುತ್ತೂರು : ಪುರಸಭಾ ಅವಧಿಯಲ್ಲಿ ಚುನಾಯಿತರಾಗಿ ತೆರವಾಗಿದ್ದ ನಗರಸಭೆಯ ಆರು ಸ್ಥಾನಗಳಿಗೆ ಉಪ ಚುನಾವಣೆಗೆ ವೇಳಾಪಟ್ಟಿ ನಿಗದಿಯಾಗಿದೆ. ಈ ಮೂಲಕ ಇಲ್ಲಿನ ರಾಜಕೀಯ ಮತ್ತಷ್ಟು ರಂಗೇರುವುದು ನಿಶ್ಚಿತವಾಗಿದೆ. ಆಯೋಗ ಹೊರಡಿಸಿದ ಆದೇಶದಲ್ಲಿ ಫೆ.12 ರಂದು ಮತದಾನ, ಫೆ.15 ರಂದು ಮತ ಎಣಿಕೆ ನಡೆಸಲು ದಿನ ನಿಗದಿಪಡಿಸಲಾಗಿದೆ. ಜ.25 ರಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.
6 ವಾರ್ಡ್
ನಗರಸಭೆಯ ಒಟ್ಟು ಸ್ಥಾನಗಳು 27. ಅದರಲ್ಲಿ ಖಾಲಿ ಇರುವುದು ಆರು ಸ್ಥಾನ. ವಿಫ್ ಉಲ್ಲಂಘಿಸಿದ ಪ್ರಕರಣದ ಇನ್ನೊಂದು ಸ್ಥಾನ ಹೈಕೋರ್ಟ್ ನಲ್ಲಿ ವಿಚಾರಣೆಯ ಹಂತದಲ್ಲಿದೆ. ಉಪಚುನಾವಣೆ ನಡೆಯುವ ಆರು ಸ್ಥಾನಗಳು ಸದಸ್ಯರ ವಿಫ್ ಉಲ್ಲಂಘನೆಯ ಕಾರಣದಿಂದ ತೆರವಾದ ಸ್ಥಾನಗಳಾಗಿವೆ. ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ (6 ನೇ ವಾರ್ಡ್), ಕಮಲ ಆನಂದ (16 ನೇ ವಾರ್ಡ್), ದೀಕ್ಷಾ ಪೈ (19 ನೇ ವಾರ್ಡ್), ಸೀಮಾ ಗಂಗಾಧರ್ (21 ನೇ ವಾರ್ಡ್), ರೇಖಾ ಯಶೋಧರ್ (22 ನೇ ವಾರ್ಡ್), ನವೀನ್ ಚಂದ್ರ (26 ನೇ ವಾರ್ಡ್) ಅವರ ಸದಸ್ಯತ್ವ ರದ್ದು ಮಾಡಿ 2015 ಮೇ 7 ರಂದು ಜಿಲ್ಲಾಕಾರಿ ನ್ಯಾಯಾಲಯ ನೀಡಿದ ತೀರ್ಪು ಅನ್ನು ರಾಜ್ಯ ಹೈಕೋರ್ಟ್ ಎತ್ತಿ ನೀಡಿತ್ತು. ಅದೇ ಸ್ಥಾನಗಳಿಗೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಗೊಂಡಿದೆ.
ರಾಜಕೀಯ ಹಿನ್ನೋಟ
2013 ರಲ್ಲಿ ನಡೆದ ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 15, ಬಿಜೆಪಿ 12 ಸ್ಥಾನ ಗೆದ್ದಿತ್ತು. ಕಾಂಗ್ರೆಸ್ ಪಕ್ಷದ ಸದಸ್ಯೆ ಲೀನಾ ಅಪಘಾತವೊಂದರಲ್ಲಿ ಮೃತಪಟ್ಟ ಕಾರಣ ಕಾಂಗ್ರೆಸ್ ಸದಸ್ಯರ ಸ್ಥಾನ 14 ಕ್ಕೆ ಕುಸಿತ ಕಂಡಿತ್ತು. ಬಹುಮತ ಹೊಂದಿದ್ದ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಅಕೃತ ಅಭ್ಯರ್ಥಿಯಾಗಿ ಮಹಮ್ಮದ್ ಆಲಿ ಅವರು ಕಣಕ್ಕಿಳಿದಿದ್ದರು. ಅನಿರೀಕ್ಷಿತ ಬೆಳವಣಿಗೆಯಲ್ಲಿ ಅಕೃತ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಪಕ್ಷದ ಸದಸ್ಯೆ ವಾಣಿ ಶ್ರೀಧರ್ ಕಣಕ್ಕೆ ಇಳಿದಿದ್ದರು. ವಾಣಿ ಶ್ರೀಧರ್ ಅವರಿಗೆ ಬಿಜೆಪಿ ಬೆಂಬಲ ನೀಡಿ, ಅವರನ್ನು ಅಧ್ಯಕ್ಷರನ್ನಾಗಿಸಿದರೆ, ಇತ್ತ ಉಪಾಧ್ಯಕ್ಷ ಸ್ಥಾನವೂ ಬಿಜೆಪಿಗೆ ಒಲಿದು ಬಂತು.
ಇದರ ವಿರುದ್ಧ ಮಹಮ್ಮದ್ ಆಲಿ ಜಿಲ್ಲಾಕಾರಿ ಕೋರ್ಟ್ ನಲ್ಲಿ ಪಕ್ಷಾಂತರ ನಿಷೇಧದ ಕಾಯ್ದೆಯಡಿ ದೂರು ದಾಖಲಿಸಿದ್ದರು. ವಿಚಾರಣೆ ಅನಂತರ ವಾಣಿ ಶ್ರೀಧರ್ ಅವರು ಅಧ್ಯಕ್ಷ ಸ್ಥಾನ ಕಳೆದುಕೊಳ್ಳಬೇಕಾಯಿತು. ಹಾಗಂತ ರಾಜಕೀಯ ದೊಂಬರಾಟ ಅಲ್ಲಿಗೆ ಕೊನೆ ಆಗಲಿಲ್ಲ. ಮತ್ತೊಮ್ಮೆ ಅಧ್ಯಕ್ಷ ಸ್ಥಾನದ ಚುನಾವಣೆ ನಡೆದ ಸಂದರ್ಭದಲ್ಲೂ ಮಹಮ್ಮದ್ ಆಲಿ ವಿರುದ್ಧ ಅದೇ ಪಕ್ಷ ಆರು ಮಂದಿ ಸದಸ್ಯರು ಬಂಡಾಯವೆದ್ದರು. ಇಲ್ಲಿ ಮತ್ತೆ ಬಿಜೆಪಿ ಬೆಂಬಲ ಪಡೆದು ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಅಧ್ಯಕ್ಷರಾದರು. ಈ ಪ್ರಕರಣವೂ ಡಿ.ಸಿ ನ್ಯಾಯಾಲಯದ ಮೆಟ್ಟಿಲೇರಿತ್ತು.
ಅನೇಕ ತಿಂಗಳು ವಿಚಾರಣೆ ನಡೆದು, ಜಿಲ್ಲಾ ನ್ಯಾಯಾಲಯ ಸದಸ್ಯತ್ವ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಈ ತೀರ್ಪು ಅನ್ನು 2016 ಮಾ.29 ರಂದು ಹೈಕೋರ್ಟ್ ಎತ್ತಿ ಹಿಡಿಯಿತು. ಇದರ ವಿರುದ್ಧ ಆರು ಮಂದಿ ಸದಸ್ಯರು ವಿಭಾಗೀಯ ನ್ಯಾಯಪೀಠಕ್ಕೆ ಸಲ್ಲಿಸಿದ ಅರ್ಜಿ ಕೂಡ ವಜಾಗೊಂಡಿತ್ತು. ಪುರಸಭಾ ಅವಧಿಯಲ್ಲಿ ಅಧ್ಯಕ್ಷ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯೆ ಆಗಿ, ಪಕ್ಷದ ಅಕೃತ ಅಭ್ಯರ್ಥಿ ಮಹಮ್ಮದ್ ಆಲಿ ವಿರುದ್ಧ ಬಂಡೆದ್ದ ವಾಣಿ ಶ್ರೀಧರ್ ಅವರ ವಿರುದ್ಧದ ವಿಫ್ ಉಲ್ಲಂಘನೆಯ ಪ್ರಕರಣ ಹೈಕೋರ್ಟ್ ನಲ್ಲಿ ವಿಚಾರಣೆಯಲ್ಲಿದೆ. ಹಾಗಾಗಿ ಈಗ ಆ ಸ್ಥಾನದ ಕುರಿತು ಅಂತಿಮ ತೀರ್ಮಾನ ಇನ್ನೂ ಹೊರ ಬಿದ್ದಿಲ್ಲ.
ಮೊದಲ ಚುನಾವಣೆ
ಪುರಸಭೆ ನಗರಸಭೆ ಆದ ಅನಂತರ ನಡೆಯುವ ಪ್ರಥಮ ಚುನಾವಣೆಯಿದು ಎನ್ನುವುದು ಗಮನಾರ್ಹ ಅಂಶ. ಅದು ಉಪಚುನಾವಣೆಯ ಮುಖಾಂತರ. ಈ ಹಿಂದಿನ ಅಧ್ಯಕ್ಷ ಚುನಾವಣೆಯ ವೇಳೆ ವಿಫ್ ಉಲ್ಲಂಘನೆಯ ಕಾರಣದಿಂದ ಆರು ಮಂದಿ ಸದಸ್ಯರ ಸದಸ್ಯತ್ವ ರದ್ದುಗೊಂಡಿತ್ತು.
ಕುತೂಹಲ ಕೆರಳಿಸಿದ ಕಣ
ಉಪ ಚುನಾವಣೆ ನಡೆಯುವ ವಾರ್ಡ್ ರಾಜಕೀಯ ಅಂಗಲದ ಕುತೂಹಲದ ಕೇಂದ್ರ ಬಿಂದು. ವಿಫ್ ಉಲ್ಲಂಘಿಸಿ ಸದಸ್ಯತ್ವ ಕಳಕೊಂಡ ಆರು ಮಂದಿ ಈಗಲೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ನಗರಸಭೆಯಲ್ಲಿ ಆಡಳಿತ ಪಕ್ಷದಲ್ಲಿರುವ 8 ಮಂದಿ ಕೂಡ ಕಾಂಗ್ರೆಸ್ ಪಕ್ಷದ ಸದಸ್ಯರೆ ಆಗಿದ್ದಾರೆ. ಈ ಎರಡು ತಂಡಗಳು ಬೇರೆ-ಬೇರೆ ಬಣದಲ್ಲಿ ಗುರುತಿಸಿಕೊಂಡಿದ್ದರೂ, ಕಾಂಗ್ರೆಸ್ ಪಕ್ಷದಲ್ಲೇ ಸಕ್ರೀಯರಾಗಿದ್ದಾರೆ. ಇತ್ತ 12 ಸ್ಥಾನ ಹೊಂದಿರುವ ಬಿಜೆಪಿ ಆರು ಸ್ಥಾನಗಳಲ್ಲಿ ಗೆದ್ದು ತನ್ನ ಬಲ ವೃದ್ಧಿಸಲಿದೆಯೋ ಅಥವಾ ಭಿನ್ನಮತ ಶಮನಗೊಳಿಸಿ ಕಾಂಗ್ರೆಸ್ ಪಾರಮ್ಯ ಮೆರೆಯಲಿದೆಯೋ ಅನ್ನುವುದಕ್ಕೆ ಕೆಲ ದಿನಗಳಲ್ಲಿಯೇ ಉತ್ತರ ಸಿಗಲಿದೆ.
ಚುನಾವಣೆಯ ವಿವರ
ರಾಜ್ಯ ಚುನಾವಣಾ ಆಯೋಗ ದ.ಕ ಜಿಲ್ಲೆಯ ಪುತ್ತೂರು, ಉಳ್ಳಾಲ, ಮಂಡ್ಯ ಜಿಲ್ಲೆಯ ನಾಗಮಂಗಲ, ಬಳ್ಳಾರಿ ಜಿಲ್ಲೆಯ ಕಮಲಾಪುರ, ಯಾದಗಿರಿ ಜಿಲ್ಲೆಯ ಶೋರಾಪುರ ಸ್ಥಳೀಯ ಸಂಸ್ಥೆಗಳ ಒಟ್ಟು 11 ಸ್ಥಾನಗಳಿಗೆ ಚುನಾವಣೆ ನಿಗದಿಪಡಿಸಿದೆ. ಜ.25 ಕ್ಕೆ ಜಿಲ್ಲಾಕಾರಿ ಅಸೂಚನೆ ಹೊರಡಿಸಲಿದ್ದು, ಫೆ.1 ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಫೆ.2 ರಂದು ನಾಮಪತ್ರ ಪರಿಶೀಲನೆ, ಫೆ.4 ನಾಮಪತ್ರ ಹಿಂತೆಗೆತಕ್ಕೆ ಕಡೆಯ ದಿನ, ಫೆ.12 ಕ್ಕೆ ಮತದಾನ, ಫೆ.14 ಕ್ಕೆ ಅಗತ್ಯ ಬಿದ್ದರೆ ಮರುಮತದಾನ, ಫೆ.15 ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಸುತ್ತೋಲೆ ಹೊರಡಿಸಿದೆ.