ಬಂಟ್ವಾಳ: ಮನೆಯವರನ್ನು ಕಟ್ಟಿ ಹಾಕಿ ನಿಧಿಗಾಗಿ ಶೋಧ ನಡೆಸಿದ ಘಟನೆ ತಾಲೂಕಿನ ಕರೋಪಾಡಿ ಗ್ರಾಮದ ಅರಸಳಿಕೆ ಎಂಬಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಅರಸಳಿಕೆ ನಿವಾಸಿ ವಿಘ್ನರಾಜ ಭಟ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಬೆಳಗಿನ ಜಾವ 2:30ರ ವೇಳೆಗೆ ಇನ್ನೋವ ಮತ್ತು ಮಾರುತಿ ಆಲ್ಟೊ ಕಾರಿನಲ್ಲಿ ಬಂದ 9 ಮಂದಿಯ ತಂಡ ಮನೆ ಬಾಗಿಳನ್ನು ಒಡೆದು ಒಳ ನುಗ್ಗಿದೆ.
ಮನೆಯಲ್ಲಿ ಮಲಗಿದ್ದ ವಿಘ್ನರಾಜ ಭಟ್ ಮತ್ತು ಅವರ ಅಳಿಯ ವಿವೇಕ್ ಭಟ್ ನ್ನು ಕಟ್ಟಿ ಹಾಕಿದ್ದ ತಂಡ ನಿಮ್ಮ ಜಾಗದಲ್ಲಿ ನಿಧಿ ಇರುವುದು ಎಲ್ಲಿ ಎಂದು ಕೇಳಿ ಹಿಂಸೆ ನೀಡಿದ್ದಾರೆ. ನಿಧಿ ಎಲ್ಲಿರುವುದು ಎಂಬುದು ನಮಗೆ ತಿಳಿದಿಲ್ಲ ಎಂದು ಅವರು ಹೇಳಿದರೂ ಕೇಳದ ತಂಡ ಮನೆಯ ಅಂಗಳದಲ್ಲಿ ಸಿಸಿ ಕೆಮರಾ ಅಳವಡಿಸಿದ್ದ ಜಾಗದಲ್ಲಿ ನಿಧಿಗಾಗಿ ಅಗೆದು ಬಳಿಕ ಬರಿಗೈಲಿ ತೆರಳಿದ್ದಾರೆ.
40 ವರ್ಷಗಳ ಹಿಂದೆ ವಿಘ್ನರಾಜ ಭಟ್ ತಂದೆ ಗಣಪತಿ ಭಟ್ ರಲ್ಲಿ ಸ್ವಾಮೀಜಿಯೊಬ್ಬರು ನಿಮ್ಮ ಜಮೀನಿನಲ್ಲಿ ನಿಧಿ ಇದ್ದು ಅದನ್ನು ಯಾವುದೇ ಕಾರಣಕ್ಕೂ ಹೊರ ತೆಗೆಯಬಾರದು ಎಂದು ಹೇಳಿದ್ದರು ಎನ್ನಲಾಗಿದೆ. ಈ ಸುದ್ದಿ ಪರಿಸರದಲ್ಲಿ ಹರಡಿದ್ದು, ಈ ವಿಚಾರ ತಿಳಿದವರೇ ಈ ಕೃತ್ಯವಸಗಿರಬಹುದೆಂದು ಶಂಕಿಸಲಾಗಿದೆ.
ಕೆಲತಿಂಗಳ ಹಿಂದೆ ಅನುಮಾನಾಸ್ಪದ ವ್ಯಕ್ತಿಗಳು ಈ ಮನೆಯ ಸುತ್ತಮುತ್ತ ಅಡ್ಡಾಡುತ್ತಿದ್ದು, ಅವರೇ ಈ ಕೃತ್ಯವೆಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನಿಸಿದ್ದಾರೆ. ಕೆಲ ತಿಂಗಳ ಹಿಂದೆ ನಾಯಿಯೊಂದನ್ನು ಹಿಡಿದುಕೊಂಡು ಬಂದಿದ್ದ ವ್ಯಕ್ತಿಯೋರ್ವ ಮನೆಯ ಸುತ್ತಮುತ್ತ ಸುತ್ತಾಡುತ್ತಿದ್ದು, ವಿಚಾರಿಸಿದಾಗ ನಿಧಿ ಇದೆ ಎಂದು ಉತ್ತರಿಸಿ, ಸ್ಥಳದಿಂದ ಕಾಲ್ಕಿತ್ತಿದ್ದ. ಆ ಬಳಿಕ ನೀರು ಕೇಳಲೆಂದು ಬಂದಿದ್ದ ವ್ಯಕ್ತಿಯೋರ್ವ ಮನೆಯ ಸುತ್ತಮುತ್ತಲಿನ ಜಮೀನನ್ನು ಪರಿಶೀಲಿಸಿದ್ದ, ಕೆಲ ದಿನಗಳ ಹಿಂದೆ ವಾಹನವೊಂದು ಕೆಟ್ಟು ಹೋಗಿದೆ ಎಂದು ಬಂದಿದ್ದ ತಂಡ ಈ ಮನೆಯಲ್ಲಿ ಕೆಲ ಸಮಯಗಳನ್ನು ಕಳೆದು ತೆರಳಿತ್ತು. ಈ ಮೂರು ಘಟನೆಗಳು ನಡೆದಾಗ ಮನೆ ಮಾಲಕ ವಿಘ್ನರಾಜ ಭಟ್ ಅವರು, ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು. ಅವರು ನೀಡಿದ ದೂರಿನ ಹಿನೆಲೆಯಲ್ಲಿ ಪೊಲೀಸರು ಮನೆಯ ಮುಂಭಾಗದಲ್ಲಿ ಸಿಸಿಕ್ಯಾಮೆರಾ ಅಳವಡಿಸಲು ಸೂಚಿಸಿದ್ದರು. ಇದೀಗ ಬಂದ ಆಗಂತುಕರು, ನಿಧಿ ಸಿಗದ ಹಿನ್ನೆಲೆಯಲ್ಲಿ ತೆರಳುವಾಗ ಸಿಸಿ ಕ್ಯಾಮೆರಾದ ಸಹಿತ ಪರಾರಿಯಾಗಿದ್ದು, ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಮನೆಮಂದಿಯ ಮೊಬೈಲ್ ನ ಸಿಮ್ ಅನ್ನೂ ಆರೋಪಿಗಳು ತೆಗೆದುಕೊಂಡು ಹೋಗಿದ್ದು, ದೂರದ ಮನೆಯೊಂದಕ್ಕೆ ಬಂದ ವಿಘ್ನರಾಜ ಭಟ್ ಅವರು, ವಿಟ್ಲ ಪೊಲೀಸರಿಗೆ ಕರೆ ಮಾಡಿ ಬೆಳಿಗ್ಗೆ 4.30 ರ ಸುಮಾರಿಗೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಘಟನೆ ಮಾಹಿತಿ ದೊರಕಿದ ತಕ್ಷಣ ವಿಟ್ಲ ಪಿಎಸ್ ಐ ನಾಗರಾಜ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸೂಕ್ತ ಬಂದೋಬಸ್ತ್ ಕೈಗೊಂಡರು. ಇನ್ನೋವಾ ಕಾರಿನಲ್ಲಿ ಬಂದಿದ್ದ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ ಬೊರಸೆ, ಬೆರಳಚ್ಚು ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.