ಕಾಸರಗೋಡು: ಪ್ರಯಾಣ ದರ ಏರಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಖಾಸಗಿ ಬಸ್ಸು ಮಾಲಕರು ಕರೆ ನೀಡಿರುವ ಒಂದು ದಿನದ ಮುಷ್ಕರದಿಂದ ಗ್ರಾಮೀಣ ಪ್ರದೇಶದ ಪ್ರಯಾಣಿಕರಿಗೆ ಬಿಸಿ ತಟ್ಟಿದೆ.
ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಬಸ್ಸು ಇಲ್ಲದೆ ಖಾಸಗಿ ವಾಹನಗಳಲ್ಲಿ ದುಬಾರಿ ಹಣ ನೀಡಿ ತೆರಳಬೇಕಾದ ಸ್ಥಿತಿ ಉಂಟಾಯಿತು. ನಗರ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ಸು ಸಂಚರಿಸುವ ರೂಟುಗಳಲ್ಲಿ ಮುಷ್ಕರದ ಪರಿಣಾಮ ಬೀರಿಲ್ಲ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಬಸ್ಸುಗಳಿಲ್ಲದೆ ಪ್ರಯಾಣಿಕರು ಸಮಸ್ಯೆಗೆ ಸಿಲುಕಿದ್ದಾರೆ. ಆಟೋ, ಟ್ಯಾಕ್ಸಿ ಸೇರಿದಂತೆ ಇನ್ನಿತರ ವಾಹನಗಳಲ್ಲಿ ಪ್ರಯಾಣಿಸಬೇಕಾಯಿತು.
ಬಸ್ಸು ಮುಷ್ಕರದ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗಿತ್ತು. ಪ್ರಸ್ತುತ ಇರುವ ಖಾಸಗಿ ಬಸ್ಸು ಪರವಾನಗೆಯನ್ನು ರದ್ದುಗೊಳಿಸಬಾರದು, ವಿದ್ಯಾರ್ಥಿಗಳ ರಿಯಾಯಿತಿ ಸೇರಿದಂತೆ ಬಸ್ಸು ಪ್ರಯಾಣ ದರ ಏರಿಕೆ ಮಾಡಬೇಕು, ಕನಿಷ್ಠ ದರವನ್ನು 7 ರೂ.ನಿಂದ 9 ರೂ.ಗೆ ಹೆಚ್ಚಿಸಬೇಕು. ಹೆಚ್ಚಿಸಿದ ವಿಮಾ ಪ್ರೀಮಿಯಂ ಹಾಗೂ ರಸ್ತೆ ತೆರಿಗೆಯನ್ನು ಇಳಿಕೆ ಮಾಡಬೇಕು, ಖಾಸಗಿ ಬಸ್ಸುಗಳಿಗೆ ನೀಡಲಾಗುವ ಡೀಸೆಲ್ ನ ತೆರಿಗೆಯನ್ನು 24 ಶೇಕಡಾ ದಿಂದ 5 ಶೇಕಡಾ ಕ್ಕೆ ಇಳಿಸಬೇಕು, ಡೀಸೆಲ್ ಬೆಲೆ ನಿಯಂತ್ರಣ ವನ್ನು ಕೇಂದ್ರ ಸರಕಾರ ಕೈಗೆತ್ತಿಕೊಳ್ಳಬೇಕು. ಸಾರಿಗೆ ಕಚೇರಿಗಳಲ್ಲಿ ವಿವಿಧ ರೀತಿಯಲ್ಲಿ ಹಚ್ಚಿಸಿದ ಶುಲ್ಕವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಬೇಡಿಕೆ ಈಡೇರಿಸದಿದ್ದಲ್ಲಿ ಫೆಬ್ರವರಿ ಎರಡರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಂಘವು ಮುನ್ನೆಚ್ಚರಿಕೆ ನೀಡಿದೆ.