ಬಂಟ್ವಾಳ: ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಟ್ರೀ ಪಾರ್ಕ್ ನಿರ್ಮಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಹಂತಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ರಾಜ್ಯ ಅರಣ್ಯಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಕೆಲಿಂಜ ವೀರಕಂಭದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ ಅರಣ್ಯ ಇಲಾಖೆ ವತಿಯಿಂದ ನಿರ್ಮಿಸಲಾದ ಸಿರಿ ಚಂದನವನ ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರಿನ ತಣ್ಣೀರುಬಾವಿ, ಉಡುಪಿಯ ಬಡಗಬೆಟ್ಟುವಿನಲ್ಲಿ ಟ್ರೀ ಪಾರ್ಕ್ ನಿರ್ಮಿಸಲಾಗಿದೆ. ಬಂಟ್ವಾಳ ಐಬಿ ಎದುರು ಹಾಗೂ ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿ ಟ್ರೀ ಪಾರ್ಕ್ ರಚಿಸುವ ಗುರಿ ಇದೆ ಎಂದವರು ಹೇಳಿದರು.
ಕಾರಿಂಜದಲ್ಲಿ ಔಷಧೀಯ ಗಿಡಗಳನ್ನು ನೆಟ್ಟು ದೈವೀವನ ಹಾಗೂ ಪುತ್ತೂರಿನಲ್ಲಿ ದೇಯಿ ಬೈದೇತಿ ಔಷಧಿವನ ನಿರ್ಮಿಸಲಾಗಿದೆ. ಅದೇ ರೀತಿ ಕೆಲಿಂಜದಲ್ಲಿ ಸಿರಿಚಂದನ ವನದ ಮೂಲಕ ಸುಮಾರು 500 ಎಕ್ರೆ ಪ್ರದೇಶದಲ್ಲಿ ಮೂರು ಸಾವಿರ ಶ್ರೀಗಂಧದ ಸಸಿಗಳನ್ನು ನೆಡುವುದರೊಂದಿಗೆ ಅರಣ್ಯ ಸಂರಕ್ಷಣೆ ಕಾಯ್ದೆಯ ಪರಿಣಾಮಕಾರಿಯಾಗಿ ಅನುಷ್ಠಾನ ಸಾಧ್ಯವಾಗಿದೆ ಎಂದ ಅವರು, ಅರಣ್ಯ ಸಂರಕ್ಷಣಾ ಕಾಯ್ದೆಯಿಂದಾಗಿ ಅರಣ್ಯ ಇಲಾಖೆಗೆ ಹೆಚ್ಚಿನ ಬಲ ಬಂದಿದೆ ಎಂದರು.
ಚಿಣ್ಣರ ವನದರ್ಶನ
ಮಕ್ಕಳು ಪರಿಸರ ರಕ್ಷಣೆಯ ಕುರಿತು ಅರಿತುಕೊಳ್ಳುವುದು ಅತೀ ಅಗತ್ಯ. ಇದಕ್ಕಾಗಿಯೇ ಅರಣ್ಯ ಇಲಾಖೆ ಚಿಣ್ಣರ ವನದರ್ಶನ ಕಾರ್ಯಕ್ರಮ ಆಯೋಜಿಸುತ್ತದೆ. ಪರಿಸರ ಸಂರಕ್ಷಣೆ ನಿಜ ಅರ್ಥದಲ್ಲಿ ಅನುಷ್ಠಾನಗೊಳ್ಳುತ್ತದೆ ಎಂದರು.
ಕಸ್ತೂರಿರಂಗನ್ ವರದಿ
ಕಸ್ತೂರಿ ರಂಗನ್ ವರದಿ ರಿಸರ್ವ್ ಫಾರೆಸ್ಟ್ ಗೆ ಸೀಮಿತವಾಗಿಯಷ್ಟೇ ಅನುಷ್ಠಾನಗೊಳ್ಳುವಂತೆ ಶಿಫಾರಸು ಮಾಡಿದ್ದೇವೆ ಎಂದು ರಮಾನಾಥ ರೈ ಹೇಳಿದರು. ಪಶ್ಚಿಮ ಘಟ್ಟಗಳ ಕಾಡು ಉಳಿಯುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಕಸ್ತೂರಿರಂಗನ್ ವರದಿ ಕುರಿತು ನಿಜಾಂಶ ತಿಳಿಸಬೇಕು. ಡಿಸಿ ಕಚೇರಿ ಪಡೀಲ್ ಬಳಿ ನಿರ್ಮಿಸಲು ಹೊರಟರೆ, ಮರ ಕಡಿಯುವುದಕ್ಕೆ ಆಕ್ಷೇಪ ಸಲ್ಲಿಸಲಾಗುತ್ತದೆ ಎಂದು ರೈ ಹೇಳಿದರು. ನಗರ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಕೆರೆಗಳ ರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದ ಸಚಿವ, ಅರಣ್ಯೇತರ ಉದ್ದೇಶಕ್ಕೆ ಅರಣ್ಯ ಇಲಾಖೆಯ ಜಮೀನನ್ನು ಬಳಸಲು ಆಗೋದಿಲ್ಲ ಎಂದು ಪುನರುಚ್ಛರಿಸಿದರು. ಯಾರೂ ಕಾನೂನು ಮುರಿಯುವ ಕೆಲಸ ಮಾಡಬಾರದು. ವನ್ಯಜೀವಿಗಳ ಸಂರಕ್ಷಣೆಗೆ ಗರಿಷ್ಠ ಆದ್ಯತೆ ನೀಡಲಾಗುವುದು ಎಂದರು.
ಮುಖ್ಯಅತಿಥಿಗಳಾಗಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೆರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಸದಸ್ಯ ಜಗದೀಶ ಕೊಯ್ಲ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುಳಾ ಮಾಧವ ಮಾವೆ, ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಸದಸ್ಯರಾದ ಗೀತಾ ಚಂದ್ರಶೇಖರ್, ಶೋಭಾ ರೈ, ಎಪಿಎಂಸಿ ಸದಸ್ಯರಾದ ಪದ್ಮರಾಜ ಬಲ್ಲಾಳ್, ಪದ್ಮನಾಭ ರೈ, ಚಂದ್ರಶೇಖರ ಪೂಜಾರಿ, ಎಸ್ ಡಿಎಂಸಿ ಅಧ್ಯಕ್ಷ ಹಮೀದ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂಜಯ್ ಎಸ್. ಬಿಜ್ಜೂರು, ಬುಡಾ ಅಧ್ಯಕ್ಷ ಪಿಯುಸ್ ಎಲ್. ರೋಡ್ರಿಗಸ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ.ಹನುಮಂತಪ್ಪ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ದಿಲೀಪ್ ಕುಮಾರ್, ಗ್ರಾಮ ಅರಣ್ಯ ರಕ್ಷಣಾ ಸಮಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಎಂ, ಗ್ರಾಪಂ ಅಧ್ಯಕ್ಷೆ ಪ್ರೇಮಲತಾ, ಅರಣ್ಯ ಅಪರ ಸಂರಕ್ಷಣಾಧಿಕಾರಿ ವಿಜಯ ನರಸಿಂಹರಾಜ್ ಮೊದಲಾದವರು ಉಪಸ್ಥಿತರಿದ್ದರು.
ಡಾ.ಕೆ.ಟಿ.ಹನುಮಂತಪ್ಪ ಸ್ವಾಗತಿಸಿದರು. ಡಾ.ಸಂಜಯ ಎಸ್.ಬಿಜ್ಜೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಲಯ ಅರಣ್ಯಾಧಿಕಾರಿ ಬಿ.ಸುರೇಶ್ ವಂದಿಸಿದರು. ನೌಫಲ್ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮುನ್ನ ಕೆಲಿಂಜ ಶಾಲಾ ಮಕ್ಕಳು ಪರಿಸರ ಸಂರಕ್ಷಣೆ ಕುರಿತು ಮರ ಹೇಳಿದ ಕತೆನಾಟಕ ಪ್ರದರ್ಶಿಸಿದರು.
ಅರಣ್ಯದೊಳಗೆ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ
ಅರಣ್ಯೇತರ ಉದ್ದೇಶಕ್ಕೆ ಕಾಡು ಬಳಕೆ ಮಾಡಲು ಆಗುವುದಿಲ್ಲ. ರಸ್ತೆ ಮಾಡುವುದು ಇತ್ಯಾದಿಗಳಿಗೆ ಅರಣ್ಯ ಇಲಾಖೆ ಅನುಮತಿ ಕೋರಿ ಪ್ರಸ್ತಾವನೆಗಳು ಬಂದಾಗ ಕಾಯ್ದೆಯನುಸಾರ ಕ್ರಮ ಕೈಗೊಳ್ಳಲಾಗುತ್ತದೆ. ಇದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು, ಜನರು ನಿಜಾಂಶ ತಿಳಿಯಬೇಕು ಎಂದು ರೈ ಹೇಳಿದರು.