ಬಂಟ್ವಾಳ: ಕ್ಷುಲ್ಲಕ ಕಾರಣಕ್ಕೆ ಗುಂಪುಗಳೆರಡರ ನಡುವೆ ನಡೆದ ಹೊಡೆದಾಟದಿಂದ ಉಭಯ ಗುಂಪುಗಳ ಮೂವರು ಗಾಯಗೊಂಡ ಘಟನೆ ಸೋಮವಾರ ಸಂಜೆ ಕಲ್ಲಡ್ಕ ಸಮೀಪದ ಗೋಳ್ತಮಜಲಿನಲ್ಲಿ ನಡೆದಿದೆ.
ಗಾಯಾಳುಗಳನ್ನು ಕಾರಿನಲ್ಲಿದ್ದ ಜಗದೀಶ್ ಮತ್ತು ಸುನಿಲ್ ಹಾಗೂ ಪಿಕಪ್ ಚಾಲಕ ಅಬ್ಬಾಸ್ ಎಂದು ಗುರುತಿಸಲಾಗಿದೆ. ಗಾಯಾಳುಗಳ ಪೈಕಿ ಜಗದೀಶ್ ಹಾಗೂ ಸುನಿಲ್ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪಿಕಪ್ ಚಾಲಕ ಅಬ್ಬಾಸ್ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಲ್ಲಡ್ಕ ಸಮೀಪದ ಗೊಳ್ತಮಜಲುವಿನ ಬೋಳಂತೂರು ಕ್ರಾಸ್ ಎಂಬಲ್ಲಿ ಈ ಘಟನೆ ನಡೆದಿದ್ದು, ವಾಹನವೊಂದಕ್ಕೆ ಸೈಡ್ ಕೊಡುವ ಭರದಲ್ಲಿ ವಾಹನಗಳು ಪರಸ್ಪರ ತಾಗಿತ್ತು. ಈ ಬಗ್ಗೆ ನಡೆದ ಮಾತಿನ ಚಕಮಕಿ ತೀವ್ರಗೊಂಡು ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರು ಹಾಗೂ ಪಿಕಪ್ ಚಾಲಕನ ನಡುವೆ ವಾಗ್ಯುದ್ದ ಆರಂಭಗೊಂಡಿದ್ದು, ಪರಸ್ಪರ ಹೊಕೈ ವರೆಗೂ ಮುಂದುವರಿದಿತ್ತು, ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಉಭಯ ಕೋಮುಗಳ ಜನ ಜಮಾಯಿಸಿದ್ದು, ಹಲ್ಲೆ -ಪ್ರತಿಹಲ್ಲೆ ತೀವ್ರಗೊಂಡಿತು. ಬೆನ್ನಲ್ಲೇ ಪರಿಸರದಲ್ಲಿ ಆತಂಕದ ಸ್ಥಿತಿ ನಿರ್ಮಾಣಗೊಂಡಿದ್ದು, ಬಂಟ್ವಾಳ ನಗರ , ಗ್ರಾಮಾಂತರ ಹಾಗೂ ವಿಟ್ಲ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಎಸ್ಪಿ ಪರಿಶೀಲನೆ:
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಬೊರಸೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡಿವೈಎಸ್ಪಿ ರವೀಶ್ ಅವರಿಂದ ಮಾಹಿತಿಪಡೆದುಕೊಂಡಿದ್ದಾರೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಗದೀಶ್ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ನಗರ ಠಾಣಾಧಿಕಾರಿ ನಂದಕುಮಾರ್ ತಿಳಿಸಿದ್ದಾರೆ.