ಸುಳ್ಯ: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಸುಳ್ಯ ತಾಲೂಕು ಅಕ್ಷರ ದಾಸೋಹ ನೌಕರರ ಸಂಘದ ಸುಳ್ಯ ತಾಲೂಕು ಸಮಿತಿಯ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನೌಕರರು ತಾಲೂಕು ಕಚೇರಿಯ ಎದುರಿನಲ್ಲಿ ಸಭೆ ನಡೆಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅಕ್ಷರ ದಾಸೋಹ ಸಂಘದ ಗೌರವಾಧ್ಯಕ್ಷ ಹಾಗು ಸಿಐಟಿಯು ಮುಖಂಡ ರಾಬರ್ಟ್ ಡಿಸೋಜ ಅಕ್ಷರ ದಾಸೋಹ ನೌಕರರು 14 ವರ್ಷಗಳಿಂದ ದುಡಿಯುತ್ತಿದ್ದರೂ ಅವರಿಗೆ ದಿನಕ್ಕೆ ಕೇವಲ 65 ರೂ ಸಂಬಳವನ್ನು ಮಾತ್ರ ನೀಡಲಾಗುತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದರಿಂದ ಅಕ್ಷರ ದಾಸೋಹ ನೌಕರರು ಸಮಸ್ಯೆಯಲ್ಲಿ ಸಿಲುಕುವಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಲಕ್ಷ ಗಟ್ಟಲೆ ಸಂಬಳ ಪಡೆಯುತ್ತಿದ್ದರೂ, ಬಡ ಕಾರ್ಮಿಕರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಜನಪ್ರತಿನಿಧಿಗಳು ಇಚ್ಛಾಶಕ್ತಿಯಿಂದ ಕೆಲಸ ಮಾಡದ ಕಾರಣ ಇವರು ಸಮಸ್ಯೆಯಲ್ಲಿ ಸಿಲುಕುವಂತಾಗಿದೆ ಎಂದು ಆರೋಪಿಸಿದರು.
ಅಕ್ಷರ ದಾಸೋಹ ನೌಕರರ ನ್ಯಾಯಯುತ ಬೇಡಿಕೆಯನ್ನು ಈಡೇರಿಸಲು ಸರ್ಕಾರಗಳು ಪ್ರಯತ್ನ ನಡೆಸಬೇಕು ಎಂದು ಪ್ರತಿಭಟನಾ ನಿರತ ನೌಕರರು ಒತ್ತಾಯಿಸಿದರು. ಸಂಘದ ತಾಲೂಕು ಸಮಿತಿಯ ಅಧ್ಯಕ್ಷೆ ಲೀಲಾವತಿ ಕೆ, ಪ್ರಧಾನ ಕಾರ್ಯದರ್ಶಿ ಸುಮಿತ ಕಲ್ಲುಗುಂಡಿ, ಖಜಾಂಜಿ ಶಶಿಕಲಾ ಪೈಕ, ವಿಜಯಲಕ್ಷ್ಮಿ, ಸುನಿತಾ ಎಲಿಮಲೆ, ಲೀಲಾವತಿ ಗಾಂಧೀನಗರ, ಲತಾ ಪದವು, ಸಾವಿತ್ರಿ, ಶಶಿಕಲಾ ನೇತೃತ್ವ ವಹಿಸಿದ್ದರು.
ಬೇಡಿಕೆಗಳು:
ಅಕ್ಷರ ದಾಸೋಹ ಯೋಜನೆಯ ಕಡಿತ ಮಾಡಿದ ಅನುದಾನವನ್ನು ಕೇಂದ್ರ ಸರ್ಕಾರ ವಾಪಾಸ್ಸು ನೀಡಬೇಕು, ಅಕ್ಷರ ದಾಸೋಹ ಯೋಜನೆಯನ್ನು ಬಲಿಷ್ಠಗೊಳಿಸಬೇಕು, ಕನಿಷ್ಠ ಕೂಲಿ ನಿಗದಿಯಾಗುವವರೆಗೆ ಐದು ಸಾವಿರ ರೂ ವೇತನ ನಿಗದಿ ಮಾಡಬೇಕು, ನಾಲ್ಕನೆಯ ದರ್ಜೆಯ ನೌಕರರಾಗಿ ಪರಿಗಣಿಸಬೇಕು, ಹಿಂದಿನ ಸರ್ಕಾರ ಘೋಷಣೆ ಮಾಡಿದ ಹೆಚ್ಚುವರಿ ಸಂಭಾವನೆಯನ್ನು ಸರ್ಕಾರ ಜಾರಿ ಮಾಡಬೇಕು. ಅಡುಗೆ ಮಾಡುವ ಸಂದರ್ಭ ಸಂಭವಿಸುವ ಅಪಘಾತದ ಪರಿಹಾರ ಮೊತ್ತವನ್ನು ಒಂದು ಲಕ್ಷದಿಂದ ಐದು ಲಕ್ಷಕ್ಕೆ ಏರಿಸಬೇಕು, ಬಿಸಿಯೂಟ ನೌಕರರ ಮೇಲಿನ ದಬ್ಬಾಳಿಕೆ ಮತ್ತು ದೌರ್ಜನ್ಯ ನಿಲ್ಲಬೇಕು ಮತ್ತಿತರ ಬೇಡಿಕೆಗಳನ್ನು ಮುಂದಿರಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.