ಉಳ್ಳಾಲ: ಎಲ್ಲವೂ ಡಿಜಿಟಲೀಕರಣ ಆಗುತ್ತಿದೆ. ಇದಕ್ಕೆ ಪೂರಕವಾಗಿ ಸಂಘ ಸಂಸ್ಥೆಗಳು ವಿವಿಧ ರೀತಿಗಳಲ್ಲಿ ಜನರನ್ನು ಸುಶಿಕ್ಷಿತರನ್ನಾಗಿಸುತ್ತಿದ್ದರೆ, ಇತ್ತ ಗ್ರಾಮಾಂತರ ಭಾಗಕ್ಕೆ ಚಲಿಸುವ ಖಾಸಗಿ ಬಸ್ಸಿನಲ್ಲಿ ಉಚಿತ ವೈಫೈ ಸೌಲಭ್ಯವನ್ನು ನೀಡುವ ಮೂಲಕ ಬಸ್ ಮಾಲೀಕರು ಗ್ರಾಮೀಣ ಭಾಗದ ಜನರಿಗೆ ಹಾಗೂ ಬಸ್ಸಿನಲ್ಲಿ ಚಲಿಸುವ ಪ್ರಯಾಣಿಕರಿಗೆ ಉಚಿತ ಇಂಟರ್ನೆಟ್ ನೀಡಲು ಆರಂಭಿಸಿದ್ದಾರೆ.
ನಾಟೆಕಲ್ ನಿವಾಸಿ ಎ.ಬಿ.ಇಬ್ರಾಹಿಂ ಮಾಲೀಕತ್ವದ ಗೋಲ್ಡನ್ ಲೈನ್ ಬಸ್ಸಿನಲ್ಲಿ ಉಚಿತ ವೈಫೈ ಸೌಲಭ್ಯವನ್ನು ಆರಂಭಿಸಲಾಗಿದೆ. ಅವರ ಪುತ್ರ ಅಬ್ದುಲ್ ರೆಹಮಾನ್ ಎಂಬವರು ಚಾಲಕನಾಗಿರುವ ಬಸ್ಸಿನಲ್ಲಿ ಉಚಿತ ಅಂತರ್ಜಾಲ ಅಳವಡಿಸಲು ರೆಹಮಾನ್ ಪುತ್ರ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ ಆಗಿರುವ ಯುವಕನಾಗಿರುವ ಅಫ್ರೀಝ್ ಮನಸ್ಸು ಮಾಡಿದ್ದರು. ಅವರ ಅಭಿರುಚಿಯಂತೆ ಕಳೆದ ಎರಡು ದಿನಗಳಿಂದ ಮಂಗಳೂರಿನಿಂದ ಹೂಹಾಕುವಕಲ್ಲು ಕಡೆಗೆ ಚಲಿಸುವ 54 ನಂಬರಿನ ಸಿಟಿ ಬಸ್ಸಿನಲ್ಲಿ ಉಚಿತ ವೈಫೈ ಸೌಲಭ್ಯವನ್ನು ಪ್ರಯಾಣಿಕರಿಗೆ ಒದಗಿಸಲಾಗಿದೆ. ವೈಫೈ ಹೆಸರು ಮತ್ತು ಅದರ ಪಾಸ್ ವರ್ಡ್ ಅನ್ನು ಬಸ್ಸಿನ ಒಳಭಾಗದಲ್ಲಿ ಸ್ಟಿಕರ್ ಮೂಲಕ ಅಂಟಿಸಲಾಗಿದೆ. ಎರಡು ದಿನಗಳಿಂದ ಬಸ್ಸಿನಲ್ಲಿ ಉಚಿತ ವೈಫೈ ಇದೆ ಅನ್ನುವ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಬಸ್ಸಿನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ಗ್ರಾಮಾಂತರ ಭಾಗದ ಶಿಕ್ಷಿತರು ಮೊಬೈಲಿನಲ್ಲಿ ಅಂತರ್ಜಾಲವನ್ನು ಬಳಕೆ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಅವರಿಗೆ ಉಚಿತ ಸೇವೆ ಅನುಕೂಲವಾಗಬಹುದು ಅನ್ನುವ ಭರವಸೆ ಇದೆ ಎಂದು ಚಾಲಕ ರೆಹಮಾನ್ ಹೇಳುತ್ತಾರೆ.
ಜಿಯೋ ರೂಟರ್ ಬಳಕೆ : ಸ್ಟೇರಿಂಗ್ ಸಮೀಪ ಜಿಯೋ ಕಂಪೆನಿಯ ರೂಟರ್ ಅನ್ನು ಅಳವಡಿಸಲಾಗಿದೆ. ವಿದ್ಯುತ್ ರೀಚಾರ್ಜ್ ಮಾಡುವ ರೂಟರ್ ಸಾಧನವಾಗಿರುವುದರಿಂದ ಬಸ್ಸು ರಾತ್ರಿ ನಿಲ್ಲುವ ಸಮಯದಲ್ಲಿ ಅದನ್ನು ಚಾರ್ಜ್ ಗೆ ಇಡಲಾಗುತ್ತದೆ. ಬೆಳಗ್ಗಿನಿಂದ ಸಂಜೆಯವರೆಗೂ ಸಾಧನ ಚಾಲ್ತಿಯಲ್ಲಿರುವುದರಿಂದ ಬಸ್ಸಿನಲ್ಲಿ ಪ್ರಯಾಣಿಸುವ ಬಹುತೇಕ ಪ್ರಯಾಣಿಕರು ಇದನ್ನು ಉಪಯೋಗಿಸುತ್ತಿದ್ದಾರೆ. ಟಿಕೇಟ್ ಹಣದೊಂದಿಗೆ ಉಚಿತ ಅಂತರ್ಜಾಲಕ್ಕೆ ಧನ್ಯವಾದವನ್ನು ಪ್ರಯಾಣಿಕರು ನೀಡುತ್ತಿರುವುದು ಸಂತಸ ತಂದಿದೆ ಎಂದು ಬಸ್ಸಿನ ನಿರ್ವಾಹಕ ಕುಂಞಿ ಹೇಳುತ್ತಾರೆ.
ನೆಟ್ವರ್ಕ್ ತೊಂದರೆ ಆಗುತ್ತಿಲ್ಲ: ಸಾಮಾನ್ಯವಾಗಿ ಬಸ್ಸಿನಲ್ಲಿ ಚಲಿಸುವಾಗ ಮೊಬೈಲ್ ನೆಟ್ ವರ್ಕನ್ನು ಕಳೆದುಕೊಳ್ಳುತ್ತೇವೆ. ಆದರೆ ಗೋಲ್ಡ್ ಲೈನ್ ಬಸ್ಸು ಚಲಿಸುವ ತೊಕ್ಕೊಟ್ಟು, ಕುತ್ತಾರು, ದೇರಳಕಟ್ಟೆ, ನಾಟೆಕಲ್, ಕಲ್ಕಟ್ಟ, ಮಂಜನಾಡಿ, ಮೊಂಟೆಪದವು, ಮೋಂಟುಗೋಳಿ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆಯೂ ಆಗುತ್ತಿಲ್ಲ. ಇದನ್ನು ಯುವಸಮುದಾಯ ದುರುಪಯೋಗಪಡಿಸಿಕೊಳ್ಳದೆ ಸದುಪಯೋಗಪಡಿಸಿಕೊಂಡು, ಗ್ರಾಮೀಣ ಭಾಗದ ಜನರನ್ನು ಬಸ್ಸಿನಲ್ಲೇ ಡಿಜಿಟಲ್ ಯುಗದ ಶಿಕ್ಷಣ ನೀಡಲು ಉಪಯೋಗಿಸಿದರೆ ಗ್ರಾಮಕ್ಕೆ ಬಸ್ಸು ಮಾದರಿಯಾಗಬಹುದು ಅನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.