ಮೂಡಬಿದಿರೆ: ಕನ್ನಡ ವಿಕಿಪೀಡಿಯಾದ ಸದೃಡತೆಗೆ ಪ್ರತಿಯೊಬ್ಬ ವ್ಯಕ್ತಿಯು ಕೊಡುಗೆಯನ್ನು ನೀಡಿ, ತಂತ್ರಜ್ಞಾನದೊಂದಿಗೆ ಕನ್ನಡ ಕಟ್ಟುವ ಕೆಲಸದಲ್ಲಿ ಪ್ರತಿಯೊಬ್ಬರು ತೊಡಗಬೇಕು ಎಂದು ಆಳ್ವಾಸ ಸ್ನಾತ್ತಕೋತ್ತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಪ್ರೋ ಶ್ರೀನಿವಾಸ ಪೆಜತ್ತಾಯ ತಿಳಿಸಿದರು.
ಆಳ್ವಾಸ್ ಪದವಿ ಕಾಲೇಜಿನ ಕನ್ನಡ ಸಂಘ ಶನಿವಾರ ಸೆಮಿನಾರ ಹಾಲ್ನಲ್ಲಿ ಏರ್ಪಡಿಸಿದ್ದ `ಕನ್ನಡ ವಿಕಿಪೀಡಿಯಾಕ್ಕೊಂದು ನಮ್ಮ ಕೊಡುಗೆ’ ಎಂಬ ವಿನೂತನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾನಾಡುತ್ತಿದ್ದರು.
ನಮ್ಮ ಪ್ರತಿ ದಿನದ ಬದುಕು ಯಾಂತ್ರಿಕವಾಗಿ ಸಾಗುತ್ತಿರುವ ಈ ಕಾಲಘಟ್ಟದಲ್ಲಿ, ಕನ್ನಡ ಭಾಷೆಯ ರಕ್ಷಣೆ ಹಾಗೂ ಅಭಿವೃದ್ಧಿಯ ನೆಲೆಗಟ್ಟಿನಲ್ಲಿ ತಂತ್ರಜ್ಞಾನದ ಬಳಕೆ ಬಹಳ ಅವಶ್ಯವಾಗಿದೆ ಎಂದರು. ಆಂಗ್ಲ ಭಾಷೆಯ ವಿಕಿಪೀಡಿಯಾಕ್ಕೆ ಕನ್ನಡ ಭಾಷೆಯ ವಿಕಿಪೀಡಿಯಾ ಹೋಲಿಸಿದರೆ ಕನ್ನಡದಲ್ಲಿ ಲಭ್ಯವಾಗುವ ಮಾಹಿತಿ ಅತ್ಯಲ್ಪವಾಗಿದ್ದು, ಅದನ್ನು ಉನ್ನತ್ತೀಕರಿಸುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು. ವಿದ್ಯಾರ್ಥಿ ಸಮುದಾಯದಲ್ಲಿ ಈ ಹಂತದಲ್ಲೇ ಅದರೆಡೆಗಿನ ಕಾಳಜಿ ಬಹಳ ಅವಶ್ಯ ಹಾಗೂ ಅನಿವಾರ್ಯ ಎಂದರು. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕನ್ನಡ ವಿಷಯಕ್ಕೆ ಕನ್ನಡ ವಿಕಿಪೀಡಿಯಾವನ್ನೇ ಅವಲಂಬಿತರಾಗುವಂತೆ ಮಾಡಿ, ಕನ್ನಡದ ಸಮೃದ್ಧತೆಯನ್ನು ಜಗದಗಲಾ ಪಸರಿಸಬೇಕು ಎಂದು ತಿಳಿಸಿದರು.
ಕನ್ನಡ ವಿಕಿಪೀಡಿಯಾದ ಖಾತೆಯನ್ನು ತೆರೆಯುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸಿದ ಅವರು, ವಿಷಯದ ಆಯ್ಕೆ, ಮಾಹಿತಿಗಳ ಜೋಡಣೆ, ಛಾಯಾಚಿತ್ರಗಳ ಆಳವಡಿಕೆ, ವಿಕಿಪೀಡಿಯಾ ಸಂಪಾದನೆಯ ಸುಲಭ ದಾರಿಯನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಕಾರ್ಯಕ್ರಮದಲ್ಲಿ ಆಳ್ವಾಸ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ ಮೌಲ್ಯ ಜೀವನ್ ರಾಂ, ಕನ್ನಡ ಸಂಘದ ಸಂಯೋಜಕರಾದ ಉಪನ್ಯಾಸಕ ಡಾ ಚಂದ್ರಶೇಖರ ಕರಬ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ದೇವಿಶ್ರೀ ಶೆಟ್ಟಿ, ಜಿಷ್ಣು ಮೆನನ್, ಪ್ರಸಾದ ಶೆಟ್ಟಿ ಉಪಸ್ಥಿತರಿದ್ದರು.