ನಂಜನಗೂಡು: ಇಲ್ಲಿಗೆ ಸಮೀಪದ ಸುತ್ತೂರಿನಲ್ಲಿ ಮಂಗಳವಾರದಿಂದ ಆರಂಭಗೊಂಡಿರುವ ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಸಂತಸ ಸಡಗರದಿಂದ ನಡೆಯುತ್ತಿದ್ದು, ಸಾವಿರಾರು ಮಂದಿ ಭಕ್ತರು ಸೇರಿದಂತೆ ಪ್ರವಾಸಿಗರು, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ಕಳೆಕಟ್ಟುತ್ತಿದ್ದಾರೆ.
ಜಾತೆಯ ಅಂಗವಾಗಿ ಎರಡನೆಯ ದಿನವಾದ ಬುಧವಾರ ಸಾಮೂಹಿಕ ವಿವಾಹ ನಡೆಸಲಾಗಿದ್ದು, ಈ ವಿವಾಹಕ್ಕೆ ಸುಮಾರು 159 ಜೋಡಿಗಳು ಸಾಕ್ಷಿಯಾದರು. ಮೆರವಣಿಗೆಯೊಂದಿಗೆ ವಿವಾಹಮಂಟಪಕ್ಕೆ ಆಗಮಿಸಿದ ಆ ಕ್ಷಣಗಳು ಅದ್ಭುತವಾಗಿತ್ತಲ್ಲದೆ, ಶ್ವೇತ ವರ್ಣದಲ್ಲಿ ಕಂಗೊಳಿಸುತ್ತಿದ್ದ ವಧು-ವರರನ್ನು ನೋಡುತ್ತಿದ್ದಂತೆಯೇ ಕಣ್ಣು ತುಂಬಿ ಬರುತ್ತಿತ್ತು. ಶ್ರೀಕ್ಷೇತ್ರದಲ್ಲಿ ಪ್ರತಿ ತಿಂಗಳು ಸಾಮೂಹಿಕ ವಿವಾಹ ನಡೆಯುತ್ತದೆಯಾದರೂ ಜಾತ್ರೆ ಸಂದರ್ಭ ನಡೆಯುವ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ವಿಶೇಷ ಪ್ರಾಮುಖ್ಯತೆ ಇರುವುದನ್ನು ಕಾಣಬಹುದು.
ಸುತ್ತೂರು ಶ್ರೀಗಳು ಸೇರಿದಂತೆ ಹಲವು ಗಣ್ಯರು ಸಾಮೂಹಿಕ ವಿವಾಹದಲ್ಲಿ ಸತಿಪತಿಗಳಾದ ಜೋಡಿಗಳಿಗೆ ಆಶೀರ್ವದಿಸುವುದು ಹಿಂದಿನಿಂದಿಲೂ ನಡೆದು ಬಂದಿದೆ. ಮಠದ ಮೂಲಗಳ ಪ್ರಕಾರ ಇದುವರೆಗೆ ಸುಮಾರು 2038 ಜೋಡಿಗಳು ಸಪ್ತಪದಿ ತುಳಿದಿದ್ದಾರೆ. ಬುಧವಾರ ನಡೆದ ಸಾಮೂಹಿಕ ವಿವಾಹದಲ್ಲಿ ವೀರಶೈವ 13, ಹಿಂದುಳಿದ ವರ್ಗದ 40, ಪರಿಶಿಷ್ಟ ಜಾತಿಯ 96, ಪರಿಶಿಷ್ಟಪಂಗಡದ 10ಮಂದಿ, ಅಂತರ್ಜಾತಿ 7, ತಮಿಳುನಾಡು 5, ಕೇರಳ 1, ಅಂಗವಿಕಲ 3, ವಿಧವೆ-ವಿಧುರ-1 ಹೀಗೆ ಒಟ್ಟು 159 ಜೋಡಿಗಳು ಸಪ್ತಪದಿ ತುಳಿಯುವ ಮೂಲಕ ಸತಿಪತಿಗಳಾಗಿದ್ದಾರೆ. ಸಾಮೂಹಿಕ ವಿವಾಹದಲ್ಲಿ ವರನಿಗೆ ಪಂಚೆ, ಅಂಗಿ. ವಧುಗೆ ಸೀರೆ, ಕಾಲುಂಗುರ ಮತ್ತು ಮಾಂಗಲ್ಯ ಸರವನ್ನು ಮಠದ ವತಿಯಿಂದ ನೀಡಲಾಗಿದೆ.
ಸಾಮೂಹಿಕ ವಿವಾಹದಲ್ಲಿ ವಿವಿಧ ಮಠಗಳ ಮಠಾಧೀಶರು, ಜನಪ್ರತಿನಿಧಿಗಳು, ಉದ್ಯಮಿಗಳು ಭಾಗವಹಿಸಿ ವಧುವರರಿಗೆ ಆಶೀರ್ವದಿಸಿದ್ದು ವಿಶೇಷವಾಗಿತ್ತು. ಎಲ್ಲವೂ ವಧುವರರಿಗೆ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಆಶೀರ್ವದಿಸುತ್ತಿದ್ದ ದೃಶ್ಯ ಕಂಡು ಬಂತು.