ಕಾಸರಗೋಡು: ಕಾಸರಗೋಡು ನಗರಸಭಾ ವ್ಯಾಪ್ತಿಯ ಸಭಾಂಗಣ ಹಾಗೂ ಸಾರ್ವಜನಿಕ ಸಮಾರಂಭದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ವಿವಾಹ ಮಂಟಪ ಹಾಗೂ ಇತರ ಕಡೆಗಳಲ್ಲಿ ಪ್ಲಾಸ್ಟಿಕ್ ಗ್ಲಾಸ್ , ಪ್ಲೇಟ್ ಹಾಗೂ ಇತರ ಸಾಮಗ್ರಿಗಳ ಬಳಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಗರಸಭೆ ಈ ತೀರ್ಮಾನಕ್ಕೆ ಬಂದಿದೆ.
ಇದರಂತೆ ಸ್ಟೀಲ್ , ಅಲ್ಯೂ ಮಿನಿಯಂ ಬಳಕೆ ಮಾಡಬೇಕು. ಅಲ್ಲದೆ ಹೋಟೆಲ್ , ಬೇಕರಿ ಗಳಲ್ಲಿ ಪ್ಲಾಸ್ಟಿಕ್ ಚೀಲ ಬಳಸುವಂತಿಲ್ಲ . ೫೦ ಮೈಕ್ರೋನ್ ಗಿಂತ ಕೆಳಗಿನ ಪ್ಲಾಸ್ಟಿಕ್ ಬಳಕೆ , ಮಾರಾಟ ಮಾಡುವಂತಿಲ್ಲ. ನಗರಸಭಾ ವ್ಯಾಪ್ತಿಯಲ್ಲಿ ಮಾರಾಟ ಮಳಿಗೆಗೆ ಪರವಾನಿಗೆ ಪಡೆಯುವ ಸಂದರ್ಭದಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ನೀಡುವುದಿಲ್ಲ ಎಂದು ಪ್ರಮಾಣ ಪತ್ರ ನೀಡಬೇಕು. ಪರವಾನಿಗೆ ಶುಲ್ಕ ದ ಜೊತೆಗೆ ಮಾಲಿನ್ಯ ಸಂಸ್ಕರಣಾ ನಿಧಿಗೆ ನಿಗಧಿತ ಮೊತ್ತವನ್ನು ಪಾವತಿಸಬೇಕು. ಪ್ಲಾಸ್ಟಿಕ್ ಬ್ಯಾಗ್ ಮಾರಾಟ ಮಾಡಿದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.
ಒಂದಕ್ಕಿಂತ ಹೆಚ್ಚು ಬಾರಿ ಪತ್ತೆಯಾದಲ್ಲಿ ಪರವಾನಿಗೆ ರದ್ದುಪಡಿಸಲಾಗುವುದು. ನಗರಸಭಾ ವ್ಯಾಪ್ತಿಯ ವ್ಯಾಪಾರ ಸಂಸ್ಥೆ, ಆಸ್ಪತ್ರೆ, ಸಂತೆ, ಕಸಾಯಿಖಾನೆ, ಚಿಕನ್ ಸೆಂಟರ್, ಕಲ್ಯಾಣ ಮಂಟಪ, ಪ್ಲಾಟ್, ಎರಡು ಅಂತಸ್ತಿನ ಮನೆ ನಿರ್ಮಿಸಲು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪ್ಲಾನ್ ನಲ್ಲಿ ಮಾಲಿನ್ಯ ಸಂಸ್ಕರಣಾ ವ್ಯವಸ್ಥೆ ಬಗ್ಗೆ ನಮೂದಿಸಬೇಕು. ಪ್ರಸ್ತುತ ಇಂತಹ ಕಟ್ಟಡಗಳಿಗೆ ಮಾಲಿನ್ಯ ವ್ಯವಸ್ಥೆ ಜಾರಿಗೊಳಿಸಲು ಫೆಬ್ರವರಿ 27ರ ತನಕ ಕಾಲಾವಧಿ ನೀಡಲಾಗಿದೆ.
ಪ್ಲಾಸ್ಟಿಕ್ ನ್ನು ಮನಬಂದಂತೆ ಎಸೆದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈ ಕುರಿತು ನಗರಸಭಾ ಸಾಮಾನ್ಯ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದು , ಅಧ್ಯಕ್ಷೆ ಬೀಫಾತಿಮ್ಮ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು.