ಮೂಡುಬಿದಿರೆ: ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ(ಕ್ಷೇಮ) ಹಾಗೂ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾಪಟುಗಳಿಗೆ ಆರೋಗ್ಯ ಮಾಹಿತಿ, ಜಾಗೃತಿ, ತಪಾಸಣೆ ಹಾಗೂ ವಿಚಾರಗೋಷ್ಠಿ `ಕ್ರೀಡಾ ಕ್ಷೇಮ’ ಕಾರ್ಯಕ್ರಮವನ್ನು ವಿದ್ಯಾಗಿರಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಯಿತು.
ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ.ಸತೀಶ್ ಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕ್ರೀಡಾ ಅಭ್ಯಾಸದ ವೇಳೆ ಸರಿಯಾದ ವಿಧಾನದಲ್ಲಿ ತೊಡಗಿಕೊಂಡರೆ ಗಾಯಗಳಿಂದ ದೂರವಿರಬಹುದು. ಯುವ ಕ್ರೀಡಾಪಟುಗಳ ಆರೋಗ್ಯ ರಕ್ಷಣೆ, ಅವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ರೀಡಾ ಕ್ಷೇಮವನ್ನು ಅನುಷ್ಠಾನಗೊಳಿಸಿದ್ದೇವೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಕ್ರೀಡಾ ಪ್ರೋತ್ಸಾಹಕರಾಗಿರುವ ಡಾ.ಎಂ ಮೋಹನ್ ಆಳ್ವರು ಚಿಂತನೆಯಂತೆ ಒಲಿಂಪಿಕ್ಗೆ ಇಲ್ಲಿಂದ ಕ್ರೀಡಾಪಟುಗಳನ್ನು ಕಳುಹಿಸುವ ಪ್ರಯತ್ನಕ್ಕೆ ಪೂರಕವಾಗಿ ಕ್ರೀಡಾಪಟುಗಳ ಆರೋಗ್ಯ ಸುಸ್ಥಿತಿಗೆ ಕ್ಷೇಮವು ಪ್ರಯತ್ನ ಪಡಲಿದೆ. ಕ್ರೀಡಾಪಟುಗಳು ಯಾವ ರೀತಿಯಲ್ಲಿ ಕಾಳಜಿ ವಹಿಸಬೇಕು ಎಂಬುದರ ಕುರಿತು ಮಾರ್ಗದರ್ಶನವನ್ನೂ ಕ್ಷೇಮ ನೀಡಲಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ಕ್ರೀಡಾ ಅಭ್ಯಾಸ, ಕ್ರೀಡಾಕೂಟದ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ಆಗುವ ಗಾಯ, ಆರೋಗ್ಯದ ಏರುಪೇರಿನಿಂದಾಗಿ ಉತ್ತಮ ಸಾಧನೆಯು ಕೈತಪ್ಪು ಸಂಭವವಿರುತ್ತದೆ. ಅವರಿಗೆ ಸೂಕ್ತ ಜಾಗೃತಿ ಮೂಡಿಸುವುದರ ಜೊತೆಗೆ ಕ್ರೀಡಾಪಟುಗಳು ಸೂಕ್ತ ರೀತಿಯಲ್ಲಿ ಅವುಗಳನ್ನು ಅನುಷ್ಠಾನಗೊಳಿಸಿದರೆ ಕ್ರೀಡಾಕೂಟಗಳಲ್ಲಿ ಉನ್ನತ ಸಾಧನೆ ಸಾಧ್ಯ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕ್ರೀಡಾಕೂಟಕ್ಕೆ ನಿರಂತರವಾಗಿ ವಿಶೇಷ ಪ್ರೋತ್ಸಾಹವನ್ನು ನೀಡುತ್ತಿರುವುದರಿಂದ ಇಲ್ಲಿನ ಕ್ರೀಡಾಪಟುಗಳು ದೇಶಿಯ ಮಟ್ಟದ ಕ್ರೀಡಾಕೂಟಗಳಲ್ಲಿ ಮಾತ್ರವಲ್ಲ, ಒಲಿಂಪಿಕ್ ನಲ್ಲಿ ಭಾಗವಹಿಸಿ, ಅಲ್ಲೂ ಸಾಧನೆ ಮಾಡುವ ಮಟ್ಟಿಗೆ ಬೆಳೆದಿದ್ದಾರೆ. ಸುದೀರ್ಘವಾದ ಹೋರಾಟವಾಗಿರುವ ಕ್ರೀಡಾಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಿ, ನಮ್ಮ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲೂ ಯಶಸ್ವಿಯಾಗುವುದಕ್ಕೆ ಸಂಸ್ಥೆಯು ಶ್ರಮವಹಿಸುತ್ತಿದೆ ಎಂದರು.
ಕ್ಷೇಮ ಆರ್ಥೋ ವಿಭಾಗದ ಮುಖ್ಯಸ್ಥ ಡಾ.ಲಾರೆನ್ಸ್ ಮಾಥಸ್, ಕಾರ್ಯಕ್ರಮದ ಸಂಯೋಜಕ ಡಾ.ವಿಕ್ರಮ ಶೆಟ್ಟಿ, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ.ಕೆಂಪರಾಜ್ ಉಪಸ್ಥಿತರಿದ್ದರು. ಆಳ್ವಾಸ್ ನರ್ಸಿಂಗ್ ಕಾಲೇಜಿನ ಉಪನ್ಯಾಸಕ ಧೀರೇಂದ್ರ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ನವೀನ್ ಪಿ.ಡಿ, ಜಯಪ್ರಕಾಶ್, ತಿಲಕ್ ಶೆಟ್ಟಿ ಸಹಕರಿಸಿದರು. ಕ್ಷೇಮದ ಪ್ರಾಧ್ಯಾಪಕ ಡಾ.ಸಂತೋಷ್ ಪ್ರಭು, ಬೆಂಗಳೂರಿನ ನ್ಯೂಟ್ರಿಶಿಯನಿಸ್ಟ್ ಡಾ.ಶೋನಾ ಪ್ರಭು, ನಿಖಿಲ್ ಎನ್.ಪಿ, ಡಾ.ಸಿದ್ಧಾರ್ಥ ಶೆಟ್ಟಿ ವಿವಿಧ ವಿಷಯಗಳ ಕುರಿತು ಕ್ರೀಡಾಪಟುಗಳಿಗೆ ಮಾಹಿತಿ ನೀಡಿದರು.