ಸುಳ್ಯ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಗಣ ವೇಷಧಾರಿಗಳ ಆಕರ್ಷಕ ಪಥ ಸಂಚಲನ ಗುರುವಾರ ಸುಳ್ಯದಲ್ಲಿ ನಡೆಯಿತು. ಗಣವೇಷ ಬದಲಾದ ಬಳಿಕ ಸ್ವಯಂ ಸೇವಕರು ಪ್ಯಾಂಟ್ ಧರಿಸಿ ಸುಳ್ಯದಲ್ಲಿ ನಡೆದ ಪ್ರಥಮ ಪಥ ಸಂಚಲನದಲ್ಲಿ ಸಾವಿರಾರು ಮಂದಿ ಗಣವೇಷಧಾರಿಗಳು ಭಾಗವಹಿಸಿ ದಾಖಲೆ ಬರೆಯಿತು.
ಅಪರಾಹ್ನ 3.15ಕ್ಕೆ ಶಾಸ್ತ್ರಿ ವೃತ್ತದಿಂದ ಮತ್ತು ಅಮರಶ್ರೀ ಸಮುದಾಯ ಭವನದ ಬಳಿಯಿಂದ ಏಕ ಕಾಲದಲ್ಲಿ ಪಥ ಸಂಚಲನ ಆರಂಭಗೊಂಡಿತು. ಆಕರ್ಷಕ ಘೋಷಣೆ ತಾಳಕ್ಕೆ ಹೆಜ್ಜೆ ಹಾಕಿದ ಸಾವಿರಾರು ಮಂದಿ ಗಣ ವೇಷಧಾರಿಗಳು ಭಾಗವಹಿಸಿದ ಪಥ ಸಂಚಲನ ರಥಬೀದಿಯಲ್ಲಿ ಏಕ ಕಾಲಕ್ಕೆ ಜೊತೆ ಸೇರಿತು.
ಎರಡು ಕಡೆಯಿಂದ ಹರಿದು ಬಂದ ಗಣ ವೇಷಧಾರಿಗಳು ಒಟ್ಟಾಗಿ ರಥಬೀದಿಯಲ್ಲಿ ಮುಂದೆ ಸಾಗಿ ಕುರುಂಜಿಭಾಗ್ನ ಕೆವಿಜಿ ಮೈದಾನದಲ್ಲಿ ಸಂಗಮಿಸಿದರು. ಮಕ್ಕಳು ಹಿರಿಯರು ಭಾಗವಹಿಸಿದ ಪಥ ಸಂಚಲನ ಸ್ವಯಂ ಸೇವಕರ ಸಂಖ್ಯೆಯಲ್ಲಿ ದಾಖಲೆ ಬರೆಯಿತು.
ಇತ್ತೀಚಿನ ವರ್ಷಗಳಲ್ಲಿ ನಡೆದ ಅತೀ ದೊಡ್ಡ ಸಂಖ್ಯೆಯ ಪಥ ಸಂಚಲನವಾಗಿ ಇದು ಇತಿಹಾಸ ಬರೆಯಿತು. ಹೊಸ ಗಣವೇಷ ಧರಿಸಿ ಮಕ್ಕಳಿಂದ ಹಿಡಿದು ಹಿರಿಯರ ತನಕ ಉತ್ಸಾಹದಿಂದ ಸ್ವಯಂ ಸೇವಕರು ಪಥ ಸಂಚಲನದಲ್ಲಿ ಭಾಗವಹಿಸಿದರು. ಪಥ ಸಂಚಲನ ಸಾಗುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ನೂರಾರು ಮಂದಿ ಭಗವಾಧ್ವಜಕ್ಕೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.