ಬಂಟ್ವಾಳ: ದ್ವಿಚಕ್ರವೊಂದು ಢಿಕ್ಕಿ ಹೊಡೆದ ಪರಿಣಾಮ ಮುಡಿಪು ಇನ್ಫೋಸಿಸ್ ಸಂಸ್ಥೆಯ ಕಾವಲುಗಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಮೆಲ್ಕಾರ್ ಜಂಕ್ಷನ್ ಬಳಿ ನಡೆದಿದೆ.
ಕೊಡಗು ಜಿಲ್ಲೆಯ ವೀರಾಜಪೇಟೆ ನಿವಾಸಿ ಮೋಹನ್ ಮಂಜಪ್ಪ ರೈ(50) ಮೃತಪಟ್ಟವರಾಗಿದ್ದಾರೆ. ಇವರು ಹಲವು ಸಮಯದಿಂದ ತಾಲೂಕಿನ ಇರಾ ಗ್ರಾಮದ ಕುರಿಯಾಡಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದು ಮುಡಿಪುವಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಕಾವಲುಗಾರ ವಿಭಾಗದ ಉದ್ಯೋಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.ಶುಕ್ರವಾರ ತನ್ನಬಾವನೊಂದಿಗೆ ಉಪ್ಪಿನಂಗಡಿಗೆ ಸಂಬಂಧಿಕರೊಬ್ಬರ ಉತ್ತರಕ್ರಿಯೆಯಲ್ಲಿ ಪಾಲ್ಗೊಂಡು ವಾಪಸ್ ಇರಾಕ್ಕೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಮೆಲ್ಕಾರ್ ನಲ್ಲಿ ತನ್ನ ಕಾರು ನಿಲ್ಲಿಸಿ ಪೇಟೆಯಿಂದ ಸಾಮಾನು ಖರೀದಿಸಿ ತನ್ನ ಕಾರಿನತ್ತ ತೆರಳುದ್ದಾಗಿ ಮಾರ್ನಬೈಲ್ ಕಡೆಯಿಂದ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ದ್ವಿಚಕ್ರ ಸವಾರರು ಮೋಹನ್ ರೈ ಅವರಿಗೆ ಢಿಕ್ಕಿ ಹೊಡೆದಿದೆ ಎಂದು ಅವರ ಬಾವ ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ದ್ವಿಚಕ್ರ ವಾಹನ ಢಿಕ್ಕಿ ಹೊಡೆದ ಪರಿಣಾಮ ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡ ಮೋಹನ್ ರೈ ಅವರನ್ನು ಕೂಡಾಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು ಅದಾಗಲೇ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಲ್ಕಾರ್ ಜಂಕ್ಷನ್ ಇದೀಗ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು ಚತುಷ್ಪಥ ರೀತಿಯಲ್ಲಿ ರಸ್ತೆ ಕೂಡಾ ಅಗಲೀಕರಣಗೊಂಡಿದೆ. ಬಸ್ ಗಳ ನಿಲುಗಡೆಗೆ ಇಲ್ಲಿ ಬಸ್ ಸ್ಟ್ಯಾಂಡ್ ನಿರ್ಮಿಸಲಾಗಿದ್ದರೂ ಯಾವುದೇ ಬಸ್ ಗಳು ಇಲ್ಲಿ ನಿಲ್ಲದೆ ನಡುರಸ್ತೆಯಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿ ಇಳಿಸುತ್ತಿದೆ. ಇತರ ವಾಹನಗಳನ್ನು ಕೂಡಾ ರಸ್ತೆ ಬದಿಯಲ್ಲೇ ನಿಲ್ಲಿಸಲಾಗುತ್ತಿದೆ. ರಸ್ತೆ ಅಗಲೀಕರಣವಾದರೂ ಪಾರ್ಕಿಂಗ್ ವ್ಯವಸ್ಥೆ ಇನ್ನೂ ಸರಿಯಾಗದಿರುವುದರಿಂದ ವಾಹನ ದಟ್ಟನೆಯಿಂದಾಗಿ ಅಪಘಾತ ವಲಯವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.